ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Rajini in Mangalore) ಅವರು ಮಂಗಳೂರಿನಲ್ಲಿದ್ದಾರೆ. ಅವರ ಹೊಸ ಸಿನಿಮಾ ಜೈಲರ್ ಶೂಟಿಂಗ್ ಮಂಗಳೂರು ಹೊರವಲಯದ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ರಜನಿಕಾಂತ್ ಅವರು ಮಂಗಳವಾರ ಬೆಳಗ್ಗೆ ಗುತ್ತಿನ ಮನೆಗೆ ಆಗಮಿಸಿದರು.
ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರೂ ನಟಿಸುತ್ತಿದ್ದು, ರಜನೀಕಾಂತ್ ಎದುರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರಜನೀಕಾಂತ್ ಅವರು ಭಾನುವಾರ ರಾತ್ರಿ ಯಾವುದೇ ಭದ್ರತಾ ಸಿಬ್ಬಂದಿಯ ಬೆಂಗಾವಲು ಇಲ್ಲದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಒಂಟಿಯಾಗಿಯೇ ತಾವು ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಶಿವರಾಜ್ ಕುಮಾರ್ ಅವೂ ತಂಗಿದ್ದು ಜತೆಯಾಗಿ ಹರಟೆ ಹೊಡೆಯುತ್ತಿದ್ದ ಚಿತ್ರಗಳು ವೈರಲ್ ಆಗಿದ್ದವು.
ಗುತ್ತಿನ ಮನೆಯಲ್ಲಿ ವಿಶೇಷ ಸೆಟ್
ಪಿಲಿಕುಳದ ಗುತ್ತಿನ ಮನೆಯಲ್ಲಿ ಜೈಲರ್ ಚಿತ್ರದ ಚಿತ್ರೀಕರಣಕ್ಕಾಗಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಗುತ್ತಿನ ಮನೆಗೆ ಪ್ರವೇಶ ನಿಷೇಧಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಮಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ.
ಕರಾವಳಿ ಸಂಸ್ಕೃತಿಯ ಚಿತ್ರ, ಗಮನ ಸೆಳೆದ ಕುಸ್ತಿ ಅಖಾಡ
ಜೈಲರ್ ಚಿತ್ರದಲ್ಲಿ ಕರಾವಳಿ ಭಾಗದ ಸಂಸ್ಕೃತಿ ಬಿಂಬಿಸುವ ದೃಶ್ಯಗಳು ಇರಲಿದ್ದು, ಇದಕ್ಕಾಗಿ ಹಳ್ಳಿ ಸೆಟ್ ಹಾಕಲಾಗಿದೆ. ಹಳ್ಳಿ ಮನೆಯ ಸೆಟ್ ನಲ್ಲಿ ಎತ್ತಿನ ಗಾಡಿ, ಕುಸ್ತಿ ಅಖಾಡ ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ.
ಇದು ರಜನಿಕಾಂತ್ ಅವರ 169ನೇ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ‘ಜೈಲರ್’ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ದಳಪತಿ ವಿಜಯ್ ಅಭಿನಯದ ಬೀಸ್ಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರದ ನಿರ್ದೇಶಕರು.ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ತಮನ್ನಾ ಈ ಚಿತ್ರಕ್ಕೆ ನಾಯಕಿ.
ಖ್ಯಾತ ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ರಜನಿಕಾಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿತ್ತು. ಶಿವರಾಜ್ಕುಮಾರ್ ಅವರ ಲುಕ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದು ಶಿವರಾಜ ಕುಮಾರ್ ಅವರು ನಟಿಸುತ್ತಿರುವ ಎರಡನೇ ತಮಿಳು ಚಿತ್ರವಾಗಿದೆ. ಕ್ಯಾಪ್ಟನ್ ಮಿಲ್ಲರ್ ಎಂಬ ಸಿನಿಮಾದಲ್ಲೂ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ.
ಇದನ್ನೂ ಓದಿ : Rajinikanth | ʻಜೈಲರ್ʼ ಸಿನಿಮಾ ಬಳಿಕ ಖ್ಯಾತ ನಿರ್ದೇಶಕರ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರಂತೆ ರಜನಿಕಾಂತ್!