Site icon Vistara News

Rajakaluve Encroachment | ಬಡವರ ಮನೆ ಮೇಲೆ ಬಿಬಿಎಂಪಿ ಸಿಂಹ ಗರ್ಜನೆ; ಪ್ರಭಾವಿಗಳಿಗೆ ಮೃದು ಧೋರಣೆ!

enforement

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ (Rajakaluve Encroachment) ಬಡವರ ಮನೆ ಮೇಲೆ ಸಿಂಹದಂತೆ ಗರ್ಜಸುವ ಬಿಬಿಎಂಪಿ ಅಧಿಕಾರಿಗಳು, ಪ್ರಭಾವಿಗಳ ಮನೆ ಎಂದರೆ ಮಂಕಾಗಿ ಮೃದು ಧೋರಣೆ ತಾಳುತ್ತಿರುವುದು ಮಂಗಳವಾರ ಕಂಡು ಬಂತು.

ರಾಜಕಾಲುವೆ ಒತ್ತುವರಿ ತೆರವು ಮಾಡಲು ಮಾರ್ಕಿಂಗ್‌ ಮಾಡಿಕೊಂಡು ಬಂದ ಪಾಲಿಕೆ ಅಧಿಕಾರಿಗಳು, ದೊಡ್ಡವರ ಕಾಂಪೌಂಡ್‌ ಮಾತ್ರ ಕೆಡವಿ,‌ ಬಡವರ ಮನೆಗಳನ್ನು ನೆಲಸಮ ಮಾಡಿದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಗುಬ್ಬಿ ಮೇಲಷ್ಟೇ ಅಧಿಕಾರಿಗಳ ಬ್ರಹ್ಮಾಸ್ತ್ರ ಎಂದು ಕಿಡಿಕಾರಿದರು.

18 ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಕಡೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಯಿತು. ಪಾಲಿಕೆಯ ಎಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ 2 ಹಿಟಾಚಿ ಹಾಗೂ 8 ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.

ಮಹದೇವಪುರ ವಲಯ ಚೆಲ್ಲಘಟ್ಟದ ಸರ್ವೇ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿ ವತಿಯಿಂದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ರಾಜಕಾಲುವೆಯ ಮೇಲೆ ಕಾಂಕ್ರಿಟ್ ಅಳವಡಿಸಿ ಎತ್ತರವಾಗಿ ಕಾಂಪೌಂಡ್ ಗೋಡೆ ಹಾಗೂ ಕಾಂಪೌಂಡ್ ಗೋಡೆಯ ಮೇಲೆ ಫೆನ್ಸಿಂಗ್ ಅಳವಡಿಸಲಾಗಿತ್ತು. ಸುಮಾರು 50 ಮೀಟರ್‌ನಷ್ಟು ಒತ್ತುವರಿ ತೆರವು ಮಾಡಲಾಗಿದ್ದು, ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಂತಿನಿಕೇತನ ಲೇಔಟ್‌ನಲ್ಲಿ 7 ಕಟ್ಟಡ ಹಾಗೂ 4 ಕಾಂಪೌಂಡ್‌ಗಳನ್ನು ತೆರವುಗೊಳಿಸಲಾಗಿದೆ. ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್ಮ್ಂಟ್ ಗೋಡೆ ಹಾಗೂ ರಾಜಕಾಲುವೆಯ ಖಾಲಿ ಜಾಗದ ಮೇಲೆ ನಿರ್ಮಿಸಿಕೊಂಡಿದ್ದ 4 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಬಸವನಪುರದಲ್ಲಿ 1 ಕಾಂಪೌಂಡ್ ಹಾಗೂ 1 ಖಾಲಿ ಜಾಗದ ಒತ್ತುವರಿ ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.

ಯಲಹಂಕ ವಲಯದ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್.ಸಿ.ಬಿ.ಎಸ್ ಇನ್ಸ್ಟಿಟ್ಯೂಟ್ ವತಿಯಿಂದ 120 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಅನ್ನು ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ. ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಭೂಮಾಪಕರ ಮೂಲಕ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Rajakaluve Encroachment | ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಿಂದಲೇ ರಾಜಕಾಲುವೆ ಒತ್ತುವರಿ!

Exit mobile version