ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿರುವ ಬಾಲರಾಮನ (Ram lalla Statue) ವಿಗ್ರಹ ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ನಿರ್ಮಿಸಲಾಗಿರುವ ರಾಮಮಂದಿರದಲ್ಲಿ (Ram Mandir) ಪ್ರತಿಷ್ಠಾಪನೆಗೊಳ್ಳಲಿರುವುದು ನಿಶ್ಚಿತವಾಗಿದೆ. ಈ ವಿಗ್ರಹ ಆಯ್ಕೆಯಾಗಿರುವುದರ ಹಿಂದೆ ಕನ್ನಡಿಗ ಶಿಲ್ಪಿ ಅರುಣ್ ಅವರ ಅಪಾರ ಪರಿಶ್ರಮ. ಭಕ್ತಿ, ಶ್ರದ್ಧೆಯಿದೆ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಹಾಗಾದರೆ, ಯಾರಿವರು ಅರುಣ್ ಯೋಗಿರಾಜ್? ಇವರ ಹಿನ್ನೆಲೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಂಬಿಎ ಪದವೀಧರ ಅರುಣ್
ಶಿಲ್ಪಿ ಅರುಣ್ ಯೋಗಿರಾಜ್ ಅವರು ಎಂಬಿಎ ಪದವೀಧರ. ಶಿಲ್ಪಕಲೆಯೇ ಅವರ ಕುಲಕಸುಬು. ಅವರ ಕುಟುಂಬದ ಐದನೇ ತಲೆಮಾರಿನ ಶಿಲ್ಪಿ. ಅವರು 2008ರಿಂದ ಇಲ್ಲಿಯವರೆಗೆ 1000ಕ್ಕೂ ಹೆಚ್ಚು ವಿಗ್ರಹಗಳನ್ನು ಕೆತ್ತನೆ ಮಾಡಿದ್ದಾರೆ. ಅದರಲ್ಲೂ, ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೂಡ ಇವರೇ ಕೆತ್ತಿದ್ದಾರೆ. ನವ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇವರೇ ಅರಳಿಸಿದ್ದಾರೆ.
ಕರುನಾಡಿನ ಕಲ್ಲು
ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ.
ಅರುಣ್ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ:
ಮೂರ್ತಿ ತಯಾರಿಕೆಗೆ ಅರುಣ್ ಆರು ತಿಂಗಳ ಹಿಂದೆ ಮನೆಯಿಂದ ತೆರಳಿದ್ದಾರೆ. ಅರುಣ್ ಅವರು ಸತತವಾಗಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಕೆಲವೊಂದು ಬಾರಿ ದಿನದ 24 ಗಂಟೆಗೆಯೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಯಾಕೆಂದರೆ ರಾಮಲಲ್ಲಾನ ಮೂರ್ತಿಗೆ ಮಾದರಿಯೇ ಇರಲಿಲ್ಲ. ಬೇರೆಲ್ಲ ದೇವರ ಪ್ರತಿಮೆಗೆ ಮಾದರಿಗಳಿರುತ್ತವೆ. ಆದರೆ, ಬಾಲರಾಮನಿಗೆ ಇಲ್ಲ. ಹೀಗಾಗಿ ಅದನ್ನು ಕಲ್ಪಿಸಿಕೊಂಡು ಮಾಡುವ ಜವಾಬ್ದಾರಿ ಅರುಣ್ ಅವರ ಮೇಲಿತ್ತು. ಅದನ್ನು ಅವರು ಸಾಧಿಸಿದ್ದಾರೆ ಎಂದು ಇವರ ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತ ಖುಷಿಯಿಂದ ಹೇಳಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ