ಬೆಂಗಳೂರು: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ (Rajasthan Murder) ಪ್ರಕರಣವನ್ನು ಕರ್ನಾಟಕದ ಪ್ರಮುಖ ರಾಜಕಾರಣಿಗಳು, ಸಾಹಿತಿಗಳು ಪಕ್ಷಾತೀತವಾಗಿ ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂಸೆ ಪರಿಹಾರ ಅಲ್ಲ ಎಂದ ಸಿದ್ದರಾಮಯ್ಯ
ಉದಯಪುರ ಹತ್ಯೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, ಉದಯಪುರದಲ್ಲಿ ಧರ್ಮಾಂಧನೊಬ್ಬ ನಡೆಸಿರುವ ಬರ್ಬರ ಹತ್ಯೆ ಖಂಡನೀಯ. ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ. ಕುರುಡು ಹಿಂಸೆಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅಲ್ಲಿನ ರಾಜ್ಯ ಸರ್ಕಾರ ಕಾನೂನು ಕ್ರಮದ ಮೂಲಕ ಕೊಲೆಗಡುಕನಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು : ಎಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆ ನನಗೆ ತೀವ್ರ ಘಾಸಿ ಉಂಟುಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ. ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದೂ ಇಲ್ಲ. ಇದನ್ನು ಪಕ್ಷಾತೀತವಾಗಿ ಖಂಡಿಸಲೇಬೇಕು. ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇಬಾರದು. ರಕ್ಕಸರಷ್ಟೇ ಇಂಥ ಹೇಯ ಕೃತ್ಯ ಎಸಗಲು ಸಾಧ್ಯ. ಕಾನೂನು-ಕಾಯ್ದೆ ಎನ್ನುವುದಕ್ಕಿಂತ ಮನಃಪರಿವರ್ತನೆಯಿಂದಲೇ ಇಂಥ ಕ್ರೂರ ಮನಃಸ್ಥಿತಿಯಿಂದ ಎಲ್ಲರೂ ಹೊರಬೇಕಿದೆ ಎಂದು ಹೇಳಿದ್ದಾರೆ.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ? ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಧರ್ಮಗಳು ಉಳಿಯುವುದಿಲ್ಲ. ಮಾನವೀಯತೆ ಸತ್ತರಷ್ಟೇ ಕೋಮುವಾದ ವಿಜೃಂಭಿಸುತ್ತದೆ. ದರ್ಪ ಹೆಚ್ಚಿದಷ್ಟೂ ಧರ್ಮಗಳೂ ಅಳಿಯುತ್ತವೆ. ಕನ್ಹಯ್ಯ ಅವರ ಕೊಲೆ ಇಂಥ ದರ್ಪವನ್ನು ನಾಮಾವಶೇಷ ಮಾಡಲಿ. ಕನ್ಹಯ್ಯ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ. ಕನ್ಹಯ್ಯ ಅವರ ಸಾವು, ಕೊಂದು ವಿಜೃಂಭಿಸುವ ಕಿರಾತಕ ಮನಃಸ್ಥಿತಿಯನ್ನು ಬದಲಿಸಲಿ. ಅವರ ಕುಟುಂಬದ ಜತೆ ನಾವೆಲ್ಲರೂ ನಿಲ್ಲೋಣ ಎಂದು ತಿಳಿಸಿದ್ದಾರೆ.
ಮೂಲಭೂತವಾದವನ್ನು ಒಪ್ಪುವುದಿಲ್ಲ: ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿ, ಮೂಲಭೂತ ವಾದವನ್ನು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದು ನ್ಯಾಯಸಮ್ಮತವೂ ಅಲ್ಲ. ಉದಯಪುರದಲ್ಲಿ ನಡೆದ ಹಿಂಸಾತ್ಮಕ ಘಟನೆ ಖಂಡನೀಯ. ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇಬೇಕು ಎಂದಿದ್ದಾರೆ.
ಮತಾಂಧರು ಏನು ಮಾಡಲು ಚಿಂತಿಸಿದ್ದಾರೆ? ಎಂದ ಜಗ್ಗೇಶ್
ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಪ್ರಕರಣವನ್ನು ಖಂಡಿಸಿದ್ದು, 135 ಕೋಟಿ ಜನಸಂಖ್ಯೆ ಇರುವ ದೇಶದ ಪ್ರಧಾನಿ ಮೋದಿ ಅವರನ್ನು ಕೊಲೆ ಮಾಡುವೆವು ಎಂದು ಸಾಮಾಜಿಕ ತಾಣದಲ್ಲಿ ಹಿಂದು ಯುವಕನ ಕೊಲೆ ನಂತರ
ಹಾಕಿರುವುದು ನೋಡಿದರೆ ಮತಾಂಧರು ಏನು ಮಾಡಲು ಚಿಂತಿಸಿದ್ದಾರೆ ಎಂಬುವುದು ತಿಳಿಯುತ್ತದೆ. ಇದು ಪಾಕಿಸ್ತಾನ ಅಲ್ಲ ಭಾರತಾಂಬೆಯ ಸ್ವಾಭಿಮಾನಿ ಮಕ್ಕಳ ತವರೂರು, ಇಂಥ ಗುಣಗಳಿಗೆ ಓಟಿಗಾಗಿ ಸಲುಗೆ ನೀಡುವವರೆ ನಿಮ್ಮನ್ನು ಬಿಡರು ಮುಂದೆ. ನೂರಾರು ವರ್ಷದ ಹಿಂದಿನ ಮತಾಂಧರಿಗೆ ಬಗ್ಗದ ಭಾರತೀಯರು ಅಲ್ಪರಿಗೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | ʼಇನ್ನು ನಿನ್ನ ಸರದಿʼ; ಉದಯಪುರ ಹತ್ಯೆ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ನವೀನ್ ಜಿಂದಾಲ್‌ಗೆ ಬೆದರಿಕೆ
ಇದೊಂದು ವ್ಯವಸ್ಥಿತ ಸಂಚು : ನಳಿನ್ ಕುಮಾರ್ ಕಟೀಲ್
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೆಗೇಡಿನ ವಿಷಯ. ಇದೊಂದು ವ್ಯವಸ್ಥಿತ ಸಂಚು. ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷ ಹತ್ಯೆ ನಡೆದಿತ್ತು. ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ದುಷ್ಕರ್ಮಿಗಳ ಕೈವಾಡವಿದೆ. ಅಲ್ಲಿನ ಸರ್ಕಾರದ ತುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ಆಗಿದೆ. ಕಾಂಗ್ರೆಸ್ ಈಗ ಮೌನವಾಗಿರುವುದಕ್ಕೆ ಕಾರಣವೇನು? ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಎನ್ನುವುದು ಮುಖ್ಯ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕೊಲೆಯನ್ನು ಎಲ್ಲರೂ ಖಂಡಿಸಬೇಕು : ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಅದು ನೊಡಬಾರದ ದೃಶ್ಯ. ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿ ಅವರು ಏನು ಮಾಡಲು ಸಾಧ್ಯ ಎಂದು ತೋರಿಸಿದ್ದಾರೆ. ಅವರು ಮನುಷ್ಯರು ಹೌದೋ ಅಲ್ವೋ ಎಂಬ ಅನುಮಾನ ಶುರುವಾಗಿದೆ. ಈ ರೀತಿಯ ರಾಕ್ಷಸಿ ಪೈಶಾಚಿಕ ಕೃತ್ಯ ಮಾಡುವಂತವರಿಗೆ ಶಿಕ್ಷ ಕೊಡಿಸುವ ಬಗ್ಗೆ ಯೋಚನೆ ಮಾಡಬೇಕು. ಎಲ್ಲ ವರ್ಗದವರು ಈ ತಪ್ಪನ್ನು ಖಂಡಿಸಬೇಕು. ಕೇವಲ ಒಂದು ವರ್ಗದವರ ಪರ ನಿಲ್ಲೋದು, ಇನ್ನೊಂದು ವರ್ಗದ ವಿರುದ್ಧ ಮಾತಾಡೋದು ಅಪಾಯಕಾರಿ. ಈ ಕೊಲೆಯನ್ನು ಎಲ್ಲರೂ ಖಂಡಿಸಬೇಕು ಎಂದಿದ್ದಾರೆ.
ಇಸ್ಲಾಂ ಭಯೋತ್ಪಾದನೆ ಮುಂದುವರಿದ ಭಾಗ : ಸಚಿವ ಸುನಿಲ್ ಕುಮಾರ್
ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಕನ್ಹಯ್ಯ ಲಾಲ್ ಸಾವಿಗೆ ಸಂತಾಪ ಸೂಚಿಸುತ್ತೇನೆ. ಒಂದು ಪೋಸ್ಟರ್ ಹೇಳಿಕೆ ಭೀಬತ್ಸ ಘಟನೆಗೆ ಕಾರಣವಾಗಿದೆ. ಇಸ್ಲಾಮಿನ ಭಯೋತ್ಪಾದನೆ ಮುಂದುವರಿದ ಭಾಗ ಇದಾಗಿದೆ. ಕಾಶ್ಮೀರದಲ್ಲಿ ಬೆಲೆ ತೆರಬೇಕಾಯಿತು, ಕೇರಳ, ಕರ್ನಾಟಕದಲ್ಲಿ ಆಗಿತ್ತು, ಈಗ ರಾಜಸ್ಥಾನದಲ್ಲಿ ಆಗಿದೆ. ಇಸ್ಲಾಂ ಬಗ್ಗೆಯ ಹೇಳಿಕೆಗೆ ಕುತ್ತಿಗೆ ಕಡಿಯೋ ಮಟ್ಟಿಗೆ ಆಗಿದೆ. ಇದರ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕಿದೆ. ಇಡೀ ಹಿಂದೂ ಸಮುದಾಯ ಎದ್ದುನಿಂತು ಇಸ್ಲಾಂ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಇದೇ ರೀತಿ ಮುಂದುವರಿದರೆ ಬದುಕೋದು ಬಹಳ ಕಷ್ಟಕರವಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಸ್ಲಿಂ ಮೂಲಭೂತವಾದಿಗಳಿಂದ ಶಾಂತಿ ಕೆಡಿಸುವ ಯತ್ನ : ಪ್ರತಾಪ ಸಿಂಹ
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನವಿದು. ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಈಗ ಏನು ಮಾಡುತ್ತಿದ್ದಾರೆ? ಬ್ರದರ್ ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗಿತಾ ನಿಮ್ಮ ಕೆಲಸ? ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಕರ್ನಾಟಕದಲ್ಲೂ ಆಗುತ್ತದೆ. ಇದು ರಾಜ್ಯದ ಜನರಿಗೆ ಎಚ್ಚರಿಕೆ ಕರೆ ಗಂಟೆ. ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗರಿಕ ಸಮಾಜ ಖಂಡಿಸಬೇಕು : ಬಿ.ಕೆ.ಹರಿಪ್ರಸಾದ್
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆ ಘೋರ ಘಟನೆಯಾಗಿದ್ದು, ಇದನ್ನು ನಾಗರಿಕ ಸಮಾಜ ಖಂಡಿಸಬೇಕು. ಭಾರತದ ಎಲ್ಲ ಧರ್ಮ, ಭಾಷೆಗಳ ಜತೆಗೆ ಅನ್ಯೋನ್ಯವಾಗಿರುವ ದೇಶ. ಇಂತಹ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ನಡೆದಾಗ ಇಂತಹ ಸಾವನ್ನು ವೈಭವೀಕರಿಸಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ತಿಳಿಸಿದರು.
ಆವೇಶದ ಹಾದಿಗಳು ಆತ್ಮಹತ್ಯಾತ್ಮಕ : ಚಿಂತಕ ರಹಮತ್ ತರೀಕೆರೆ
ಹಿರಿಯ ಚಿಂತಕ ರಹಮತ್ ತರೀಕೆರೆ ಪ್ರತಿಕ್ರಿಯಿಸಿ, ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿರುವ ಕೃತ್ಯವು ಹೀನ ಕ್ರೌರ್ಯವಾಗಿದೆ. ಅದನ್ನು ಎಲ್ಲರೂ ಖಂಡಿಸಬೇಕಿದೆ. ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಲಿ. ಎಷ್ಟೇ ಸಮಸ್ಯೆಯಿದ್ದರೂ, ಎಷ್ಟೇ ಸೋಲಾದರೂ, ಪ್ರಜಾಪ್ರಭುತ್ವ ಮತ್ತು ಕಾನೂನುಬದ್ಧ ಹಾದಿಗಳಲ್ಲಿಯೇ ಭಿನ್ನಮತ ಮತ್ತು ಪ್ರತಿರೋಧ ಪ್ರಕಟವಾಗಬೇಕು. ಆವೇಶದ ಹಾದಿಗಳು ಆತ್ಮಹತ್ಯಾತ್ಮಕ. ಎಲ್ಲ ಧರ್ಮಗಳ ಮತಾಂಧತೆ ಮೂಲಭೂತವಾದ ಮತೀಯವಾದಗಳು ನಮ್ಮ ಶಾಪಗಳಾಗಿವೆ. ಇವು ದೇಶವನ್ನು ದಿನೇದಿನೇ ಅಮಾನುಷತೆಗೆ ಅಧಃಪತನಕ್ಕೆ ತಳ್ಳುತ್ತಿವೆ. ಸುರಂಗದ ಹಾದಿಯ ಕೊನೆಯಲ್ಲಿ ಬೆಳಕು ಕಾಣಬೇಕು. ಆದರೆ ಕರಾಳ ಕತ್ತಲೆಯೇ ಕಾಣುತ್ತಿದೆ.
ಆಘಾತಕಾರಿ ಘಟನೆ ಸಮಾಜದ ಕಣ್ತೆರೆಸಬೇಕಿದೆ : ಲೇಖಕ ದಿವಾಕರ ನಾರಾಯಣ ರಾವ್
ಹಿರಿಯ ಲೇಖಕ ದಿವಾಕರ ನಾರಾಯಣ ರಾವ್ ಸ್ಪಂದಿಸಿ, ಹಿಂಸೆ ಪ್ರತಿಹಿಂಸೆ, ದಾಳಿ ಪ್ರತಿದಾಳಿ, ಹತ್ಯೆ ಪ್ರತಿಹತ್ಯೆ. ಓಹ್ ನಮ್ಮ ಸಮಾಜ ಎತ್ತ ಸಾಗುತ್ತಿದೆ? ಉದಯಪುರದ ಆಘಾತಕಾರಿ ಘಟನೆ ಸಮಾಜದ ಕಣ್ತೆರೆಸಬೇಕಿದೆ. ಕಾರಣ ಏನೇ ಇರಲಿ, ಉದ್ದೇಶ ಯಾವುದೇ ಇರಲಿ, ಸಮುದಾಯ ದ್ವೇಷ ಮತ್ತು ಮತಾಂಧತೆ ಒಂದು ಸಮುದಾಯವನ್ನು, ಸಮಾಜವನ್ನು ಎಂತಹ ಕ್ರೂರಾವಸ್ಥೆಗೆ ಕೊಂಡೊಯ್ಯುತ್ತದೆ ಎನ್ನಲು ಉದಯಪುರ ಅಮಾನುಷ ಹತ್ಯೆ ಸಾಕ್ಷಿ. ಭಾರತದ ಸಾಮಾಜಿಕ-ಸಾಂಸ್ಕೃತಿಕ ನಿಘಂಟಿನಿಂದ ʼಧಾರ್ಮಿಕ ಭಾವನೆಗಳಿಗೆ ಧಕ್ಕೆʼ ಎಂಬ ಮೂರು ಪದಗಳನ್ನು ಅಳಿಸಿಹಾಕಬೇಕು. ಕೊಲೆಗಡುಕ ಮನಸ್ಥಿತಿಗೆ ಸಾಂಸ್ಥಿಕ-ಸಾಂಘಿಕ ಸ್ವರೂಪ ಮತ್ತು ಆಯಾಮವನ್ನು ಕೊಡುತ್ತಿರುವ ವಿಚ್ಛಿದ್ರಕಾರಿ ಮನಸುಗಳು ಇನ್ನಾದರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದಿದ್ದಾರೆ.
ಕೊಲೆಗಡುಕರಿಗೆ ಬದುಕುವ ಹಕ್ಕಿಲ್ಲ
ಕವಿ, ಗೀತೆ ರಚನೆಕಾರ ಕವಿರಾಜ್ ಪ್ರತಿಕ್ರಿಯಿಸಿ, ಕೊಲೆಗಡುಕರಿಗೆ ಬದುಕುವ ಹಕ್ಕಿಲ್ಲ. ಇಂತಹ ಪೈಶಾಚಿಕ ಕೃತ್ಯ ಎಸಗುವವರು ಯಾರೇ ಆಗಿರಲಿ, ಕಾರಣ ಏನೇ ಇರಲಿ. ಇಂತಹ ಧರ್ಮಾಂಧ ರಕ್ಕಸರು ನಾಗರಿಕ ಸಮಾಜದಲ್ಲಿ ಬದುಕಲು ಅರ್ಹರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂಸೆಯನ್ನು ವಿಜೃಂಭಿಸುವ ಎಲ್ಲ ಕೃತ್ಯಗಳು ನಿಲ್ಲಬೇಕು
ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿ, ಹಿಂಸೆಗೆ ಹಿಂಸೆಯೇ ಉತ್ತರವಾದಾಗ ಹಿಂಸೆ ಇಮ್ಮಡಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಾಗರಿಕ ಸಮಾಜ ಹೇಸಿಕೊಳ್ಳುವ ಘಟನೆ ಉದಯಪುರದಲ್ಲಿ ನಡೆದಿದೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಕೊಂಡು ಘಾತುಕರನ್ನು ಶಿಕ್ಷಿಸಿ ಇನ್ನೊಮ್ಮೆ ಈ ದೇಶದಲ್ಲಿ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಿಂಸೆಯನ್ನು ವಿಜೃಂಭಿಸುವ ಎಲ್ಲ ಕೃತ್ಯಗಳು ನಿಲ್ಲಬೇಕು ಎಂದು ಘಟನೆಯನ್ನು ಖಂಡಿಸಿದ್ದಾರೆ.
ಕೊಲೆಗಡುಕರು ಎನ್ನಲು ಯಾವ ವಿನಾಯಿತಿಗಳೂ ಇಲ್ಲ
ಯುವ ಕವಿ ರಾಜೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ಕೊಲ್ಲುವವರನ್ನು ‘ಕೊಲೆಗಡುಕರು’ ಎನ್ನಲು ಯಾವ ವಿನಾಯಿತಿಗಳೂ ಇಲ್ಲ. ಅವರು ‘ಕೊಲೆಗಡುಕರು’. ಆದರೆ ಇವತ್ತು ಹೇಳುತ್ತಿರುವಷ್ಟು ನೈತಿಕತೆಯನ್ನೇ ಸದಾಕಾಲವೂ ಹೇಳುವಷ್ಟು ಉಳಿಸಿಕೊಳ್ಳಬೇಕಷ್ಟೇ! ಮನುಷ್ಯನನ್ನು ಮನುಷ್ಯ ಕೊಂದು ಉಳಿಸುಕೊಳ್ಳುವಂತಹದ್ದೇನೂ ಈ ನೆಲದಲ್ಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಉದಯಪುರದ ಹಿಂದೂ ಟೈಲರ್ ಶಿರಚ್ಛೇದ ಮಾಡಿದ ಹಂತಕರಿಗೆ ಐಸಿಸ್ ಲಿಂಕ್!