ಬೆಂಗಳೂರು: ಮಂಗಳವಾರ (ಫೆ. 26) ನಡೆಯಲಿರುವ ರಾಜ್ಯಸಭಾ ಚುನಾವಣಾ (Rajya Sabha Election) ಕಣ ರಂಗೇರಿದೆ. ಇದಕ್ಕಾಗಿ ಈಗಾಗಲೇ “ನಂಬರ್ ಗೇಮ್” ಸಹ ಆರಂಭವಾಗಿದೆ. ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಷ್ಟು ಸಂಖ್ಯಾಬಲ ಇದೆ. ಆದರೆ, ಇದಕ್ಕೆ ಶಾಸಕರೊಬ್ಬರ ನಿಧನದಿಂದ ಒಂದು ಮತದ ಕೊರತೆ ಎದುರಾಗಿದೆ. ಅಡ್ಡ ಮತದಾನದ (Cross voting) ಭೀತಿಯೂ ಎದುರಾಗಿದ್ದರಿಂದ ರೆಸಾರ್ಟ್‌ಗೆ ಶಿಫ್ಟ್ (Resort Politics) ಆಗಿದೆ. ಈ ನಡುವೆ ಮೂರೂ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ತಮ್ಮ ಶಾಸಕರಿಗೆ ವಿಪ್ ಜಾರಿ (Whip issue) ಮಾಡಿವೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಖಾಸಗಿ ಹೋಟೆಲ್‌ಗೆ ಶಿಫ್ಟ್ ಆಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ಹಿಲ್ಟನ್ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ಇಂದು (ಸೋಮವಾರ) ರಾತ್ರಿ ಈ ಹೋಟೆಲ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೆ, ಶಾಸಕರ ವಾಸ್ತವ್ಯಕ್ಕಾಗಿ ಹೈಫೈ ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಒಟ್ಟು 150 ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಹೋಟೆಲ್‌ನಿಂದ ಕಾಂಗ್ರೆಸ್ ಶಾಸಕರೆಲ್ಲರೂ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾವಣೆ ಮಾಡಲಿದ್ದಾರೆ.
ಕಡ್ಡಾಯ ಮತದಾನಕ್ಕೆ ಕಾಂಗ್ರೆಸ್ ಸೂಚನೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಭಾಗಿಯಾಗುವಂತೆ ವಿಪ್ ಜಾರಿ ಮಾಡಲಾಗಿದೆ. ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸೂಚಿಸಲಾಗಿದೆ.
ಬಿಜೆಪಿಯಿಂದ ವಿಪ್ ಜಾರಿ
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ಪ್ರತಿಪಕ್ಷ ಸಚೇತಕ ದೊಡ್ಡನಗೌಡ ಪಾಟೀಲ್ ವಿಪ್ ಜಾರಿ ಮಾಡಿದ್ದಾರೆ. ಬಿಜೆಪಿಯ 66 ಶಾಸಕರಿಗೂ ವಿಪ್ ಜಾರಿಯಾಗಿದ್ದು, ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಪಕ್ಷ ಸೂಚಿಸಿರುವ ಅಭ್ಯರ್ಥಿಗೆ ಮತ ಹಾಕುವಂತೆ ಸೂಚನೆ ನೀಡಲಾಗಿದೆ.
ಜೆಡಿಎಸ್‌ನಲ್ಲಿ ವಿಪ್ ಜಾರಿ
ಜೆಡಿಎಸ್ ಮುಖ್ಯ ಸಚೇತಕ ಸುರೇಶ್ ಬಾಬು ಅವರು ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಕಡ್ಡಾಯ ಮತದಾನಕ್ಕೆ ಸೂಚನೆ ನೀಡಿದ್ದಾರೆ.
ಹೋಟೆಲ್ ವಾಸ್ತವ್ಯ ಕೈಬಿಟ್ಟ ಜೆಡಿಎಸ್
ಹೋಟೆಲ್ ವಾಸ್ತವ್ಯದ ಪ್ಲ್ಯಾನ್ ಅನ್ನು ಜೆಡಿಎಸ್ ಕೈಬಿಟ್ಟಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ವಿಧಾನಸೌಧದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಕೊಠಡಿಗೆ ಬರುವಂತೆ ಜೆಡಿಎಸ್ ಶಾಸಕರಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಈ ಸೂಚನೆ ನೀಡಲಾಗಿದೆ.
ಅಶೋಕ್ ಜತೆ ಎಚ್‌ಡಿಕೆ ಸಭೆ
ಈ ಮಧ್ಯೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಜತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಊಟಕ್ಕೆ ಬಂದಿದ್ದೆವು. ಊಟ ಮಾಡಿದ್ದೇವೆ. ಈಗ ವಾಪಸ್ ಹೋಗುತ್ತಿದ್ದೇವೆ. ನಮ್ಮ ಮತವನ್ನು ಯಾವ ರೀತಿ ಹಾಕಬೇಕು ಅಂತ ಒಂದು ಸಣ್ಣ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಈ ವೇಳೆ ಕುಪೇಂದ್ರ ರೆಡ್ಡಿ ಅವರು ಗೆಲ್ಲುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ “ನೋಡೋಣ ನಾಳೆ ಗೊತ್ತಾಗುತ್ತದೆ” ಎಂದು ಹೇಳಿ ಹೊರಟರು.