Site icon Vistara News

Rama Mandir : ಜೈ ಶ್ರೀರಾಮ್‌ ಘೋಷಣೆಯಲ್ಲಿ ತಪ್ಪೇನಿದೆ; ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್‌

Siddaramaiah Rama Mandir

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸೋಮವಾರ ಬೆಂಗಳೂರಿನಲ್ಲಿ ನಡೆದ ರಾಮ ದೇಗುಲ ಉದ್ಘಾಟನಾ (Rama mandir Inauguration) ಸಮಾರಂಭದ ಅಂತ್ಯದಲ್ಲಿ ಜೈ ಶ್ರೀರಾಂ (Jai Shri Ram) ಎಂದು ಘೋಷಣೆ ಮಾಡಿದ್ದರ ಬಗ್ಗೆ ಬಿಜೆಪಿ ಮಾಡಿರುವ ಅಪಹಾಸ್ಯಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಅಂತಾರೆ, ಇಲ್ಲಿ ಜೈ ಶ್ರೀರಾಂ ಘೋಷಣೆ ಮಾಡುತ್ತಾರೆ. ಈ ಮೂಲಕ ಜನರನ್ನು ಮರುಳುಗೊಳಿಸಲು ಯತ್ನಿಸುತ್ತಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಜೈ ಶ್ರೀರಾಮ್‌ ಘೋಷಣೆ ಮೊಳಗಿಸಿದ್ದರಲ್ಲಿ ತಪ್ಪೇನಿದೇ? ರಾಮ ಏನು ಬಿಜೆಪಿಯ ದೇವರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೆಲ್ಲರೂ ರಾಮ ಭಕ್ತರೇ, ಜೈ ಶ್ರೀರಾಮ್‌ ಹೇಳಬಾರದಾ?: ಪರಮೇಶ್ವರ್‌ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದನ್ನು ಬಿಜೆಪಿ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರು, ಅದರಲ್ಲಿ ಏನು ತಪ್ಪಿದೆ, ನಾವೆಲ್ಲರೂ ಕೂಡ ಹೇಳಿದ್ದೇವೆ. ಹೇಳದೆ ಇದ್ರೆ ಶ್ರೀರಾಮ ವಿರೋಧಿ ಅಂತೀರಾ, ಹೇಳಿದ್ರೆ ಹೇಳಿದ್ರಪ್ಪ ಅಂತೀರಾ? ಹೇಳಿದ್ದು ಸರೀನಾ ಹೇಳದಿದ್ರೆ ಸರೀನಾ? ಎಂದು ಪ್ರಶ್ನೆ ಮಾಡಿದರು.

ʻʻನಾವೆಲ್ಲಾ ಶ್ರೀ ರಾಮನ ಭಕ್ತರೇ, ಒಂದಲ್ಲ ಒಂದು ರೀತಿಯಲ್ಲಿ ಶ್ರೀ ರಾಮನ ಆದರ್ಶ ಪಾಲನೆ ಮಾಡಬೇಕೆಂದು ಹೇಳೋರೆ. ಶ್ರೀ ರಾಮ ಇವರು ಯಾರೋ ನಾಲ್ಕು ಜನಕ್ಕೆ ಮಾತ್ರ ಆಗುವ ವ್ಯಕ್ತಿ ಅಲ್ಲ. ನಮಗೆ ಬೇಕಾಗಿರುವುದು ದಶರಥ ರಾಮ, ಮೋದಿ ರಾಮ ನಮಗೆ ಬೇಕಾಗಿಲ್ಲ. ನಮಗೆ ರಾಮ ರಾಜ್ಯ ಮಾಡಿದ ದಶರಥ ರಾಮ ಬೇಕೇ ವಿನಃ ರಾಮನ ಹೆಸರಲ್ಲಿ ಒಡೆದಾಳುವ ನೀತಿ ಮಾಡೋರು ಬೇಕಾಗಿಲ್ಲʼʼ ಎಂದು ಕಟುವಾಗಿ ಹೇಳಿದರು.

ಶ್ರೀರಾಮ ಅವರಪ್ಪನ ಮನೆ ಆಸ್ತೀನಾ ಎಂದು ಕೇಳಿದ ಡಿಕೆ ಶಿವಕುಮಾರ್‌

ಬೆಂಗಳೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಜೈ ಶ್ರೀರಾಮ್‌ ಎಂದು ಹೇಳಬಾರದು ಎಂದು ಹೇಳಲು ಅವರು ಯಾರು? ಶ್ರೀರಾಮ ಅವರಪ್ಪನ ಮನೆ ಆಸ್ತಿನಾ..? ಅವರಪ್ಪನ ಮನೆ ಆಸ್ತಿನೇನ್ರೀ..? ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಶಿವನ ಮಗ ಕುಮಾರನೂ ಇದ್ದಾನೆʼʼ ಎಂದು ಆಕ್ರೋಶದಿಂದ ಹೇಳಿದರು.

ʻʻಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನು ಹಿಂದು ವಿರೋಧಿಗಳು ಅಂತಾ ಬಿಂಬಿಸಲು ಪ್ರಯತ್ನ ಮಾಡ್ತಿದ್ದಾರೆʼʼ ಎಂದು ಹೇಳಿದ ಅವರು ನಾವು ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ? ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ ಎಂದು ಹೇಳಿದರು.

ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್ ಎಂದು ಹೇಳಿಲ್ವಾ? ನಾವು ರಾಮನನ್ನೂ ಪೂಜಿಸ್ತೀವಿ.. ಸೀತೆಯನ್ನೂ ಪೂಜಿಸ್ತೀವಿ ಎಂದು ಹೇಳಿದರು.

ನಾಸ್ತಿಕನಾಗಿದ್ದರೆ ಸಿದ್ದರಾಮಯ್ಯ ದೇವಸ್ಥಾನ ಕಟ್ಟುತ್ತಿದ್ದರೇ?: ಖಂಡ್ರೆ ಪ್ರಶ್ನೆ

ಅಯೋಧ್ಯೆ ವಿಚಾರವಾಗಿ ಸಿದ್ದರಾಮಯ್ಯರನ್ನು ಟಿಕೀಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರಿನಲ್ಲಿ ಹೇಳಿದ್ದಾರೆ.

ʻʻಸಿದ್ದರಾಮಯ್ಯ ಅವರೇ ನಾನು ಆಸ್ತಿಕ, ನಾಸ್ತಿಕ ಅಲ್ಲ ಅಂತ ಹೇಳಿದ್ದಾರೆ. ಅವರು ನಾಸ್ತಿಕರಾಗಿದ್ದರೆ ಅವರ ಕ್ಷೇತ್ರದಲ್ಲಿ ರಾಮಮಂದಿರ ಕಟ್ಟುತ್ತಿರಲಿಲ್ಲ. ದೇವಸ್ಥಾನಗಳಿಗೆ ಅನುದಾನ ನೀಡುತ್ತಿರಲಿಲ್ಲ. ರಾಜ್ಯದ ಅನೇಕ ದೇವಾಲಯಗಳಿಗೆ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರುʼʼ ಎಂದು ಹೇಳಿದ ಖಂಡ್ರೆ ಅವರು, ರಾಮ ನಮ್ಮ ಮನಸ್ಸಿನಲ್ಲಿದ್ದಾನೆ ಎಂದರು.

ಸಿದ್ದರಾಮಯ್ಯಗೆ ಚುನಾವಣೆ ದೃಷ್ಟಿ ಎಂದಿದ್ದ ಅರವಿಂದ ಬೆಲ್ಲದ್‌

ಹುಬ್ಬಳ್ಳಿ: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ನೋಡ್ತಾ ಬಂದಿದ್ದಾರೆ. ಇಷ್ಟು ದಿನ ರಾಮ ಇಲ್ಲ ಅಂದ್ರು, ಅಲ್ಪಸಂಖ್ಯಾತರ ಒಲೈಕೆ ಮಾಡಿದ್ರು. ಈಗ ಜೈ ಶ್ರೀರಾಮ್‌ ಅಂತಿದ್ದಾರೆʼʼ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಹೇಳಿದ್ದರು.

ʻʻಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಷ್ಟೇ ಅಲ್ಲಾ, ಇವರ ತಾತ ಕೂಡಾ ಸೋಮನಾಥ ದೇವಾಲಯಕ್ಕೆ ಹೋಗಿರಲಿಲ್ಲ. ದೇವಾಲಯ ಆಗಬಾರದೆಂದು ಹೇಳಿದರು., ಆ ವಂಶಸ್ಥರು, ಅವರ ಹಿಂಬಾಲಕರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ʼʼ ಎಂದು ಅರವಿಂದ ಬೆಲ್ಲದ್‌ ಹೇಳಿದ್ದರು.

ಸಿದ್ದರಾಮಯ್ಯ ಜೈ ಶ್ರೀರಾಮ್ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ದೇಶದ ವಾತಾವರಣ ನೋಡಿದ್ದಾರೆ, ಹೀಗಾಗಿ ಜೈ ಶ್ರೀರಾಮ್ ಅಂದಿದ್ದಾರೆ. ಕೆಲವು ದಿನ ಹೋದರೆ ರಾಮನ ಗುಡಿಯಲ್ಲಿ ಕಸ ಗುಡಿಸೋಕು ಬರ್ತಾರೆ ಎಂದು ಬೆಲ್ಲದ್‌ ವ್ಯಂಗ್ಯವಾಡಿದ್ದರು.

Exit mobile version