Site icon Vistara News

Ram Mandir: ರಾಮ ಮಂದಿರಕ್ಕೆ ಕನ್ನಡಿಗ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ವಿಗ್ರಹ ಆಯ್ಕೆ

Ram Lalla sculpted by Arun Yogiraj has been selected to installation in Ram Mandir

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ (Arun Yogiraj) ಅವರು ಕೆತ್ತನೆಯ ಮೂರ್ತಿ(Ram lalla Statue)ಯನ್ನೇ ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ (Rama Mandir Trust) ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ. ಈಗ ಸದ್ಯ ಇರುವ ರಾಮಲಲ್ಲಾ ವಿಗ್ರಹವನ್ನೂ ಹೊಸ ದೇವಾಲಯದಲ್ಲೂ ಇಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಮೂವರು ಪ್ರಮುಖ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ರಾಮಲಲ್ಲಾ ಮೂರ್ತಿಯನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೂವರೂ ಶಿಲ್ಪಿಗಳು ತಮ್ಮ ಕಲ್ಪನೆಯ ರಾಮ ಲಲ್ಲಾನ ಮೂರ್ತಿಯನ್ನು ನಿರ್ಮಿಸಿ ಸಮರ್ಪಿಸಿದ್ದಾರೆ. ಇವುಗಳ ಪೈಕಿ ಕನ್ನಡಿಗ ಅರುಣ್ ಯೋಗಿರಾಜ್ ಅವರು ಮೂರ್ತಿ ಆಯ್ಕೆಯಾಗಿದೆ.

ಎಚ್.ಡಿ ಕೋಟೆಯ ಕೃಷ್ಣ ಶಿಲೆ ಬಳಸಿ ಮಾಡಿದ ಮೂರ್ತಿ

ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ.

ಅರುಣ್ ಯೋಗಿರಾಜ್ ಅವರ ಮೂರ್ತಿ ಆಯ್ಕೆ ಯಾಕೆ?

ಈ ವಿಗ್ರಹ ಆಯ್ಕೆಯಾಗಿರುವುದರ ಹಿಂದೆ ಕನ್ನಡಿಗ ಶಿಲ್ಪಿ ಅರುಣ್​ ಅವರ ಅಪಾರ ಪರಿಶ್ರಮ. ಭಕ್ತಿ, ಶ್ರದ್ಧೆಯಿದೆ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಆದರೆ, ಈ ವಿಗ್ರಹ ಆಯ್ಕೆಯಾಗುವುದಕ್ಕೆ ಅವಷ್ಟೇ ಕಾರಣವಲ್ಲ. ತೀರ್ಪುಗಾರರು ಅಂತಿಮಗೊಳಿಸುವ ಮೊದಲು ಇನ್ನಷ್ಟು ಸಂಗತಿಗಳನ್ನು ನೋಡಿ ಮೆಚ್ಚಿದ್ದಾರೆ. ಅವುಗಳೇನೆಂಬುದನ್ನು ನೋಡೋಣ.

ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರ​ ಸಂಖ್ಯೆಯ ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಹಿಂದಿನ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್​. ಆ ಮೂವರಲ್ಲಿಯೂ ಅರುಣ್​ ಅವರ ಭಾವಕ್ಕೆ ಹಾಗೂ ಕಲ್ಪನೆಗೆ ಮನ್ನಣೆ ದೊರಕಿದೆ ಎಂಬುದೇ ವಿಶೇಷ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್​ ಶಿಲ್ಪಿಗಳು. ಆದರೆ ಉಳಿದಿಬ್ಬರು ರಚಿಸಿದ ಮೂರ್ತಿಗಿಂತಲೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.

ಅರುಣ್ ಅವರು ರಚನೆ ಆಯ್ಕೆಯಾಗಲು ಮೊದಲ ಕಾರಣವೇ ವಿಗ್ರಹ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆ ಆಗಲಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Ram Mandir : ಮೈಸೂರಿನ ಅರುಣ್​ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ? ಇಲ್ಲಿದೆ ವಿವರ

Exit mobile version