ಬಾಗಲಕೋಟೆ/ಬಾಗಲಕೋಟೆ: ರಾಜ್ಯದ ವಿವಿಧೆಡೆ ಭಾನುವಾರವೂ ಭರ್ಜರಿ ಮಳೆ ಸುರಿದಿದೆ. ಇದರಿಂದ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನಲ್ಲಿ ನಡೆದಿದೆ. ಇನ್ನು ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ.
ಸಿಡಿಲು ಬಡಿದು ಬಾಲಕ ಸಾವು
ಬಾಗಲಕೋಟೆ: ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರು ಸಮೀಪ ನಡೆದಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೊನ್ಯಾಳ ನಿವಾಸಿ ಪ್ರಕಾಶ್ ವಗ್ಗರ್ (17) ಮೃತ.
ನಾಲ್ಕೈದು ದಿನಗಳ ಹಿಂದೆ ಬೇವೂರಿನ ಸಂಬಂಧಿಕರ ಮನೆಗೆ ಬಾಲಕ ಬಂದಿದ್ದ. ಬಾಗಲಕೋಟೆಯಿಂದ ಬೇವೂರು ಗ್ರಾಮಕ್ಕೆ ಭಾನುವಾರ ಬೈಕ್ ಮೇಲೆ ಹೊರಟಿದ್ದಾಗ ಮಳೆ ಬಂತೆಂದು ಹಳ್ಳೂರು ಸಮೀಪ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಈ ವೇಳೆ ಬಾಲಕ ಮೃತಪಟ್ಟಿದ್ದು, ಆತನ ಜೊತೆಗಿದ್ದ ಶ್ರೀಶೈಲ್ ಬನ್ನೆಪ್ಪನವರ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು
ಬೆಳಗಾವಿ: ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ ಘಟನೆ ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ನಡೆದಿದೆ. ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಗ್ರಾಮದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ಶಾಸಕ ಅಭಯ ಪಾಟೀಲ ವಿರುದ್ಧ ಸ್ಥಳೀಯ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷಗಳಿಂದ ಚರಂಡಿ ಸರಿಪಡಿಸಿಲ್ಲ, ಹೀಗಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಸತತ ಗಂಟೆ ಕಾಲ ಸುರಿದ ಭಾರಿ ಮಳೆಗೆ ಜನರು ಕಂಗಾಲಾಗಿದ್ದಾರೆ.
ಇದನ್ನೂ ಓದಿ | Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು
ಸಿಡಿಲಿನ ಹೊಡೆತಕ್ಕೆ ಧಗ ಧಗಿಸಿದ ತೆಂಗಿನಮರ
ಸಿಡಿಲಿನ ಹೊಡೆತಕ್ಕೆ ತೆಂಗಿನಮರ ಹೊತ್ತಿ ಉರಿದ ಘಟನೆ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವೆಂಕಟೇಶ್ವರ್ ನಗರದಲ್ಲಿ ನಡೆದಿದೆ. ಮಂಜುನಾಥ್ ಪಾಟೀಲ್ ಎಂಬುವವರ ತೆಂಗಿನಮರಕ್ಕೆ ಸಿಡಿಲು ಬಡಿದಿದೆ. ತೆಂಗಿನಮರ ಧಗ ಧಗಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.