Site icon Vistara News

ಇಂದು ರಾಜ್ಯಸಭೆ ಮತದಾನ, ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯುವುದು ಹೀಗೆ

preferential voting method in kannada

ಬೆಂಗಳೂರು: ಪ್ರಿಫರೆನ್ಷಿಯನ್‌ ವೋಟಿಂಗ್‌. ಅಂದರೆ ಪ್ರಾಶಸ್ತ್ಯದ ಮತ ವ್ಯವಸ್ಥೆಯನ್ನು ರಾಜ್ಯಸಭೆ ಚುನಾವಣೆಗೆ ಆಯ್ದುಕೊಳ್ಳಲಾಗಿದೆ. ಈ ವ್ಯವಸ್ಥೆಯಲ್ಲಿನ ಮೂಲ ಅಂಶವೆಂದರೆ, ಯಾವುದೇ ಅಭ್ಯರ್ಥಿಯು ಅವಶ್ಯಕ ಮತಕ್ಕಿಂತ 50% ಹಾಗೂ ಅದಕ್ಕಿಂತ ಒಂದು ಮತ ಗಳಿಸಿದರೆ ಅವರನ್ನು ವಿಜಯಿ ಎಂದು ಘೋಷಿಸುವುದು.

ಮತದಾನ ಹೇಗೆ?

ಒಂದು ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಒಂದು ಸ್ಥಾನಕ್ಕೆ ಆಯ್ಕೆ ಮಾಡುವುದಿರಬಹುದು ಅಥವಾ ಎರಡು ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡುವುದಿರಬಹುದು. ಅಥವಾ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕು ಜನರನ್ನು ಆಯ್ಕೆ ಮಾಡುವುದಿರಬಹುದು. ಎಲ್ಲದಕ್ಕೂ ಒಂದೇ ಮತಪತ್ರವಿರುತ್ತದೆ. ಒಂದೇ ಮತಪತ್ರದಲ್ಲಿ ಎಲ್ಲ ಆರು ಅಭ್ಯರ್ಥಿಗಳ ಹೆಸರನ್ನೂ ನಮೂದಿಸಲಾಗಿರುತ್ತದೆ.

ಶಾಸಕರು ತಮ್ಮ ಆದ್ಯತೆಗಳನ್ನು ಅಭ್ಯರ್ಥಿಗಳ ಹೆಸರಿನ ಎದುರು ನಮೂದಿಸಿರುವ ಚೌಕದಲ್ಲಿ ನಮೂದಿಸಬೇಕು. ಇದರಲ್ಲಿ ಸಂಖ್ಯೆ 1 ಎಂದು ನಮೂದಿಸಿದ ಪ್ರಾಶಸ್ತ್ಯವು ಪೂರ್ಣ ಅಂಕ ಹೊಂದಿರುತ್ತದೆ. ಉಳಿದಂತೆ 2,3, ನಂತರದ ಪ್ರಾಶಸ್ತ್ಯಗಳನ್ನು ಒಟ್ಟು ಮತ ಚಲಾಯಿಸಿದ ಮತದಾರರು ಹಾಗೂ ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಲೆಕ್ಕ ಮಾಡಲಾಗುತ್ತದೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್‌: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!

ಗೆಲ್ಲಲು ಬೇಕಾದ ಮತಗಳು

ಒಬ್ಬ ಅಭ್ಯರ್ಥಿ ಗೆಲ್ಲಲು ಬೇಕಾದ ಮತಗಳನ್ನು(ಕೋಟಾ) ನಿಗದಿ ಮಾಡಲು ಸೂತ್ರವಿದೆ. ಇದನ್ನು ಸರಳವಾಗಿ ಹೀಗೆ ಹೇಳಬಹುದು. ಕೋಟಾ = (ಒಟ್ಟು ಅರ್ಹ ಮತಗಳು/ಭರ್ತಿ ಮಾಡಬೇಕಾದ ಸ್ಥಾನಗಳು+1) +1.

ಇದರ ಆಧಾರದಲ್ಲಿ, ಕರ್ನಾಟಕದಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 224 (ಶಾಸಕರು). ಭರ್ತಿಯಾಗಬೇಕಾದ ಸ್ಥಾನಗಳು 4. ಈ ಸೂತ್ರದ ಆಧಾರದಲ್ಲಿ ಫಲಿತಾಂಶ 45 ಪೂರ್ಣಾಂಕವಾಗುತ್ತದೆ. ಅಂದರೆ ಇದೀಗ ಕರ್ನಾಟಕದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ವ್ಯಕ್ತಿ ಕನಿಷ್ಟ 45 ಮತಗಳನ್ನು ಪಡೆಯಬೇಕು.

ಈ ಲೆಕ್ಕದಲ್ಲಿ ಸದ್ಯ ಬಿಜೆಪಿ ಬಳಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ನಂತರ 32 ಮತಗಳು ಉಳಿಯುತ್ತವೆ. ಕಾಂಗ್ರೆಸ್‌ ಬಳಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡ ನಂತರ 24 ಮತಗಳು ಉಳಿಯುತ್ತವೆ. ಜೆಡಿಎಸ್‌ ಬಳಿ 32 ಪ್ರಥಮ ಪ್ರಾಶಸ್ತ್ಯದ ಮತಗಳಿವೆ. ಈ ನಾಲ್ಕನೇ ಸ್ಥಾನಕ್ಕೆಆಗಿ ಇದೀಗ ಮೂವರು ಸ್ಪರ್ಧೆ ಮಾಡುತ್ತಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಶಾಸಕರನ್ನು ವಿಭಾಗ ಮಾಡಿಕೊಂಡಿವೆ. ನಿರ್ಮಲಾ ಸೀತಾರಾಮನ್‌ ಅವರಿಗೆ 45 ಮತಗಳ ಜತೆಗೆ ಒಂದು ಹೆಚ್ಚುವರಿ, ಜಗ್ಗೇಶ್‌ ಅವರಿಗೆ 45 ಮತಗಳ ಜತೆಗೆ ಒಂದು ಹೆಚ್ಚುವರಿ ಮತವನ್ನು ಮೀಸಲಿಡಲಾಗಿದೆ. ಯಾವುದೇ ಶಾಸಕರ ಮತ ಕುಲಗೆಟ್ಟರೆ ಫಲಿತಾಂಶಕ್ಕೆ ತೊಂದರೆ ಆಗಬಾರದು ಎಂದು ಈ ಒಂದು ಮತದ ಹೆಚ್ಚುವರಿ ನೀಡುವ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಜೆಡಿಎಸ್‌ ತನ್ನ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ನೀಡುತ್ತದೆ. ಎರಡನೇ ಪ್ರಾಶಸ್ತ್ಯದ ಮತಗಳನ್ನು ನೀಡುವ ಕುರಿತು ಗೊಂದಲಗಳಿವೆ.

ಅರೆ ಗೌಪ್ಯತೆ

ಈ ಮತದಾನವನ್ನು ಗೌಪ್ಯ ಹಾಗೂ ಗೌಪ್ಯವಲ್ಲದ ಮತದಾನ ಎಂದು ಕರೆಯಬಹುದು. ಏಕೆಂದರೆ ಮತದಾರ ತಾನು ಪಕ್ಷ ಸೂಚಿಸಿದ ಅಭ್ಯರ್ಥಿಗೇ ಮತ ನೀಡಬೇಕು ಎಂದು ಪಕ್ಷದಿಂದ ವಿಪ್‌ ಹೊರಡಿಸಲಾಗಿರುತ್ತದೆ. ಈ ವಿಪ್‌ ಪಾಲನೆ ಆಗಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಮುಖ್ಯ ಸಚೇತಕನಿಗೆ ಮತಪತ್ರವನ್ನು ತೋರಿಸಬೇಕು. ತೋರಿಸಿದ ನಂತರವಷ್ಟೆ ಮತಪೆಟ್ಟಿಗೆಗೆ ಹಾಕಬೇಕು. ಹಾಗೊಂದುವೇಳೆ ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ನೀಡದಿದ್ದಲ್ಲಿ ( ಇದನ್ನು ಅಡ್ಡ ಮತದಾನ ಎನ್ನಲಾಗುತ್ತದೆ) ಮತ ಅನೂರ್ಜಿತ ಆಗುವುದಿಲ್ಲ. ಆ ಮತ ಲೆಕ್ಕಕ್ಕೆ ಸೇರಿಕೊಳ್ಳುತ್ತದೆ. ಆದರೆ, ಈ ರೀತಿ ವಿಪ್‌ ಉಲ್ಲಂಘಿಸಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ಪಕ್ಷ ಕೈಗೊಳ್ಳಬಹುದು, ಆತನ ಶಾಸಕ ಸ್ಥಾನವನ್ನು ರದ್ದುಪಡಿಸುವಂತೆ ಸ್ಪೀಕರ್‌ಗೆ ಮನವಿ ಮಾಡಬಹುದು. ಒಟ್ಟಾರೆ, ಅಡ್ಡ ಮತದಾನದಿಂದ ಫಲಿತಾಂಶದ ಮೇಲೆ ಯಾವುದೇ ವ್ಯತ್ಯಾಸ ಆಗುವುದಿಲ್ಲ.ಚಲಾಯಿಸಿದ ಮತ ಅನೂರ್ಜಿತವಾಗುವುದಿಲ್ಲ.

ಕುಲಗೆಟ್ಟ ಮತ ಆಗೋದು ಹೀಗೆ

  1. ಸಂಖ್ಯೆ 1 ನ್ನು ಯಾರಿಗೂ ನಮೂದಿಸದೇ ಇದ್ದಾಗ
  2. ಒಂದಕ್ಕಿಂತ ಹೆಚ್ಚಿನವರಿಗೆ ಸಂಖ್ಯೆ 1ನ್ನು ನಮೂದಿಸಿದಾಗ
  3. ಯಾವುದೇ ಪ್ರಾಶ್ತ್ಯವನ್ನು ನಮೂದಿಸದೇ ಇದ್ದಾಗ
  4. ಸಂಖ್ಯೆ 1 ಎನ್ನುವುದು ಯಾವ ಅಭ್ಯರ್ಥಿಗೆ ನೀಡಲಾಗಿದೆ ಎಂದು ಅನುಮಾನ ಬರುವಂತೆ ನಮೂದಿಸಿದ್ದರೆ
  5. ಒಬ್ಬರೇ ಅಭ್ಯರ್ಥಿಗೆ ಸಂಖ್ಯೆ 1ರ ಜತೆಗೆ ಇತರೆ ಸಂಖ್ಯೆಗಳನ್ನೂ ( 2,3, ಇತ್ಯಾದಿ) ನಮೂದಿಸಿದಾಗ
  6. ಪ್ರಾಶಸ್ತ್ರ್ಯವನ್ನು ಅಂಕಿಯ ಬದಲಿಗೆ ಅಕ್ಷರದಲ್ಲಿ (ಒಂದು, ಎರಡು, ಇತ್ಯಾದಿ) ನಮೂದಿಸಿದ್ದರೆ
  7. ಮತದಾರ ಯಾರು ಎಂದು ಗುರುತಿಹಿಡಿಯಲು ಸಾಧ್ಯವಾಗಬಹುದಾದಂತಹ ಯಾವುದೇ ಗುರು ಇದ್ದರೆ
  8. ಚುನಾವಣಾಧಿಕಾರಿ ನೀಡಿರುವ ಪೆನ್ನಿನ ಹೊರತಾಗಿ ಯಾವುದೇ ಪೆನ್ನಿನಿಂದ ಮತ ಚಲಾಯಿಸಿದಾಗ
  9. ಅಭ್ಯರ್ಥಿಯ ಹೆಸರಿನ ಎದುರು ಅಂಕಿ ಮೂದಿಸಲು ನೀಡಲಾದ ಬಾಕ್ಸ್‌ ಹೊರತುಪಡಿಸಿ ಅಭ್ಯರ್ಥಿಯ ಹೆಸರಿನ ಮೇಲೆ ಅಥವಾ ಪಕ್ಕದಲ್ಲೇ ಅಂಕಿ ಬರೆದಾಗ

ಫಲಿತಾಂಶ ಘೋಷಣೆ ಪ್ರಕ್ರಿಯೆ

ಪ್ರಾಶ್ತ್ಯದ ಆಧಾರದಲ್ಲಿ ಫಲಿತಾಂಶ ಘೋಷಣೆ ಪ್ರಕ್ರಿಯೆಯು ಸಂಕೀರ್ಣವಾಗಿದೆ. ಈಗಾಗಲೆ ಹೇಳಿದಂತೆ, ಒಬ್ಬ ಅಭ್ಯರ್ಥಿಯು ನಿಗದಿತ ಕೋಟಾ ಮತಗಳನ್ನು ಪಡೆದ ನಂತರವಷ್ಟೆ ವಿಜಯಿ ಎಂದು ಘೋಷಿಸಲಾಗುತ್ತದೆ. ಈಗಿನ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ, ಶಾಸಕರು ಯಾವುದೇ ಎಡವಟ್ಟು ಮಾಡಿಕೊಳ್ಳದೆ ತಮ್ಮ ಪಕ್ಷದ ವಿಪ್‌ಗೆ ಅನುಗುಣವಾಗಿ ಮತ ಚಲಾಯಿಸಿದರೆ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಹಾಗೂ ಜೈರಾಮ್‌ ರಮೇಶ್‌ ಆಯ್ಕೆಯಾಗುತ್ತಾರೆ. ನಂತರದಲ್ಲಿ ಮೂವರು ಅಭ್ಯರ್ಥಿಗಳಿಗೆ (ಲೆಹರ್‌ಸಿಂಗ್‌ ಸಿರೋಯಾ, ಕುಪೇಂದ್ರ ರೆಡ್ಡಿ ಹಾಗೂ ಮನ್ಸೂರ್‌ ಖಾನ್‌) ಗೆಲ್ಲುವಷ್ಟು(45ಪ್ರಥಮ ಪ್ರಾಶಸ್ತ್ಯದ ಮತಗಳಿಲ್ಲ.

ಇಂತಹ ಸಂದರ್ಭದಲ್ಲಿ, ಈಗಾಗಲೆ ಆಯ್ಕೆಯಾಗಿರುವಾ ಅಭ್ಯರ್ಥಿಗಳಲ್ಲಿ ನಿಗದಿತ ಕೋಟಾಕ್ಕಿಂತ ಹೆಚ್ಚಿನ ಮತಗಳನ್ನು (ಸರ್‌ಪ್ಲಸ್‌) ಯಾರಾದರೂ ಪಡೆದಿದ್ದರೆ ಅದನ್ನು ಈ ಮೂವರು ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆಗಲೂ ಯಾರೂ 45ರ ಗಡಿ ಮುಟ್ಟದಿದ್ದರೆ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

ಆಗಲೂ ಯಾರೂ 45ರ ಗಡಿ ಮುಟ್ಟದಿದ್ದರೆ, ಹೊರಹಾಕುವ(ಎಲಿಮಿನೇಷನ್‌) ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮೂವರಲ್ಲಿ ಅತ್ಯಂತ ಕಡಿಮೆ ಮತ ಪಡೆದಿರುವ ಅಭ್ಯರ್ಥಿಯನ್ನು ಹೊರಹಾಕಲಾಗುತ್ತದೆ. ಈಗಿನ ಸಂಖ್ಯಾ ಲೆಕ್ಕಾಚಾರದ ಸಂದರ್ಭದಲ್ಲಿ ಕಾಂಗ್ರೆಸ್‌ನ ಮನ್ಸೂರ್‌ ಖಾನ್‌ ಹೊರಹೋಗುತ್ತಾರೆ. ಅವರಿಗೆ ಲಭಿಸಿರುವ ಮತಗಳನ್ನು ಎರಡನೇ ಪ್ರಾಶಸ್ತ್ಯದ ಮತಗಳ ಮೌಲ್ಯದ ಆಧಾರದಲ್ಲಿ ಮೊದಲ ಅಭ್ಯರ್ಥಿ(ಈಗಿನ ಸಂದರ್ಭದಲ್ಲಿ ಲೆಹರ್‌ ಸಿಂಗ್‌ ಸಿರೋಯಾ) ಅವರಿಗೆ ಹಂಚಿಕೆ ಮಾಡಲಾಗುತ್ತದೆ.

ಆಗಲೂ ಯಾರೂ 45ರ ಗಡಿ ಮುಟ್ಟದಿದ್ದರೆ, ಉಳಿದಿರುವ ಮತ್ತೊಬ್ಬ ಅಭ್ಯರ್ಥಿಯ ಎಲಿಮಿನೇಷನ್‌ ಮಾಡಲಾಗುತ್ತದೆ. ಅಂದರೆ ಕುಪೇಂದ್ರ ರೆಡ್ಡಿ ಅವರ ಮತಗಳನ್ನು, ಎರಡನೇ ಪ್ರಾಶಸ್ತ್ಯದ ಮತಗಳ ಮೌಲ್ಯದ ಆಧಾರದಲ್ಲಿ ಮೊದಲ ಅಭ್ಯರ್ಥಿಗೆ ಹಂಚಿಕೆ ಮಾಡಲಾಗುತ್ತದೆ. ಈ ಮೂಲಕ, ಕೊನೆಯ ಸುತ್ತಿಗೆ ಒಬ್ಬರೇ ಅಭ್ಯರ್ಥಿ ಉಳಿಯುತ್ತಾರೆ, ಅವರನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ.

ವಿ.ಸೂ.: ಇಲ್ಲಿ ಈಗಿನ ಸಂದರ್ಭವನ್ನು ಮಾತ್ರ ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಜೆಡಿಎಸ್‌ ಶಾಸಕರು ಅಡ್ಡ ಮತದಾನ ಮಾಡಿದರೆ, ಕಾಂಗ್ರೆಸ್‌ ಶಾಸಕರು ಅಡ್ಡಮತದಾನ ಮಾಡಿದರೆ ಒಟ್ಟಾರೆ ಲೆಕ್ಕಾಚಾರ ಮತ್ತಷ್ಟು ಭಿನ್ನವಾಗಿರುತ್ತದೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್‌: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!

Exit mobile version