ಕೊಡಗು: ಜಿಲ್ಲೆ ಸೇರಿ ಹಲವು ಕಡೆ ಭಾರಿ ಮಳೆ ಮುಂದುವರಿದಿದ್ದು, ಸುಂಟಿಕೊಪ್ಪ ಸಮೀಪದ ಗಿರಿಯಪ್ಪ ಬಡಾಣೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ ಆಗಿದೆ. ಖದೀಜ ಎಂಬುವರಿಗೆ ಸೇರಿದ ಮನೆ ಆಗಿದ್ದು ಮನೆಯಲ್ಲಿದ್ದವರು ಸಣ್ಣ ಪುಟ್ಟಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪಂಚಾಯಿತಿ ಸದಸ್ಯರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಸಚಿವರಿಂದ ಜಂಟಿ ಭೇಟಿ
ಜಿಲ್ಲೆಯಲ್ಲಿ ಮಳೆ, ಭೂಕಂಪನ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಮತ್ತು ಮೀನುಗಾರಿಕಾ ಸಚಿವ ಅಂಗಾರ ಅವರು ಗುರುವಾರ (ಜು.೭) ಭೇಟಿ ನೀಡಲಿದ್ದಾರೆ. ಭೂ ಕುಸಿತ ಉಂಟಾಗಿರುವ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಮಡಿಕೇರಿ-ಮಂಗಳೂರು ರಸ್ತೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಬಳಿಕ ಭೂ ಕಂಪನ ಪೀಡಿತ ಚೆಂಬು ಗ್ರಾಮಕ್ಕೆ ತೆರಳಲಿದ್ದಾರೆ. ಜಿಲ್ಲೆಗೆ ಆಗಮಿಸಿರುವ ವಿಜ್ಞಾನಿಗಳ ತಂಡ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಭೂಕಂಪನ ಪೀಡಿತ ಪ್ರದೇಶಗಳ ಜನರ ಜತೆ ಮಾತುಕತೆ ನಡೆಸಲಿದ್ದಾರೆ. ಮುಂದುವರಿದ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ | Rain News | ಶಿವಮೊಗ್ಗದಲ್ಲಿ ಮಳೆ ಅಬ್ಬರ: ಆಗುಂಬೆ ಘಾಟ್‌ನಲ್ಲಿ ಗುಡ್ಡ ಕುಸಿತ, ಸಾಗರದಲ್ಲಿ ಸೀಳು ಬಿಟ್ಟ ಭೂಮಿ
ಹಾಸನದಲ್ಲಿ ಭಾರೀ ಮಳೆ
ಹಾಸನ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು ಸಕಲೇಶಪುರ, ಆಲೂರು, ಅರಕಲಗೂಡಿನಲ್ಲಿ ಭಾರಿ ಮಳೆ ಆಗಿದೆ. ಗುರುವಾರ (ಜು.೭) ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ರಜೆ ಘೋಷಿಸಿದ್ದಾರೆ. ಹೇಮಾವತಿ ನದಿಗೆ ಒಳಹರಿವಿನಲ್ಲಿ ಭಾರಿ ಹೆಚ್ಚಳ ಕಂಡಿದ್ದು, ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ ಇದೆ.ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ ಹೆಚ್ಚಳ ಆಗಿದೆ.
ಇನ್ನೂ ಪತ್ತೆಯಾಗದ ಬಾಲಕಿ
ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸುಪ್ರೀತಾ ನಿರಂತರ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ. ಬುಧವಾರ(ಜು.೬)ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ ಶೋಧಕಾರ್ಯ ನಡೆಸಿತ್ತು. ಮಲ್ಪೆಯ ಮುಳುಗು ತಜ್ಞರಿಂದ ಹಾಗೂ 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ನಿರಂತರ ಶೋಧ ಕಾರ್ಯ ಆಗಿತ್ತು. 50 ಗಂಟೆಯಿಂದ ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಿಲ್ಲ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಬೃಹತ್ ಮರ ಮಣ್ಣಿನ ರಾಶಿ ಸಮೇತ ಬಿದ್ದಿದೆ. ಮಾಗುಂಡಿಯಿಂದ ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆ ಆಗುತ್ತಿದ್ದು, ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಧಾರಾಕಾರ ಮಳೆ ಆಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮತ್ತು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿಯಲ್ಲಿ ಆರೇಂಜ್ ಅಲರ್ಟ್
ಕಾರವಾರ: ಕರಾವಳಿಯಲ್ಲಿ ಗುರುವಾರ (ಜು.೭) ಮತ್ತು ಶುಕ್ರವಾರ (ಜು.೮) ಆರೇಂಜ್ ಅಲರ್ಟ್ ಘೋಷಿಸಿದೆ. ಕಾರವಾರ ನಗರದಲ್ಲಿ ವರುಣ ಅಬ್ಬರಿಸುತ್ತಿದ್ದು, ಎರಡು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಭಾರಿ ಪ್ರಮಾಣದಲ್ಲಿ ಗಾಳಿ ಸಹಿತ ಮಳೆಯಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಗುರುವಾರ (ಜು.೭) ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಇದನ್ನೂ ಓದಿ | Weather Report: ಕರಾವಳಿ ಭಾಗಕ್ಕೆ ಮಳೆಯ ರಿಲೀಫ್: ಕೆಲವು ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ