Site icon Vistara News

Rain News| ವರುಣನಿಗೆ ಅಲ್ಪ ವಿರಾಮ, ಭಾನುವಾರದವರೆಗೆ ಮಳೆ ಅಬ್ಬರ ಇರಲಿಕ್ಕಿಲ್ಲ

male

ಬೆಂಗಳೂರು: ರಾಜ್ಯದಲ್ಲಿ ಬುಧವಾರ ವರುಣನ ಅಬ್ಬರ ಸ್ವಲ್ಪ ಕಡಿಮೆ ಇತ್ತು. ಆದರೆ, ಮಹಾರಾಷ್ಟ್ರದ ಮಳೆ ಅಬ್ಬರ, ಅಲ್ಲಿಂದ ಹರಿದುಬರುತ್ತಿರುವ ಜಲರಾಶಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜತೆಗೆ ಮಳೆಯಿಂದಾಗಿ ಜರ್ಜರಿತಗೊಂಡ ಗುಡ್ಡಗಳು, ಮನೆಗಳು ಕುಸಿಯುವ ವಿದ್ಯಮಾನಗಳು ನಡೆಯುತ್ತಲೇ ಇವೆ. ಆದರೂ ಕಳೆದ ಹಲವು ವಾರಗಳಿಂದ ಅಬ್ಬರಿಸುತ್ತಿರುವ ವರುಣನ ಪ್ರತಾಪ ಕಡಿಮೆ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ನಿರಾಳತೆ ಕಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಬುಧವಾರ ಸೂರ್ಯನ ದರ್ಶನದ ಜತೆಗೆ ಬಿಸಿಲೂ ಕಂಡಿದೆ. ಇನ್ನಷ್ಟು ಸಮಾಧಾನದ ಸಂಗತಿ ಎಂದರೆ, ಮುಂದಿನ ಭಾನುವಾರದವರೆಗೆ ಮಳೆ ಅಬ್ಬರ ಅಷ್ಟು ಜೋರಾಗಿ ಇರಲಿಕ್ಕಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಹೇಗಿತ್ತು ಮಂಗಳವಾರದ ಮಳೆ?
ಬುಧವಾರ ಮುಂಜಾನೆವರೆಗೆ ಅನ್ವಯವಾಗುವಂತೆ ಕಳೆದ 24 ಗಂಟೆ ಅವಧಿಯಲ್ಲಿ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ, ಕಾಸಲ್ ರಾಕ್, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 19 ಸೆಂ.ಮೀ. ಮಳೆ ಆಗಿತ್ತು. ಶಿವಮೊಗ್ಗದ ಹುಂಚದ ಕಟ್ಟೆ 13, ಚಿಕ್ಕಮಗಳೂರಿನ ಕಳಸ 12, ಲಿಂಗನಮಕ್ಕಿ 11 ಸೆಂ ಮೀ. ಮಳೆ ಆಗಿದೆ.

ಆದರೂ ಸಮುದ್ರದ ಬದಿ ಹುಷಾರು
ಮಳೆ ಕಡಿಮೆಯಾಗಲಿದೆ ಎಂದ ಮಾತ್ರಕ್ಕೆ ಎಲ್ಲವೂ ಸರಾಗವಾಗಿದೆ ಎಂದರ್ಥವಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಭಾಗದಲ್ಲಿ ೬೦ ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಕರಾವಳಿಯುದ್ದಕ್ಕೂ ಇಂದು ರಾತ್ರಿವರೆಗೆ 3.5ರಿಂದ– 4.7 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ.

ಹೇಗಿರಲಿದೆ ಬೆಂಗಳೂರು ವೆದರ್‌?
ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಸಾಧಾರಣ ಮಳೆ ಬೀಳಬಹುದು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

Exit mobile version