Site icon Vistara News

Sudha Murty: ಡಾ.ಮಂಜುನಾಥ್‌ ಗೆಲುವಿಗಾಗಿ ರಾಯರಿಗೆ ವಿಶೇಷ ಹರಕೆ ಹೊತ್ತ ಸುಧಾಮೂರ್ತಿ; ಏನದು?

Sudha Murty

Rajya Sabha Member Sudha Murty Vows A Prayer For Dr CN Manjunath's Win In Lok Sabha Election

ಬೆಂಗಳೂರು: ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ, ರಾಜ್ಯಸಭೆ ಸದಸ್ಯೆ, ಲೇಖಕಿ ಹಾಗೂ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿರುವ ಸುಧಾ ಮೂರ್ತಿ (Sudha Murty) ಅವರು ವಿಶೇಷ ಹರಕೆ ಹೊತ್ತಿದ್ದಾರೆ. ಹಾಗಂತ, ಸುಧಾ ಮೂರ್ತಿ ಅವರು ತಮಗಾಗಿ, ತಮ್ಮ ಕುಟುಂಬಸ್ಥರ ಏಳಿಗೆಗಾಗಿ ಹರಕೆ ಹೊತ್ತಿಲ್ಲ. ಬದಲಾಗಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಸಿ.ಎನ್‌.ಮಂಜುನಾಥ್‌ (Dr C N Manjunath) ಅವರ ಗೆಲುವಿಗಾಗಿ ಮಂತ್ರಾಲಯದ ರಾಯರ ಬಳಿ ಸುಧಾ ಮೂರ್ತಿ ಅವರು ಹರಕೆ ಹೊತ್ತಿದ್ದಾರೆ.

ಡಾ.ಮಂಜುನಾಥ್ ಅವರೇ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಅವರು ಗೆಲುವು ಸಾಧಿಸಿದರೆ ಮಂತ್ರಾಲಯದಿಂದ 6 ಕಿಲೋಮೀಟರ್‌ ದೂರದ ಜಾಗದಿಂದ ಕಾಲ್ನಡಿಗೆಯಲ್ಲಿ ತೆರಳಿ ರಾಯರ ಪೂಜೆ ಮಾಡುತ್ತೇನೆ ಎಂಬುದಾಗಿ ಸುಧಾ ಮೂರ್ತಿ ಅವರು ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ನಾನು ಸುಧಾ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ. ಇದೇ ವೇಳೆ ಸುಧಾ ಮೂರ್ತಿ ಅವರು ತಮ್ಮ ಹರಕೆ ಕುರಿತು ಹೇಳಿದ್ದಾರೆ” ಎಂದು ಮಂಜುನಾಥ್‌ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಡಾ.ಮಂಜುನಾಥ್‌ ಅವರ ಭಾಷಣದ ವಿಡಿಯೊವನ್ನು ‘ಬೆಂಗಳೂರು ಮೀಡಿಯಾ ವರ್ಲ್ಡ್‌ ಬಿಎಂಡಬ್ಲ್ಯೂ’ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದೆ.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲ 28 ಕ್ಷೇತ್ರಗಳ ನೂರಾರು ಅಭ್ಯರ್ಥಿಗಳಲ್ಲಿ ಕುತೂಹಲ ನೂರ್ಮಡಿಯಾಗಿದೆ. ಹಾಗಾಗಿ, ಆಯಾ ಅಭ್ಯರ್ಥಿಗಳ ಕುಟುಂಬಸ್ಥರು ದೇವರಿಗೆ ಹತ್ತಾರು ಹರಕೆ ಹೊತ್ತುಕೊಂಡಿದ್ದಾರೆ. ಆದರೆ, ಸುಧಾ ಮೂರ್ತಿ ಅವರು ಜಯದೇವ ಆಸ್ಪತ್ರೆ ನಿರ್ದೇಶಕರೂ ಆಗಿದ್ದ ಡಾ.ಸಿ.ಎನ್.ಮಂಜುನಾಥ್‌ ಅವರ ಗೆಲುವಿಗಾಗಿ ಹರಕೆ ಹೊತ್ತುಕೊಂಡಿರುವುದು ವಿಶೇಷವಾಗಿದೆ.

ಕಳೆದ ಮಾರ್ಚ್‌ನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸುಧಾ ಮೂರ್ತಿ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್‌ ಧನಕರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದ್ದರು. ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಪಿಯೂಷ್‌ ಗೋಯಲ್‌ ಅವರು ಉಪಸ್ಥಿತರಿದ್ದರು. ಸುಧಾಮೂರ್ತಿ ಅವರ ಜೀವನ ಸಂಗಾತಿ ಎನ್‌.ಆರ್‌. ನಾರಾಯಣ ಮೂರ್ತಿ ಅವರು ಕೂಡ ಇದ್ದರು.

ಇದನ್ನೂ ಓದಿ: Sudha Murthy : ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ ಸುಧಾ ಮೂರ್ತಿ; ನಾರಾಯಣಮೂರ್ತಿ ಸಾಥ್‌

Exit mobile version