ಬೆಂಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ (Ayodhya Rama Mandir) ಶ್ರೀ ರಾಮ ಲಲ್ಲಾನ ಮೂರ್ತಿ ಸ್ಥಾಪನೆ (Rama statue Pratishtapane) ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ನಡೆಯುತ್ತಿದೆ. ಅದರ ನಡುವೆಯೇ ದೇಶಾದ್ಯಂತ ಜನರು ತಮ್ಮ ಭಕ್ತಿ ಭಾವಗಳ ಮೂಲಕ ರಾಮನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಹಲವಾರು ಹಿರಿಯ ನಾಯಕರು ಕೂಡಾ ಭಜನೆಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಭಜನೆಯಲ್ಲಿ ಪಾಲ್ಗೊಂಡಿರುವ ದೃಶ್ಯಾವಳಿಗಳನ್ನು ಸ್ವತಃ ಅವರೇ ಹಂಚಿಕೊಂಡಿದ್ದು ಗಮನ ಸೆಳೆಯುತ್ತಿದೆ.
ʻʻಭಾರತದ ಐತಿಹಾಸಿಕ ದಿನವನ್ನು ಎದುರು ನೋಡುತ್ತಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಶತಮಾನಗಳ ಪ್ರಾರ್ಥನೆಯ ಫಲವಾಗಿ ಅಯೋಧ್ಯೆಯೆಗೆ ಹಿಂತಿರುಗುತ್ತಿದ್ದಾನೆ. ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರ ಲೋಕಾರ್ಪಣೆಗೊಳ್ಳುವ ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಕರೆ ನೀಡಿರುವ ‘ನನ್ನ ರಾಮ’ ಭಕ್ತಿ ಸಮರ್ಪಣೆಯ ಅಭಿಯಾನದಲ್ಲಿ ನಾನೂ ಇಂದು ಭಾಗವಹಿಸಿದ್ದೇನೆ.
ನನ್ನ ಈ ಭಜನೆಯ ಮೂಲಕ ಭಕ್ತಿ ಸಮರ್ಪಣೆಯ ಕಂಕಣದಲ್ಲಿ ಕೈಜೋಡಿಸಿದ ಹಿರಿಯ ಕಲಾವಿದರಿಗೆ ಅನಂತ ಧನ್ಯವಾದಗಳುʼʼ ಎಂದು ಪ್ರಲ್ಹಾದ್ ಜೋಶಿ ಅವರು ಬರೆದುಕೊಂಡಿದ್ದಾರೆ.
ಅಭಿಯಾನಕ್ಕಾಗಿ ಇತರ ನಾಯಕರನ್ನೂ ಟ್ಯಾಗ್ ಮಾಡಿದ ಪ್ರಲ್ಹಾದ್ ಜೋಶಿ
‘ನನ್ನ ರಾಮ’ #NannaRama ಭಕ್ತಿ ಸಮರ್ಪಣೆಯ ಅಭಿಯಾನದಲ್ಲಿ ನಮ್ಮೊಂದಿಗೆ ಅಮಿತ್ ಶಾ (Amit Shah), ನಿತಿನ್ ಗಡ್ಕರಿ (Nitin Gadkari), ಅನುರಾಗ್ ಸಿಂಗ್ ಠಾಕೂರ್ (Anurag Singh Thakur), ಅರ್ಜುನ್ ರಾಮ್ ಮೇಘವಾಲ್ (Arjun Ram Meghwal), ಪಿಯೂಶ್ ಗೋಯಲ್ (Piyush Goyal), ನಿರ್ಮಲಾ ಸೀತಾರಾಮನ್ (Nirmala Sitharaman), ವಿ ಮುರಳೀಧರನ್ (V Muraleedharan), ಅರವಿಂದ ಬೆಲ್ಲದ್ (Arvind Bellad), ಮಹೇಶ್ ತೆಂಗಿನಕಾಯಿ (Mahesh Tenginkai) ಸೇರಿದಂತೆ ಎಲ್ಲಾ ರಾಮಭಕ್ತರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ayodhya Ram Mandir: ಇಂದಿನ `ಮುಖ್ಯ ಯಜಮಾನ’ ಮೋದಿ; ಹಾಗೆಂದರೇನು?
ರಾಮ ಶಿಲೆ ಸಿಕ್ಕಿದ ಹಾರೋಹಳ್ಳಿಯಲ್ಲಿ ಪ್ರತಾಪ್‌ಸಿಂಹ
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಶ್ರೀರಾಮ ಪ್ರಭುವಿನ ಮೂರ್ತಿಯ ಶಿಲೆ ದೊರೆತಂತಹ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ಪವಿತ್ರ ಸ್ಥಳದಲ್ಲಿ ನಡೆಯುತ್ತಿರುವ ವಿಶೇಷ ಪೂಜೆಯಲ್ಲಿ ಸಂಸದ ಪ್ರತಾಪಸಿಂಹ ಭಾಗವಹಿಸಿದ್ದರು. ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿರವರು, ಶಾಸಕ ಜಿ.ಟಿ ದೇವೇಗೌಡ ಅವರು, ಟಿ.ಎಸ್ ಶ್ರೀವತ್ಸರವರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.