ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ. ಮುಧೋಳ ಸುತ್ತಮುತ್ತ ಶುಕ್ರವಾರ ಗುಡುಗು-ಮಿಂಚು ಸಮೇತ ಭಾರಿ ಮಳೆ (Rain News) ಸುರಿದಿದ್ದು, ಹೊಲದಿಂದ ಮನೆಗೆ ತೆರಳುತ್ತಿದ್ದ ವೇಳೆ ಸಿಡಿಲು ಬಡಿದು ಯುವತಿ ಕೊನೆಯುಸಿರೆಳೆದಿದ್ದಾಳೆ.
ಮಲ್ಲಾಪುರ ಗ್ರಾಮದ ಭಾಗ್ಯಶ್ರೀ (16) ಸಿಡಿಲಿಗೆ ಬಲಿಯಾದ ಬಾಲಕಿ. ಹೊಲದಿಂದ ಮನೆಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದ್ದು, ಸ್ಥಳಕ್ಕೆ ಲೋಕಾಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಪುರದ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಆಸ್ಪತ್ರೆಗೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ, ಮೃತ ಭಾಗ್ಯಶ್ರೀ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | SubAir facility: ಸಬ್ ಏರ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?
ಶಹಾಪುರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ಶುಕ್ರವಾರ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯಿತು. ವರುಣನ ಆಗಮನದಿಂದ ರೈತಾಪಿ ವರ್ಗದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಚನ್ನರಾಯಪಟ್ಟಣದಲ್ಲಿ ರಸ್ತೆಗಳು ಜಲಾವೃತ, ತಹಸೀಲ್ದಾರ್ ಕಚೇರಿಗೆ ನುಗ್ಗಿದ ನೀರು
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಸೇರಿ ವಿವಿಧೆಡೆ ವರುಣ ಆರ್ಭಟಿಸಿದ್ದಾನೆ. ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚನ್ನರಾಯಪಟ್ಟಣದಲ್ಲಿ ಸತತ ಒಂದು ಗಂಟೆ ಸುರಿದ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದವು. ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಈ ವೇಳೆ ಕೆಲ ಅಂಗಡಿ ಮಳಿಗೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಇನ್ನು ಹೊಳೆನರಸೀಪುರ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ತಹಸೀಲ್ದಾರ್ ಕಚೇರಿಗೆ ಮಳೆ ನೀರು ನುಗ್ಗಿದ್ದರಿಂದ ರೆಕಾರ್ಡ್ ರೂಂನಿಂದ ನೀರು ಹೊರ ಹಾಕಲು ಸಿಬ್ಬಂದಿ ಪರದಾಡಿದರು.
ಇದನ್ನೂ ಓದಿ | Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಜಲಾವೃತ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದೆ. ಬಿಡುವು ನೀಡದೆ ಸುರಿದ ಮಳೆಯಿಂದ
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿತ್ತು. ಇದರಿಂದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ವಾಹನ ಸವಾರರ ಪರದಾಡಿದರು. ಮತ್ತೊಂದೆಡೆ ಮಳೆ ನೀರಿನಿಂದ ಕೃಷಿ ಜಮೀನುಗಳು ಆವೃತವಾಗಿವೆ. ಬೇಗೂರು, ಬೆಳಚಲವಾಡಿ, ತೆರಕಣಾಂಬಿ ಸುತ್ತಮುತ್ತ ಭರ್ಜರಿ ಮಳೆ ಸುರಿದಿದೆ.