ಬೆಂಗಳೂರು: ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ (Weather Report) ಇಲ್ಲ. ಸೆಪ್ಟೆಂಬರ್‌ನಲ್ಲೂ ವಾಡಿಕೆಗಿಂತ ಮಳೆ (Rain News) ಕಡಿಮೆ ಆಗಬಹುದು. ಮಳೆ ಕೊರತೆ (Lack of rain) ಹೀಗೆಯೇ ಮುಂದುವರಿದರೆ ಎಲ್ಲದಕ್ಕೂ ನಾವು ಸನ್ನದ್ಧವಾಗಬೇಕಾಗುತ್ತದೆ. ಬರ ಘೋಷಣೆಗೆ ಮನವಿ (Request for declaration of drought) ಇದ್ದು, ಇದರ ಮಾನದಂಡಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಹೇಳಿದರು.
ಪ್ರಕೃತಿ ವಿಕೋಪ ಪರಿಸ್ಥಿತಿ ಪರಾಮರ್ಶೆ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆಗಸ್ಟ್‌ನಲ್ಲಿ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದ್ದೇವೆ. ಮೇವಿನ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದೇವೆ. ಬಿತ್ತನೆ ಬೆಳೆಗಳೂ ಒಣಗುತ್ತಿರುವುದರಿಂದ ಕ್ರಮ ತೆಗೆದುಕೊಳ್ಳಬೇಕಿದೆ. ಮಳೆ ಕೊರತೆ ಹೀಗೆಯೇ ಮುಂದುವರಿದರೆ ಎಲ್ಲದಕ್ಕೂ ನಾವು ಸನ್ನದ್ಧವಾಗಬೇಕಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
7 ತಿಂಗಳಿಗಾಗುವಷ್ಟು ಮೇವು ಸಂಗ್ರಹ ಇದೆ
ಕುಡಿಯುವ ನೀರಿಗೆ ಅಂತಹ ಸಮಸ್ಯೆ ಏನಿಲ್ಲ. 140ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಮೇವು ಸಂಗ್ರಹದ ಸ್ಥಿತಿ ಕೂಡ 15-30 ವಾರಗಳಿಗೆ (7 ತಿಂಗಳು) ಆಗುವಷ್ಟು ಸಂಗ್ರಹ ಇದೆ. ಆಲಮಟ್ಟಿ ಜಲಾಶಯ ಶೇಕಡಾ 100ರಷ್ಟು ಭರ್ತಿ ಆಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬರ ಘೋಷಣೆಗೆ ಮುಂಚೆ ಬೆಳೆ ಸಮೀಕ್ಷೆ
ಬರ ಘೋಷಣೆ ಆಗಬೇಕು ಎಂಬ ಮನವಿ ಕೂಡ ಇದೆ. ಈ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಹಿತಿ ಪಡೆದುಕೊಂಡಿದೆ. ಬರ ಘೋಷಣೆ ಆಗಲು ಏನೇನು ಮಾನದಂಡ ಇದೆ ಎಂಬ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ಮಾನದಂಡದ ಪ್ರಕಾರ ಬರ ಘೋಷಣೆ ಮಾಡಬೇಕು. ಕೇಂದ್ರದ ನೀತಿಯನುಸಾರ ಬೆಳೆ ಸಮೀಕ್ಷೆ ಆಗಬೇಕಿದ್ದು, ಬೆಳೆಗಳ ಪರಿಸ್ಥಿತಿ ಬಗ್ಗೆ ಸ್ಥಳಕ್ಕೆ ಹೋಗಿ ಮಾಡಿದ ವರದಿಯು ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅಧಿಕಾರಿಗಳಿಗೆ ತಕ್ಷಣವೇ ಸ್ಯಾಂಪಲ್ ಬೆಳೆ ಸಮೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. 120 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಿ 10 ದಿನಗಳ ಒಳಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಇದು ಕಡ್ಡಾಯ ಮಾನದಂಡ ಆಗಿದ್ದು, ವರದಿ ಆಧರಿಸಿ ಬರ ಘೋಷಣೆ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದನ್ನೂ ಓದಿ: BJP Protest: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ವಿದ್ಯುತ್ ದರ ಏರಿಕೆ, ಹಾಲಿನ ಖರೀದಿ ದರ ಕಡಿತಕ್ಕೆ ಆಕ್ರೋಶ
ಕೇಂದ್ರದ ಬರ ಮಾನದಂಡ ಸರಳವಾಗಲೇಬೇಕು
ಬರ ಘೋಷಣೆಗೆ ಬೇಕಾದ ಎಲ್ಲ ಮಾನದಂಡವನ್ನು ಪಾಲನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದವರು 2016 ಹಾಗೂ 2020ರಲ್ಲಿ ಮಾನದಂಡ ಪರಿಷ್ಕರಣೆ ಮಾಡಿದ್ದಾರೆ. ಬರ ಘೋಷಣೆ ಮಾಡಬೇಕಾದರೆ ಮಾನದಂಡವನ್ನು ಬಿಗಿ ಮಾಡಿದ್ದಾರೆ. ಇವತ್ತಿನ ಪರಿಸ್ಥಿತಿಗೆ ಇದು ಸೂಕ್ತ ಆಗುತ್ತಿಲ್ಲ. ಜೂನ್‌ನಲ್ಲಿ ತೀವ್ರ ಮಳೆ ಕೊರತೆ ಇತ್ತು. ಆದರೆ, ಜುಲೈನಲ್ಲಿ ಹೆಚ್ಚುವರಿ ಮಳೆಯಾಗಿದೆ. ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಮಾನದಂಡ ಇಟ್ಟುಕೊಂಡು ಹೋದಾಗ ಶೇಕಡಾ 60ರಷ್ಟು ಮಳೆ ಕೊರತೆ ಆಗಬೇಕು ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರದ ಮಾನದಂಡವನ್ನು ಸರಳೀಕರಣ ಮಾಡಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕದ ಸ್ಥಿತಿ ವಸ್ತುಸ್ಥಿತಿಗೆ ಹತ್ತಿರವಾಗಿದೆ. ಆದರೆ, ಕೇಂದ್ರದಿಂದ ನಮಗೆ ಇನ್ನೂ ಮಾನದಂಡ ಸರಳೀಕರಣ ವಿಚಾರದಲ್ಲಿ ಉತ್ತರ ಬಂದಿಲ್ಲ. ಮಾನದಂಡಗಳ ಸರಳೀಕರಣ ಆಗಲೇಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.