ಬೆಂಗಳೂರು: ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗುವ (RS Elections 2022) ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯಲಿದ್ದು, ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಬಿಜೆಪಿಯ ಹಿರಿಯ ನಾಯಕ ಲೇಹರ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಬಿಜೆಪಿಯಿಂದ ಇಬ್ಬರು ಗೆಲ್ಲಬಹುದಾಗಿದ್ದು, ಮತ್ತೋರ್ವರನ್ನು ಗೆಲ್ಲಿಸಲು ಮತಗಳ ಕೊರತೆ ಇದೆ. ಹೀಗಾಗಿ ಬೇರೆ ಪಕ್ಷಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ಲೇಹರ್ ಸಿಂಗ್ ಅವನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯರಾಗಿರುವ ಲೇಹರ್ ಸಿಂಗ್ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಅತ್ಮೀಯರಾಗಿದ್ದ ಅವರು ಬೇರೆ ಪಕ್ಷಗಳ ನಾಯಕರೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಒಮ್ಮತ ಮೂಡಿದೆ ಎನ್ನಲಾಗುತ್ತಿದೆ.
13 ಮತಗಳ ಕೊರತೆ
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತ ಬೇಕು. ವಿಧಾನಸಭೆಯಲ್ಲಿ ಬಿಜೆಪಿ 121 ಶಾಸಕರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯನ್ನು ಹೊಂದಿದೆ. ಎರಡು ಅಭ್ಯರ್ಥಿ ಆಯ್ಕೆ ಬಳಿಕ ಬಿಜೆಪಿ ಬಳಿ 32 ಮತಗಳು ಉಳಿಯಲಿವೆ. ಆದರೆ 45 ಮತ ಬೇಕಾಗಿರುವುದರಿಂದ 13 ಮತಗಳ ಕೊರತೆ ಉಂಟಾಗಲಿದೆ.
ಕಾಂಗ್ರೆಸ್ ಪಕ್ಷ 70 ಶಾಸಕರ ಬಲವನ್ನು ಹೊಂದಿದ್ದು ಒಬ್ಬ ಅಭ್ಯರ್ಥಿಯನ್ನ ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾಗಿದೆ. ಎರಡನೇ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್‌ಗೆ ಸುಮಾರು 20 ಮತಗಳ ಕೊರತೆ ಎದುರಾಗಲಿದೆ. ವಿಧಾನಸಭೆಯಲ್ಲಿ 32 ಶಾಸಕರ ಬಲ ಹೊಂದಿರುವ ಜೆಡಿಎಸ್ ಸ್ವಂತ ಬಲದಿಂದ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವುದು ಕಷ್ಟವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿ ನಿಲ್ಲಿಸಿದರೆ ನಾಲ್ಕನೇ ಅಭ್ಯರ್ಥಿ ಗೆಲವು ಸುಲಭವಾಗಲಿದೆ. ಆದರೆ ಈಗಾಗಲೇ ಜೆಡಿಎಸ್ ರಿಯಲ್ ಎಸ್ಟೇಟ್ ಉದ್ಯಮಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಲು ಬಹುತೇಕವಾಗಿ ತೀರ್ಮಾನಿಸಿದೆ. ಹೀಗಾಗಿ ನಾಲ್ಕನೇ ಸ್ಥಾನದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ಕುದುರೆ ವ್ಯಾಪಾರಕ್ಕೆ ಅವಕಾಶ
ಲೇಹರ್ ಸಿಂಗ್ ಮತ್ತು ಕುಪೇಂದ್ರ ರೆಡ್ಡಿಯವರಿಗೆ ಬೇರೆ ಪಕ್ಷದ ಮತಗಳನ್ನು ಸೆಳೆಯುವುದು ಅನಿವಾರ್ಯ. ಹೀಗಾಗಿ ಕುದುರೆ ವ್ಯಾಪಾರ ಜೋರಾಗಿ ನಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ನಡುವೆ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗತೊಡಗಿದ್ದು, ಈಗಾಗಲೇ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಲ್ಕನೇ ಸ್ಥಾನದ ಅಭ್ಯರ್ಥಿಯನ್ನು ಗೆಲ್ಲಿಸುವ ಕುರಿತು ಹಿರಿಯ ನಾಯಕರಲ್ಲಿ ಒಮ್ಮತವಿಲ್ಲದೇ ಇರುವುದು ಕುದುರೆ ವ್ಯಾಪಾರ ಜೋರಾಗಿ ನಡೆಯಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ|ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್
ಕಾಂಗ್ರೆಸ್ ಈಗಾಗಲೇ ರಾಜ್ಯದಿಂದ ಜಯರಾಮ್ ರಮೇಶ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಬಿಜೆಪಿ ಅಧಿಕೃತವಾಗಿಯೇ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಶಾಸಕ, ನವರಸನಾಯಕ ಜಗ್ಗೇಶ್ ಅವಕಾಶ ಪಡೆದಿದ್ದಾರೆ. ಈ ಮೂವರ ಆಯ್ಕೆ ಬಹುತೇಕ ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕೆ ಯಾರು ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದ್ದು, ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳಿಗೂ ಕಾರಣವಾಗಿದೆ.