ಮೈಸೂರು: ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ (91) (Rajeev Taranath) ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಸುಮಾರು 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದರಾದ ಇವರು, ಸರೋದ್ ವಾದನದಲ್ಲಿ ಅಪ್ರತಿಮ ವಿದ್ವಾಂಸರು. ಇವರ ಸಂಗೀತ ಸೇವೆಗಾಗಿ ಪದ್ಮಶ್ರೀ, ನಾಡೋಜ ಸೇರಿ ಹತ್ತಾರು ಪ್ರಶಸ್ತಿ ಸಂದಿವೆ. ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
17, 1932ರ ಅ.17ರಂದು ಜನಿಸಿದ ರಾಜೀವ್ ತಾರಾನಾಥ್ ಅವರು ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದವರು. ತಮ್ಮ ಪ್ರಾರಂಭಿಕ ಪಾಠಗಳನ್ನು ತಂದೆ ಪಂಡಿತ ತಾರಾನಾಥ್ ಅವರಿಂದ ಪಡೆದಿದ್ದರು. ಒಂಬತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದ್ದ ಇವರು,. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದು, ಕೆಲ ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಸಂಗೀತ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದರು. ಸಂಗೀತ ಅಭ್ಯಸಿಸಲು ಕೊಲ್ಕೊತ್ತಾಗೆ ತೆರಳಿದ್ದರು.
ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾದ ಇವರು, ಕ್ಯಾಲಿಪೋರ್ನಿಯಾ ವಿವಿಯ ಕಲಾವಿಭಾಗದ ಮುಖ್ಯಸ್ಥರಾಗಿದ್ದರು. 1995ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಮೈಸೂರಿನಲ್ಲಿ ನೆಲೆಸಿದ್ದರು.
ಸಿಎಂ ಸಿದ್ದರಾಮಯ್ಯ ಸಂತಾಪ
ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಜಗತ್ಪ್ರಸಿದ್ಧ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ
ತುಂಬಲಾರದ ನಷ್ಟ.
ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ.
— Siddaramaiah (@siddaramaiah) June 11, 2024
ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ
ತುಂಬಲಾರದ ನಷ್ಟ.
ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ… pic.twitter.com/R28P5qp5E6
ಇದನ್ನೂ ಓದಿ | Murder case : ಹಿರಿಯ ಸ್ವಾಮೀಜಿ ಕೊಂದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ ತಿಳಿಸಿದ್ದಾರೆ.