ಬೆಂಗಳೂರು: ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸದ ಬಳಿಕ ಅಯೋಧ್ಯೆಗೆ ಹೋಗಿದ್ದೆ. ಅಲ್ಲಿ ಟೆಂಟಲ್ಲಿ ಎರಡು ಗೊಂಬೆಗಳನ್ನು (Toys Became god Srirama) ಇಟ್ಟು ಇದೇ ರಾಮ ಅಂತಿದ್ರು ಎಂಬ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಖಂಡಿಸಿದೆ. ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣ ಮಾತ್ರವಲ್ಲ, ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಕ್ಷಮೆ ಕೇಳಬೇಕು (BJP Asks for Apology) ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ (DV Sadananda Gowda) ಅವರು ಆಗ್ರಹಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ ಎಂದರು.
ʻʻರಾಜಣ್ಣನಿಗೆ ಬೊಂಬೆ ಕಂಡಿತೇ? ಅರಸಿನ ಕಾಮಾಲೆ ರೋಗದವರಿಗೆ ಅರಸಿನವಾಗಿಯೇ ಕಾಣುತ್ತದೆ. ಅವರನ್ನು ಸಹಕಾರ ಸಚಿವನಾಗಿ ಮಾಡಿದ್ದಾರಲ್ಲಾ… . ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು ಎಂದು ಹೇಳಿದರು ಡಿ.ವಿ. ಸದಾನಂದ ಗೌಡ.
14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಕಾಣುತ್ತಿದೆ. ಅಯೋಧ್ಯೆಯಲ್ಲಿ ಇದೇ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ವಿಚಾರ ಗಮನಿಸಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ ಎಂದು ಟೀಕಿಸಿದರು.
ʻʻನಾನು ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವ. ಅಲ್ಲಿ ಕೂತವರು ತಮ್ಮ ಬುದ್ಧಿಯನ್ನು ರಾಜ್ಯದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ಸಿಗರ ಹೇಳಿಕೆ ಗಮನಿಸಿದರೆ ಹುಚ್ಚುಚ್ಚು ಮಾತುಗಳು ಕಂಡುಬಡುತ್ತವೆ. ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆ, ರಾಜಣ್ಣನ ಹೇಳಿಕೆ ಗಮನಿಸಿದ ಜನತೆ ಇನ್ನು ಸುಮ್ಮನೆ ಇರಲಾರರು ಎಂದು ಕಿವಿಮಾತು ಹೇಳಿದರು ಡಿ.ವಿ. ಸದಾನಂದ ಗೌಡ.
ಕಾಂಗ್ರೆಸ್‌ನಲ್ಲಿ ಕೆಲವರು ಸಿದ್ದರಾಮಯ್ಯನವರ ಪರವಾಗಿ, ಇನ್ನೂ ಕೆಲವರು ಡಿ.ಕೆ.ಶಿವಕುಮಾರ್ ಪರವಾಗಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯರ ಓಲೈಕೆ ಮುಂದುವರೆದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ವಿಶ್ಲೇಷಿಸಿದರು.
ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದ ಡಿ.ವಿ. ಸದಾನಂದ ಗೌಡರು, ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‌ಗಳು ಹರಿದುಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: Basavaraja Bommai : ಸಿದ್ದರಾಮಯ್ಯಗೆ ಉತ್ತರ ಕೊಡಲು ಬಿಜೆಪಿ ಐಟಿ ಸೆಲ್ ಹುಡುಗ್ರು ಸಾಕು ಎಂದ ಬೊಮ್ಮಾಯಿ!
ಕಾಂಗ್ರೆಸ್ ಅಯೋಗ್ಯರ ಕೂಟ, ಇನ್ನೂ ಬುದ್ಧಿಬಂದಿಲ್ಲ
ರಾಮ ಇಲ್ಲ ಎಂದು ಅಫಿಡವಿಟ್ ಹಾಕಿದ ಈ ಅಯೋಗ್ಯರು ಇಂಥ ಹೇಳಿಕೆ ಕೊಡುವುದು ಅಚ್ಚರಿಯ ವಿಚಾರವಲ್ಲ. ನಿಜವೆಂದರೆ, ಆರಾಧ್ಯ ದೈವ ಶ್ರೀರಾಮನನ್ನು ನೋಡಲು ಎಲ್ಲರೂ ಹೋಗುತ್ತಿದ್ದಾರೆ. ಫಾರೂಕ್ ಅಬ್ದುಲ್ಲ ಅವರಂಥ ವ್ಯಕ್ತಿ ಪ್ರಧಾನಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದು ಡಿ.ವಿ. ಸದಾನಂದ ಗೌಡ ನುಡಿದರು.
ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ವಕ್ತಾರ ಹೆಚ್.ಎನ್. ಚಂದ್ರಶೇಖರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.