ಬೆಳಗಾವಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಶೇ. 4 ಪರ್ಸೆಂಟ್ ಮೀಸಲಾತಿ ನೀಡಿತ್ತು. ಕೇವಲ ಮುಸ್ಲಿಮರನ್ನು ಸಮಾಧಾನಪಡಿಸಲು ಈ ಮೀಸಲಾತಿ ಕೊಟ್ಟಿತ್ತು. ಕಾಂಗ್ರೆಸ್ ಅಧಿಕಾರಕ್ಕೆ (Karnataka Election) ಬರಲು ಧರ್ಮವನ್ನು ಬಳಸಿಕೊಳ್ಳುತ್ತಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರ ನಡುವೆ ರಾಜಕೀಯ ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದರು.
ಕಾಗವಾಡ ಕ್ಷೇತ್ರದ ಕೆಂಪವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪ್ರಚಾರ ನಡೆಸಿದ ಅವರು, ಭಾರತದ ಇತಿಹಾಸದಲ್ಲಿ ಧರ್ಮದ ಆಧಾರದ ಮೇಲೆ ರಾಜಕೀಯ ಬೆಂಬಲ ಪಡೆದಿದ್ದು ಕಾಂಗ್ರೆಸ್ ಮಾತ್ರ. ಆರ್ಥಿಕವಾಗಿ ದುರ್ಬಲರಾಗಿರುವ ಮುಸ್ಲಿಮರು ಮೀಸಲಾತಿಯ ಉಪಯೋಗ ತೆಗೆದುಕೊಂಡರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.
ನಮ್ಮ ಸಂವಿಧಾನವು ಧರ್ಮ ಆಧಾರಿತ ಮೀಸಲಾತಿಗೆ ಅನುಮತಿ ನೀಡುವುದಿಲ್ಲ, ಮುಸ್ಲಿಮರಿಗಿದ್ದ 2ಬಿ ಮೀಸಲಾತಿ ರದ್ದು ಪಡಿಸಲು ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ತೀರ್ಮಾನಿಸಿತ್ತು. ಮುಸ್ಲಿಮರಿಗಿದ್ದ ಶೇ.4 ಪರ್ಸೆಂಟ್ ಮೀಸಲಾತಿ ಈಗ ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ನೀಡಲಾಗಿದ್ದು, ಜತೆಗೆ ಮುಸ್ಲಿಮರನ್ನು ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿ ಪಟ್ಟಿಗೆ ಸೇರಿಸುವ ತೀರ್ಮಾನ ಮಾಡಲಾಗಿತ್ತು. ಆದರೆ, ಮೇ 9ರವರೆಗೆ ಮೀಸಲಾತಿ ಆದೇಶ ಜಾರಿಗೊಳಿಸಬಾರದು ಅಂತ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ, ಬಿಜೆಪಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Karnataka Election: ನಮ್ಮಲ್ಲಿ ದುಡ್ಡಿಲ್ಲ, ಜೆಡಿಎಸ್ ಪ್ರಚಾರಕ್ಕೆ ಹೊರಗಿನ ಯಾವ ನಾಯಕರೂ ಬರೋದಿಲ್ಲ: ಕುಮಾರಸ್ವಾಮಿ
ಬಿಜೆಪಿ ನ್ಯಾಯ ಮತ್ತು ಮಾನವೀಯತೆಯ ಮೇಲೆ ನಂಬಿಕೆ ಇಟ್ಟಿದೆ. ಬಸವೇಶ್ವರರ ತತ್ವಗಳನ್ನು ಬಿಜೆಪಿ ಪಾಲಿಸುತ್ತಿದೆ. ಹೀಗಾಗಿ 224 ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬಿಜೆಪಿಗೆ ನೀಡುವಂತೆ ಕೇಂದ್ರ ಸಚಿವರು ಮನವಿ ಮಾಡಿದರು.
ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಜಗಳ ಶುರುವಾಗಿದೆ
ಬಾಗಲಕೋಟೆ: ರಾಜ್ಯದಲ್ಲಿ ಇನ್ನು ಸರ್ಕಾರವೇ ಬಂದಿಲ್ಲ, ಆಗಲೇ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಜಗಳ ಶುರುವಾಗಿದೆ. ಈಗಾಗಲೇ ನಾನು ಸಿಎಂ, ನಾನು ಸಿಎಂ ಅಂತ ಬಡಿದಾಡುತ್ತಿದ್ದಾರೆ. ನಮ್ಮ ಪ್ರಧಾನಿ ಮೋದಿ ಏನು ಮಾತು ಕೊಟ್ಟಿದ್ದರು, ಅವುಗಳನ್ನೆಲ್ಲಾ ಈಡೇರಿಸಿದ್ದೇವೆ. ನಾವು ಏನು ಹೇಳುತ್ತೇವೆ ಅದನ್ನು ಮಾಡುತ್ತೇವೆ. ಕಾಂಗ್ರೆಸ್ ಏನು ಹೇಳುತ್ತದೆಯೋ ಅದನ್ನು ಮಾಡೋದು ಬಿಟ್ಟು ಬೇರೆ ಎಲ್ಲವನ್ನು ಮಾಡುತ್ತದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.
ಜಿಲ್ಲೆಯ ಜಮಖಂಡಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಗುಡಗುಂಟಿ ಅವರ ಪ್ರಚಾರ ನಡೆಸಿದ ಅವರು, ನಮ್ಮ ಪ್ರಣಾಳಿಕೆ ತೆಗೆದು ನೋಡಿದರೆ ಏನು ಹೇಳಿದ್ದೆವೋ ಅದನ್ನು ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆರವು ಮಾಡಿದೆವು. ನಾವು 1984ರಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದೆವು. ಅದೇ ಪ್ರಕಾರ ಈಗ ಭವ್ಯ ರಾಮಮಂದಿರ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election: ದೇಶದ ಉನ್ನತಿಗೆ ಬಿಜೆಪಿ ಸರ್ಕಾರ ಭದ್ರ ಬುನಾದಿ ಹಾಕಿದೆ: ಕೇಂದ್ರ ಸಚಿವ ಶ್ರೀಪಾದ ನಾಯ್ಕ
ಮೊದಲು ಭಾರತದ ಮಾತನ್ನು ಜಗತ್ತು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ಭಾರತ ಏನಾದರೂ ಹೇಳುತ್ತಿದ್ದರೆ ಎಲ್ಲ ದೇಶದವರು ಕಿವಿ ತೆರೆದು ಕೇಳುತ್ತಾರೆ. ಭಾರತ ಈಗ ದುಸ್ಥಿತಿಯಲ್ಲಿಲ್ಲ. ಇಲ್ಲಿ ಇರುವಂತಹ ಸರ್ಕಾರ ಜಗತ್ತಿನಲ್ಲಿ ಎಲ್ಲೂ ಕಾಣಲ್ಲ. ಮೋದಿ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಹೆಚ್ಚಾಗಿತ್ತು. ಆದರೆ, ಒಂಬತ್ತು ವರ್ಷದಿಂದ ದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ನಮ್ಮ ಪ್ರಧಾನಿ, ಯಾವುದೇ ಮಂತ್ರಿ ಮೇಲಾಗಲಿ ಯಾವುದೇ ಭ್ರಷ್ಟಾಚಾರ ಕೇಸ್ ಇಲ್ಲ. ಆದರೆ ಮೊದಲಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ಎಷ್ಟೋ ಜನರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಕಿಡಿಕಾರಿದರು.