Site icon Vistara News

Rama Mandir : ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ; ಸಂತೋಷದಿಂದ ಪಾಲ್ಗೊಳ್ಳುವೆ ಎಂದ HDK

Rama Mandir HD Kumaraswamy

ಬೆಂಗಳೂರು: ಮುಂದಿನ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ (Rama Mandir) ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ (Rama Janmabhoomi trust) ಆಹ್ವಾನ ನೀಡಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದ ಟ್ರಸ್ಟ್‌ನ ಪ್ರಮುಖರು, ಆಹ್ವಾನ ಪತ್ರಿಕೆ (Invitation) ನೀಡಿ ಕುಟುಂಬ ಸಮೇತವಾಗಿ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮ ಲಾಲ್ ಮತ್ತಿತರರು ಟ್ರಸ್ಟ್ ಪರವಾಗಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.

Rama Mandir HD Kumaraswamy

ಆಹ್ವಾನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿಗಳು, ಕುಟುಂಬ ಸಮೇತ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ರಾಮ್ ಲಾಲ್ ಅವರಿಗೆ ತಿಳಿಸಿದರು. ಅಲ್ಲದೆ, ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಟ್ರಸ್ಟ್‌ನ ಪ್ರಮುಖರು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ.

ನಟ ಯಶ್‌, ರಿಷಬ್‌ ಶೆಟ್ಟಿಗೆ ಆಹ್ವಾನ

ಕನ್ನಡದ ಖ್ಯಾತ ನಟರಾದ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಡಿವೈನ್‌ ಸ್ಟಾರ್ ರಿಷಬ್‌ ಶೆಟ್ಟಿ ಅವರಿಗೂ ರಾಮ ಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಈಗಾಗಲೇ ಕಳುಹಿಸಿದೆ. ಜತೆಗೆ ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗುತ್ತಿದೆ.

ಇದನ್ನೂ ಓದಿ | Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ಇನ್ನು ರಾಮ ಮಂದಿರ ಟ್ರಸ್ಟ್‌ನ 3,000 ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಾಣಾವತ್‌, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್‌ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದ್ದಾರೆ. ಇದಲ್ಲದೆ ಪ್ರಸಿದ್ಧ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಟ್ರಸ್ಟ್ ಆಹ್ವಾನಿಸಿದೆ.

ಇದೀಗ ಕನ್ನಡ ಚಿತ್ರರಂಗದ ಸ್ಟಾರ್‌ ನಟರಾದ ಯಶ್‌ ಮತ್ತು ರಿಷಬ್‌ ಶೆಟ್ಟಿ ಅವರಿಗೂ ಆಹ್ವಾನ ಬಂದಿದೆ. ಜತೆಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ‌ ರಜನಿಕಾಂತ್‌, ಚಿರಂಜೀವಿ, ಪ್ರಭಾಸ್‌‌, ಮೋಹನ್‌ ಲಾಲ್, ಧನುಷ್ ಅವರು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ವಾರಾಣಸಿಯ 21 ಪಂಡಿತರ ತಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯ ನಡೆಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ರಾಮ ದೇವಾಲಯದ ಗರ್ಭಗುಡಿಯಲ್ಲಿ ಇರಿಸಬೇಕಾದ ವಿಗ್ರಹದ ಕೆಲಸ ಬಹುತೇಕ ಪೂರ್ಣಗೊಂಡಿದೆ.

Exit mobile version