ಕೊಪ್ಪಳ: ಇಲ್ಲಿನ ಕೋಳೂರ ಬಳಿ ಮಂಗಳವಾರ ಭಾರಿ ಮಳೆಯಾಗುತ್ತಿದ್ದು, (Rain news) ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ಕಾಟ್ರಳ್ಳಿ – ಕೋಳೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನೀರಿನಿಂದ ಮುಳುಗಡೆಯಾಗಿದೆ. ನೀರಿನ ಮಧ್ಯೆಯೇ ಚಾಲಕನೊಬ್ಬ ಶ್ರಮಿಕ ಸಂಜೀವಿನಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಮಾರ್ಗ ಮಧ್ಯೆ ಬಂದ್ ಆಗಿದೆ.
ರಸ್ತೆ ಮಧ್ಯೆ ಸಿಲುಕಿದ ಕಾರ್ಮಿಕ ಇಲಾಖೆ ವ್ಯಾಪ್ತಿಯ ಶ್ರಮಿಕ ಸಂಜೀವಿನಿ ವಾಹನವನ್ನು ಹೊರತಗೆಯಲು ಸ್ಥಳೀಯರು ಹರಸಾಹಸ ಪಟ್ಟು ಮೇಲಕ್ಕೆ ಎತ್ತಿದರು.
ನಿರಂತರ ಮಳೆ ಶಾಲಾ-ಕಾಲೇಜುಗಳಿಗೆ ರಜೆ
ಬೆಳಿಗ್ಗೆಯಿಂದಲೂ ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಮಾಡಿದ್ದಾರೆ.
ನಾಟಿ ಮಾಡಿದ್ದ ಬೆಳೆ ನೀರುಪಾಲು
ನಿರಂತರ ಮಳೆಯಿಂದಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪೂರ ಭಾಗದಲ್ಲಿ ನಾಟಿ ಮಾಡಿದ್ದ ಭತ್ತ ನೀರುಪಾಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ರೈತರು ನಾಟಿ ಮಾಡಿದ್ದು, ಈಗ ನೀರುಪಾಲಾಗಿ ನಷ್ಟ ಅನುಭವಿಸುವಂತಾಗಿದೆ.