ಬೆಂಗಳೂರು: ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯ (ASD – Additional Security Deposit) ಮೊತ್ತ ಏರಿಕೆಯಾಗಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇದೇ ಆಕ್ರೋಶ ವ್ಯಕ್ತವಾಗಿದೆ. ಉಚಿತವಾಗಿ ವಿದ್ಯುತ್ ಕೊಡುವ ಬೆಸ್ಕಾಂ ಸೇರಿ ರಾಜ್ಯದ ಹಲವು ವಿದ್ಯುತ್ ಸರಬರಾಜು ನಿಗಮಗಳು ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ, ಹೆಚ್ಚುವರಿ ಭದ್ರತಾ ಠೇವಣಿ ನಿಗದಿ ಕುರಿತು ಬೆಸ್ಕಾಂ ಸ್ಪಷ್ಟನೆ ನೀಡಿದೆ. ಆ ಮೂಲಕ ಗ್ರಾಹಕರ ಪ್ರಶ್ನೆ, ಗೊಂದಲಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದೆ. ಬೆಸ್ಕಾಂ ಪ್ರಕಟಣೆಯ ಅಂಶಗಳು ಇಲ್ಲಿವೆ.
- ನೂತನ ಗ್ರಾಹಕರ ವಿದ್ಯುತ್ ಬೇಡಿಕೆಯನ್ನು ಆಧರಿಸಿ, ಹೆಚ್ಚುವರಿ ಭದ್ರತಾ ಠೇವಣಿ (ASD – Additional Security Deposit) ಯನ್ನು ನಿರ್ಧರಿಸಲಾಗುತ್ತದೆ ಹಾಗೂ ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ, ಗ್ರಾಹಕರ ಹಿಂದಿನ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ಗ್ರಾಹಕರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿಸಬೇಕೇ ಅಥವಾ ಅವರ ಬೇಡಿಕೆ ಕಡಿಮೆ ಇದ್ದಲ್ಲಿ ಗ್ರಾಹಕರಿಗೆ ಮರುಪಾವತಿಸಬೇಕೇ ಎನ್ನುವುದನ್ನು ಬೆಸ್ಕಾಂ ನಿರ್ಧರಿಸುತ್ತದೆ.
- ಗ್ರಾಹಕರ ಹೆಚ್ಚುವರಿ ಭದ್ರತಾ ಠೇವಣಿಗೆ, ನೂತನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ಠೇವಣಿಯ ಮೇಲಿನ ಬಡ್ಡಿ (IOD – Interest On Deposit) ಯನ್ನು ಗ್ರಾಹಕರ ಖಾತೆಗೆ ಪಾವತಿಸಲಾಗುತ್ತದೆ.
- ಪ್ರಸ್ತುತ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ, ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರಿಗೆ ಅವರ ಖಾತೆಯಲ್ಲೇ ಭದ್ರತಾ ಠೇವಣಿಯ ಬಡ್ಡಿ ಹಣ ಜಮಾ ಆಗಿರುತ್ತದೆ. ಗ್ರಾಹಕರು ಶೂನ್ಯ ಬಿಲ್ನಿಂದ ಹೊರಬಂದಾಗ, ಅವರ ಖಾತೆಯಲ್ಲಿ ಜಮೆಯಾಗಿರುವ ಬಡ್ಡಿಯ ಹಣವನ್ನು ವಿದ್ಯುತ್ ಶುಲ್ಕದೊಂದಿಗೆ ಹೊಂದಿಸಲಾಗುತ್ತದೆ.
- ಹೆಚ್ಚುವರಿ ಭದ್ರತಾ ಠೇವಣಿಯು ಯಾವುದೇ ರೀತಿಯ ತೆರಿಗೆ ಅಥವಾ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ಮೊತ್ತವಲ್ಲ. ಬದಲಾಗಿ, ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ, ಅವರ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ನಿರ್ಧರಿಸಲಾಗುವ ಭದ್ರತಾ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೇ ಬಡ್ಡಿಯ ಲಾಭಾಂಶ (IOD) ನೀಡಲಾಗುತ್ತದೆ.
- ಜೂನ್ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ಬರುವ ಯಾವುದೇ ಕಾರಣಗಳು ಇಲ್ಲವಾಗಿದ್ದು, ವಿದ್ಯುತ್ ಬಿಲ್ ಗೃಹಜ್ಯೋತಿಯಡಿ ಶೂನ್ಯವಾಗಿದ್ದೂ, ನಿಮ್ಮ ವಿದ್ಯುತ್ ಬಿಲ್ನಲ್ಲಿ ಋಣಾತ್ಮಕ (-) ಮೊತ್ತ ನಮೂದಾಗಿದ್ದರೆ, ಅದು ಜೂನ್ ತಿಂಗಳ ಅಂತ್ಯದಲ್ಲಿ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಗೆ ಬೆಸ್ಕಾಂ ನೀಡುವ ಬಡ್ಡಿದರವಾಗಿದೆ. ಅದನ್ನು ಮುಂದೆ ಶೂನ್ಯ ಬಿಲ್ನಿಂದ ಹೊರಬಂದಾಗ, ವಿದ್ಯುತ್ ಶುಲ್ಕಕ್ಕೆ ಸರಿಹೊಂದಿಸಲಾಗುವುದು. ಈ ಋಣಾತ್ಮಕ (-) ಮೊತ್ತವನ್ನು ಗ್ರಾಹಕರು ಪಾವತಿಸಬೇಕಿರುವುದಿಲ್ಲ (ಶೂನ್ಯ ಬಿಲ್ ಇದ್ದರೆ, ಬಿಲ್ನ ಕೆಳಭಾಗದಲ್ಲಿ, ಠೇವಣಿ ಮೇಲಿನ ಬಡ್ಡಿ IOD ಎಂದು ಋಣಾತ್ಮಕ ಮೊತ್ತವನ್ನು ನಮೂದಿಸಲಾಗಿರುತ್ತದೆ.)
- ಕೆ.ಇ.ಆರ್.ಸಿ ಆದೇಶಗಳನ್ವಯ, ಗ್ರಾಹಕರ ಹೆಚ್ಚುವರಿ ಭದ್ರತಾ ಠೇವಣಿಯನ್ನು ಅವರ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿಯನ್ನು ಆಧರಿಸಿ ನಿರ್ಧರಿಸಬೇಕಿದ್ದು, ಬೇಡಿಕೆಗಿಂತ ಸರಾಸರಿ ಕಡಿಮೆಯಿದ್ದಲ್ಲಿ, ಗ್ರಾಹಕರಿಗೆ ಭದ್ರತಾ ಠೇವಣಿ ಹಣವನ್ನು ಮರುಪಾವತಿಸಲಾಗುತ್ತದೆ ಅಥವಾ ಸರಾಸರಿಯು ಬೇಡಿಕೆಗಿಂತ ಹೆಚ್ಚಿದ್ದಲ್ಲಿ, ಅದರನ್ವಯ ಬೇಡಿಕೆಯ ಭದ್ರತಾ ಠೇವಣಿಯನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ.
- ಇನ್ನು, ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿರ್ಧರಿಸಿ, ಗ್ರಾಹಕರಿಗೆ ನೋಟಿಸ್ ನೀಡುವ ಜವಾಬ್ದಾರಿ ಆಯಾ ಉಪವಿಭಾಗಗಳಿಗೆ ಸಂಬಂಧಿಸಿದ್ದು, ಉಪವಿಭಾಗದಿಂದ ಸಹಾಯಕ ಅಭಿಯಂತರರು ನೋಟಿಸ್ ಹೊರಡಿಸುತ್ತಾರೆಯೇ ವಿನಃ, ಬೆಸ್ಕಾಂನ ನಿಗಮ ಕಚೇರಿಯ ಅಧಿಕೃತ ಜ್ಞಾಪನ ಪತ್ರದ ಮೂಲಕ ಈ ರೀತಿಯ ನೋಟಿಸ್ ನೀಡಲಾಗುವುದಿಲ್ಲ.
- ನೂತನವಾಗಿ ನಿರ್ಧರಿಸಲಾಗುವ ಭದ್ರತಾ ಠೇವಣಿಯನ್ನು ಆನ್ಲೈನ್ ಮೂಲಕವೂ ಪಾವತಿಸಬಹುದಾಗಿದ್ದು, ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್ ಅಥವಾ ಬೆಸ್ಕಾಂನ ಅಧಿಕೃತ ವೆಬ್ಸೈಟ್ ಮೂಲಕ ಪಾವತಿಸಬಹುದಾಗಿದೆ
- ಬೆಸ್ಕಾಂಗೆ ಸರ್ಕಾರದ ಸಬ್ಸಿಡಿಗಳು ಕೇವಲ ಕೃಷಿ ಪಂಪ್ಸೆಟ್ ಹಾಗೂ ಗೃಹ ಜ್ಯೋತಿ ಯೋಜನೆಯಿಂದ ಮಾತ್ರ ಅನ್ವಯವಾಗುತ್ತಿದ್ದು, ಇತರೆ ಅನುದಾನವನ್ನು ಗ್ರಾಹಕರಿಗೆ ವಿದ್ಯುತ್ ಪೂರೈಕೆಯ ಮೊತ್ತದ ಮೂಲಕವೇ ಬೆಸ್ಕಾಂ ಪಡೆಯಬೇಕಿರುತ್ತದೆ.
- ಹೆಚ್ಚುವರಿ ಭದ್ರತಾ ಠೇವಣಿ (ASD) ಕುರಿತಾದ ಯಾವುದೇ ಗೊಂದಲಗಳಿದ್ದಲ್ಲಿ, ಬೆಸ್ಕಾಂನ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ಪರಿಹರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: BESCOM Order : ವಿದ್ಯುತ್ ಕಂಬಗಳ ಮೇಲೆ ಅನಧಿಕೃತ ಕೇಬಲ್ ತೆರವಿಗೆ ಗಡುವು; ಬಿಸಿ ಮುಟ್ಟಿಸಲು ಸಜ್ಜಾದ ಬೆಸ್ಕಾಂ