ಬೆಂಗಳೂರು: ಕಳೆದ ಎರಡು ದಿನಗಳಿಂದ ನಾಡಿನಲ್ಲಿ ನಿಲ್ಲದೆ ಮಳೆಯಾಗುತ್ತಿದ್ದು, ಜನ ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ. ಹಲವೆಡೆ ರಸ್ತೆಗಳು ಕೊಚ್ಚಿಹೋಗಿವೆ. ಮನೆಗಳಲ್ಲಿ ನೀರು ತುಂಬಿವೆ. ವಾಹನಗಳು ಮುಳುಗಿವೆ. ಹೊಲಗದ್ದೆಗಳಲ್ಲಿ ನೀರು ತುಂಬಿ ಬೆಳೆ ಹಾಳಾಗಿದೆ. ಭೂಕುಸಿತವೂ ಸಂಭವಿಸಿದೆ.
ಚಿಕ್ಕಬಳ್ಳಾಪುರದಲ್ಲಿ ನಗರವೇ ಕೆರೆ
ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಇಡೀ ನಗರವೇ ಕೆರೆಯಂತಾಗಿದೆ. ಜಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಲಾಗದೆ ಪ್ರಯಾಣಿಕರು ಪರದಾಡಿದ್ದಾರೆ. ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ನಗರದ ಮಂಚನಬಲೆ ಅಂಡರ್‌ಪಾಸ್, ನಗರದ ನೂತನ ಮಹಿಳಾ ಪದವಿ ಕಾಲೇಜು ಕಟ್ಟಡಗಳೆಲ್ಲ ಜಲಾವೃತವಾಗಿವೆ. ಚರಂಡಿಗಳಲ್ಲಿ ಸರಾಗವಾಗಿ ಹರಿಯದೇ ರಸ್ತೆಗೆ ನೀರು ನುಗ್ಗಿದ್ದು, ನಗರಸಭೆ ಆಡಳಿತ ವೈಖರಿಗೆ ಚಿಕ್ಕಬಳ್ಳಾಪುರ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.
ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಕೋಡಿ ಒಡೆದಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ಗುಡಿಬಂಡೆ ಮಾರ್ಗ ಬಂದ್ ಆಗಿದೆ. ಯಾವುದೇ ವಾಹನಗಳು ಸಂಚರಿಸದಂತೆ ತಾಲ್ಲೂಕು ಆಡಳಿತ ಎಚ್ಚರಿಕೆ ನೀಡಿದೆ. ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ನದಿ ಕಾಲುವೆಗಳು ತುಂಬಿದ್ದು, ಲಕ್ಕೇನಹಳ್ಳಿ ಗ್ರಾಮದ ಬಳಿ ಅಪಾಯ ಮಟ್ಟ ಮೀರಿ ಉಷಾವತಿ ನದಿ ಹರಿಯುತ್ತಿದೆ. ಗುಡಿಬಂಡೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಜಲದಿಗ್ಭಂದನ ಉಂಟಾಗಿದೆ.
ಮಂಡ್ಯದಲ್ಲಿ ಕೊಚ್ಚಿಹೋದ ಮಧ್ವವನ
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಿಂಷಾ ನದಿ ಭೋರ್ಗರೆದು ಹರಿಯುತ್ತಿದ್ದು, ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗವಿರುವ ಮಧ್ವವನ ಕೊಚ್ಚಿಕೊಂಡು ಹೋಗಿದೆ. ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿಂಷಾ ತುಂಬಿ ಹರಿಯುತ್ತಿದೆ. ಹೊಳೆಆಂಜನೇಯಸ್ವಾಮಿ ದೇವಸ್ಥಾನದ ಮಧ್ವವನ ನದಿಗೆ ಹೊಂದಿಕೊಂಡಂತಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಮತ್ತಷ್ಟು ಭಾಗ ಕುಸಿಯುವ ಭೀತಿಯಲ್ಲಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಅಗಸೇಗೌಡನಕೊಪ್ಪಲಿನಲ್ಲಿ ಧಾರಾಕಾರ ಮಳೆಯಿಂದ ಟೊಳ್ಳಿ ಕೆರೆ ಭರ್ತಿಯಾಗಿದ್ದು, ಟೊಳ್ಳಿಕೆರೆಯಿಂದ ಬರುತ್ತಿರುವ ಅಪಾರ ಪ್ರಮಾಣದ ನೀರಿನಲ್ಲಿ ಅಗಸೇಗೌಡನಕೊಪ್ಪಲು – ಮೈಲಾರಪಟ್ಟಣ ರಸ್ತೆ ಕೊಚ್ಚಿ ಹೋಗಿದೆ. ಕೆರೆ ನೀರಿನಿಂದ ಜಮೀನು ಜಲಾವೃತವಾಗಿದೆ.
ಇದನೂ ಓದಿ | Rain News | ಹವಾಮಾನ ಇಲಾಖೆ ಎಚ್ಚರಿಕೆ, ಮಂಗಳವಾರ ಬೆಳಗ್ಗೆಯೂ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಪಾವಗಡ ಗಡಗಡ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿತ್ತಗಾನಹಳ್ಳಿಯ ಸುತ್ತಮುತ್ತಲಿನ ಐದಾರು ಗ್ರಾಮಗಳು ಜಲದಿಗ್ಭಂದನಕ್ಕೊಳಗಾಗಿವೆ. ಮಳೆ ನೀರು ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳೇ ಸಂಪೂರ್ಣ ನಾಶವಾಗಿವೆ. ಚಿತ್ತಗಾನಹಳ್ಳಿ, ದ್ಯಾವಯ್ಯನಪಾಳ್ಯ, ಹನುಮಯ್ಯನಪಾಳ್ಯ, ಹೊನ್ನಮೇಡಿ, ಕನ್ನಮೆಡಿ ಗ್ರಾಮಗಳಿಗೆ ಹೋಗುವ ರಸ್ತೆಗಳು ಕೊಚ್ಚಿಹೋಗಿವೆ. ಒಂದು ಕಡೆಯಿಂದ ಮತ್ತೊಂದೆಡೆ ಸಂಚರಿಸಲು ಗ್ರಾಮಸ್ಥರು ಹರಸಾಹಸಪಡುತ್ತಿದ್ದಾರೆ.
ರಾಮನಗರದಲ್ಲಿ ಮುಂದುವರಿದ ಮಳೆ
ಗುಡುಗು, ಮಿಂಚು ಸಮೇತ ಸೋಮವಾರ ರಾತ್ರಿ ಸಹ ರಾಮನಗರದಲ್ಲಿ ಮಳೆಯಾಗಿದ್ದು, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ನೆಲಮಟ್ಟದಲ್ಲಿ ನೀರು ನಿಂತಿದೆ. ಇಲ್ಲಿ ಸೋಮವಾರ ವಾಹನಗಳು ಮುಳುಗಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಸದ್ಯ ರಾಮನಗರ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ದೊಡ್ಡಗಂಗವಾಡಿ- ರಾಮನಗರ ಕಲ್ಪಿಸುವ ಗ್ರಾಮದ ರಸ್ತೆಯ ಪಕ್ಕದಲ್ಲಿ ಭೂಕುಸಿತ ಉಂಟಾಗಿದೆ.
ಇದನ್ನೂ ಓದಿ | Rain news | ಸತತ ಮಳೆಯಾದರೆ ಬೆಂಗಳೂರಿನ ಈ ಏರಿಯಾಗಳು ಮುಳುಗಲಿವೆ, ಎಚ್ಚರ