ಹಾಸನ: ಹಾಸನ, ಮೈಸೂರು ಹಾಗೂ ಮಂಡ್ಯ, ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ (Rain News) ಮುಂದುವರಿದಿದೆ. ಬೆಳಗಾವಿಯಲ್ಲಿ ನಿರಂತರ ಮಳೆಯಿಂದಾಗಿ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಸರ್ಕಾರಿ ಶಾಲಾ ಕೊಠಡಿ ಕುಸಿದಿದೆ. ಮಂಡ್ಯದಲ್ಲಿ ನದಿ ತೀರದ ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಡನಾಯ್ಕನಹಳ್ಳಿ ಗ್ರಾಮದಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ನಾಶಗೊಂಡಿದೆ. ಎತ್ತಿನಹೊಳೆ ಕಾಮಗಾರಿಯ ಕಳಪೆ ಕಾಮಗಾರಿಯಿಂದ ಮಳೆ ನೀರು ಜಮೀನಿಗೆ ನುಗ್ಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಲುವೆಯಲ್ಲಿ ನೀರು ಹೋಗದೆ ಜಮೀನಿಗೆ ನುಗ್ಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ | Rain News | ಮಳೆ ಆರ್ಭಟ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ 4 ದಿನ ರೆಡ್ ಅಲರ್ಟ್, ಸಂಚಾರಕ್ಕೆ ಕಂಟಕ
ʻಎತ್ತಿನಹೊಳೆ ಕಾಮಗಾರಿ ಅಧಿಕಾರಿಗಳನ್ನು ಕೇಳಿದರೆ ಉಡಾಫೆಯಿಂದ ಉತ್ತರ ನೀಡುತ್ತಿದ್ದಾರೆ. ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಶುಂಠಿ ಬೆಳೆದಿದ್ದೇವೆ. ಹೊಲದಲ್ಲೀಗ ಸಂಪೂರ್ಣ ನೀರು ನಿಂತಿದ್ದರಿಂದ ಬೆಳೆ ನಾಶವಾಗುವಂತಾಗಿದೆ. ಜನಪ್ರತಿನಿಧಿಗಳು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಜಮೀನು ಮಾಲೀಕ ಶಿವಕುಮಾರ್ ಎಂಬುವರು ಮನವಿ ಮಾಡಿದರು.
ಹಲವೆಡೆ ಮನೆಗಳು ಕುಸಿತ
ಬೆಳಗಾವಿಯಲ್ಲಿ ನಿರಂತರ ಮಳೆಯಿಂದಾಗಿ 20ಕ್ಕೂ ಅಧಿಕ ಮನೆಗಳು ಮಳೆಗೆ ಧರೆಗುರುಳಿವೆ. ಕಿತ್ತೂರು ತಾಲೂಕಿನ ಹಲವೆಡೆ ಮನೆಗಳು ಕುಸಿತವಾಗಿವೆ. ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ, ಚಿಕ್ಕನಂದಿಹಳ್ಳಿ, ತಿಗಡೊಳ್ಳಿ ಮತ್ತು ಬೈಲೂರು ಗ್ರಾಮಗಳಲ್ಲಿ ಮನೆಗಳು ಕುಸಿದಿವೆ.
ಪಶ್ಚಿಮ ಘಟ್ಟದಲ್ಲಿರುವ ಖಾನಾಪುರ ತಾಲೂಕಿನಲ್ಲಿ ಗುರ್ಲಗುಂಜಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಶಾಲೆ ಕೊಠಡಿ ಕುಸಿದಿದೆ. ಶಾಲೆಗೆ ರಜೆಯಿದ್ದ ಕಾರಣ ಯಾವುದೇ ಅಪಾಯ ಆಗಿಲ್ಲ. ಸ್ಥಳಕ್ಕೆ ಖಾನಾಪುರ ತಾಲೂಕಿನ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ
ಮಂಡ್ಯದಲ್ಲಿ ಮಳೆಯಿಂದಾಗಿ KRS ಡ್ಯಾಂನಿಂದ 72,964 ಕ್ಯೂಸೆಕ್ ನೀರು ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಅಪಾಯ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿದೆ. ನದಿಯ ಇಕ್ಕೆಲಗಳ ಜಮೀನುಗಳು ಜಲಾವೃತಗೊಂಡಿದ್ದು, ಪ್ರವಾಸಿ ತಾಣಗಳು ಮುಳುಗುವ ಭೀತಿಯಲ್ಲಿವೆ. ನದಿ ತೀರದ ಪ್ರವಾಸಿ ತಾಣಗಳಲ್ಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನದಿ ಹತ್ತಿರಕ್ಕೆ ಪ್ರವಾಸಿಗರು ತೆರಳದಂತೆ ನಿಮಿಷಾಂಬ ದೇವಾಲಯ, ಸ್ನಾನಘಟ್ಟ ಮತ್ತು ಸಂಗಮದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಮೈಸೂರಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಿದೆ. ಜಿಲ್ಲೆಯಲ್ಲಿ 837.2 ಮಿ.ಮೀನಷ್ಟು ಮಳೆ ಆಗಿದೆ. ಕೆ. ಆರ್ ನಗರ ತಾಲೂಕಿನಲ್ಲಿ ಹೆಚ್ಚು ಮಳೆ ಆಗಿದೆ.
ಮಳೆ ಕುರಿತ ಇಂದಿನ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
1. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ
2. Rain News | ಜೋಯಿಡಾದ ಅಣಶಿ ಘಟ್ಟದಲ್ಲಿ ಮತ್ತೆ ಭೂಕುಸಿತ, ಪರ್ಯಾಯ ಮಾರ್ಗ ಬಳಸಲು ಸೂಚನೆ
3. Rain News | ಹಾಸನದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂಕುಸಿತ; ವಾಹನ ಸಂಚಾರಕ್ಕೆ ಅಡಚಣೆ
4. Rain News | ಕಿತ್ತೂರು ತಾಲೂಕಿನಲ್ಲಿ ಮಳೆ ಹಾನಿಗೊಳಪಟ್ಟ ಮನೆಗಳ ಸಂಖ್ಯೆ 30ಕ್ಕೇರಿಕೆ