Site icon Vistara News

Ram Mandir: ಅಯೋಧ್ಯೆಯಲ್ಲಿ ರಾಮಮಂದಿರವೇ ಇರ್ಲಿಲ್ಲ; ಅಸಾದುದ್ದೀನ್‌ ಓವೈಸಿ ವಿವಾದ!

Kanwar Yatra

ಕಲಬುರಗಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ (Pran Pratishtha) ಮಾಡಲಿದ್ದಾರೆ. ಹಾಗಾಗಿ, ಎಲ್ಲೆಡೆ ರಾಮನ ಜಪ ಶುರುವಾಗಿದೆ. ಇದರ ಬೆನ್ನಲ್ಲೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು (Asaduddin Owaisi), “ಅಯೋಧ್ಯೆಯಲ್ಲಿ ರಾಮಮಂದಿರವೇ ಇರಲಿಲ್ಲ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “500 ವರ್ಷಗಳಿಂದ ಬಾಬರಿ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರವೇ ಇರಲಿಲ್ಲ. ಆದರೆ, ಷಡ್ಯಂತ್ರದ ಮೂಲದ ಮುಸ್ಲಿಮರಿಂದ ರಾಮಮಂದಿರವನ್ನು ಕಸಿದುಕೊಳ್ಳಲಾಯಿತು. ಕಾಂಗ್ರೆಸ್‌ನ ಜಿ.ಬಿ. ಪಂತ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಮಸೀದಿಯಲ್ಲಿ ರಾಮನ ಮೂರ್ತಿಗಳನ್ನು ಇರಿಸಲಾಯಿತು. ಆಗ, ನಾಯರ್‌ ಅವರು ಅಯೋಧ್ಯೆ ಜಿಲ್ಲಾಧಿಕಾರಿಯಾಗಿದ್ದರು. ಇದಾದ ಬಳಿಕ ರಾಮನ ಮೂರ್ತಿಗಳನ್ನು ಮಸೀದಿಯಿಂದ ತೆಗೆಯಲೇ ಇಲ್ಲ” ಎಂದು ತಿಳಿಸಿದ್ದಾರೆ.

“ರಾಮಮಂದಿರದ ಕುರಿತು ಮಹಾತ್ಮ ಗಾಂಧೀಜಿ ಅವರು ಎಂದಿಗೂ ಪ್ರಸ್ತಾಪ ಮಾಡಿಲ್ಲ. ವಿಶ್ವ ಹಿಂದು ಪರಿಷತ್‌ ಹುಟ್ಟುವ ಮೊದಲೇ ಮಸೀದಿ ಇತ್ತು. ಜಿ.ಬಿ. ಪಂತ್‌ ಅವರು ಮಸೀದಿಯಿಂದ ರಾಮನ ಮೂರ್ತಿಗಳನ್ನು ವಾಪಸ್‌ ತೆಗೆದುಕೊಂಡಿದ್ದರೆ 1992ರಲ್ಲಿ ಮಸೀದಿಯನ್ನು ನೆಲಸಮಗೊಳಿಸಲು ಆಗುತ್ತಿರಲಿಲ್ಲ. ತುಂಬ ವ್ಯವಸ್ಥಿತವಾಗಿ ಮಸೀದಿಯನ್ನು ಮುಸ್ಲಿಮರಿಂದ ಕಿತ್ತುಕೊಳ್ಳಲಾಯಿತು. ಇಂಡಿಯಾ ಒಕ್ಕೂಟದ ಸದಸ್ಯರಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರೂ ಈಗ ಹನುಮಾನ್‌ ಚಾಲೀಸಾ ಪಠಣ ಆಯೋಜಿಸಲು ಮುಂದಾಗಿದ್ದಾರೆ. ಎಲ್ಲರಿಗೂ ಬಹುಸಂಖ್ಯಾತರ ಮತಗಳೇ ಮುಖ್ಯವಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ram Mandir: ಅಮೆಜಾನ್‌ನಲ್ಲಿ ರಾಮಮಂದಿರ ಪ್ರಸಾದ ಸಿಗುತ್ತದೆಯೇ? ಕೇಂದ್ರ ಕೆಂಡವಾಗಿದ್ದೇಕೆ?

ರಾಮಲಲ್ಲಾ ಮೂರ್ತಿ ಕುರಿತು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ನೀಡಿದ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿದೆ. “ನಮ್ಮ ಗುರುಗಳಾದ ದ್ವಾರಕಾ ಮತ್ತು ಜೋಶಿಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್ ಅವರು, ರಾಮ ಜನ್ಮಭೂಮಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹವು ಬಾಲಕ ರಾಮನಾಗಿರಬೇಕು ಮತ್ತು ತಾಯಿ ಕೌಶಲ್ಯಾ ಮಡಿಲಲ್ಲಿ ಇರುವಂತಿರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಪ್ರತಿಷ್ಠಾಪನೆ ಮಾಡಲಾಗುತ್ತಿರುವ ವಿಗ್ರಹವು ಬಾಲಕ ರಾಮನ ರೀತಿಯಲ್ಲಿ ಕಾಣಿಸುತ್ತಿಲ್ಲ” ಎಂದು ಹೇಳಿದ್ದಾರೆ. ಇವರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version