Site icon Vistara News

Rama Mandir : ರಾಮ ಭಕ್ತರು ಯಾವತ್ತೋ ಕಾಂಗ್ರೆಸನ್ನು ತಿರಸ್ಕರಿಸಿ ಆಗಿದೆ; ಜೋಶಿ ಲೇವಡಿ

pralhad Joshi Siddaramaiah Rama Mandir

ಹುಬ್ಬಳ್ಳಿ: ಕಾಂಗ್ರೆಸ್‌ನವರು ರಾಮ ಮಂದಿರ (Rama Mandir) ಉದ್ಘಾಟನೆ ಆಮಂತ್ರಣ (Rama Mandir Invitation) ತಿರಸ್ಕರಿಸುವ ಮೊದಲೇ ದೇಶದ ಜನ ಮತ್ತು ರಾಮ ಭಕ್ತರು (Rama Bhaktas) ಕಾಂಗ್ರೆಸ್ ಅನ್ನು ತಿರಸ್ಕರಿಸಿ (boycott Congress) ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್‌ ಯಾಕೆ ಬಹಿಷ್ಕರಿಸುತ್ತಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸಚಿವ ಜೋಶಿ ಅವರು,
ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ. ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ‍್ಯಾಲಿ ಅಲ್ಲ ಎಂದು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶ್ರೀರಾಮನ ಮೇಲೆ ನಂಬಿಕೆ, ಭಕ್ತಿ, ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೆ ಮಂದಿರಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದೀರಿ. ಇಂಥ ರಾಜಕೀಯವನ್ನು ತಾವು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ರಾಜ್ಯ ಮಾತ್ರವಲ್ಲ ಇಡೀ ದೇಶದ ಜನತೆಗೆ ಅರ್ಥವಾಗಿದೆ ಕರ್ನಾಟಕದಲ್ಲಿ ನಿಮ್ಮ “ಸುಳ್ಳಿನ ಸರಕಾರ ಎತ್ತ ಸಾಗುತ್ತಿದೆ” ಎಂದು. ರಾಮ ಈ ದೇಶದ ಸಂಸ್ಕೃತಿ. ರಾಮನಿಗಾಗಿ ಅಳಿಲು ಸೇವೆಯೂ ಕಾಂಗ್ರೆಸ್ ನವರಿಂದ ಆಗಿಲ್ಲ.‌ ಹೀಗಿರುವಾಗ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನವರು ಯಾವ ಮುಖ ಇಟ್ಕೊಂಡು ಬರುತ್ತಾರೆ? ಅದಕ್ಕಾಗಿ ಈ ರೀತಿ ಆಮಂತ್ರಣ ತಿರಸ್ಕಾರ ಪ್ರಹಸನ ಮಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಇವರಿಗಿಂತ ಮೊದಲು ರಾಮ ಭಕ್ತರು ಇವರನ್ನ ತಿರಸ್ಕರಿಸಿ ಆಗಿದೆ.

ಧಾರ್ಮಿಕವಾಗಿ ಅಲ್ಲದಿದ್ದರೂ, ರಾಮನನ್ನು ನಮ್ಮ ಸಾಂಸ್ಕೃತಿಕ ದೃಷ್ಠಿಯಿಂದ ನೋಡುವ ಮುಸ್ಲಿಂ, ಕ್ರಿಶ್ಚಿಯನ್ ಅನ್ಯ ಧರ್ಮದವರು ಕಾಂಗ್ರೆಸ್ ಅನ್ನು ತಿರಸ್ಕರಿಸುವ ಕಾಲ ಸನ್ನಿಹಿತದಲ್ಲಿದೆ ಎಂದು ಸಚಿವ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Ram Mandir: ರಾಮ ಮಂದಿರ ಉದ್ಘಾಟನೆ ದಿನ ದೇವಸ್ಥಾನಗಳಲ್ಲಿ ಪೂಜೆ ಮಾಡಲು ನಾನು ಹೇಳಿಲ್ಲ: ಸಿದ್ದರಾಮಯ್ಯ

ಹಿಂದುಗಳನ್ನು ಒಡೆಯುವ ಸಿದ್ದರಾಮಯ್ಯ: ಸಿ.ಟಿ. ರವಿ ತಿಗುಗೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಿರಿಯ ಬಿಜೆಪಿ ನಾಯ ಸಿ.ಟಿ ರವಿ ಕೂಡಾ ಕೌಂಟರ್ ನೀಡಿದ್ದಾರೆ.

ʻʻರಾಮ ಹಿಂದೂಗಳನ್ನು ಜೋಡಿಸ್ತಾನೆ. ಹಿಂದೂಗಳನ್ನು ಒಡೆಯುವವರು ಸಿದ್ದರಾಮಯ್ಯ ಥರ ಹೇಳಿಕೆ‌ ಕೊಡ್ತಾರೆ. ಅವರು ಒಡೆಯುವುದರಲ್ಲಿ ಎಕ್ಸ್‌ಪರ್ಟ್‌. ವೀರಶೈವ ಲಿಂಗಾಯತ ಸಮಾಜ ಒಡೆಯಲು‌ ಹೋಗಿದ್ದ ಸಿದ್ದರಾಮಯ್ಯ ಅವರು ಸಮಾಜ‌ ಒಡೆಯುವುದರಲ್ಲಿ ಪ್ರೊಡ್ಯೂಸರ್ʼʼ ಎಂದು ಸಿ.ಟಿ. ರವಿ ಹೇಳಿದ್ದಾರೆ.

ʻʻಅವರ ಅಜೆಂಡಾ ಸ್ಪಷ್ಟ. ಅಲ್ಪಸಂಖ್ಯಾತರ ಓಲೈಕೆಗಾಗಿ ಅವ್ರು ರಾಮಮಂದಿರ‌ ಪ್ರಾಣ ಪ್ರತಿಷ್ಠಾಪನೆಗೆ ಬರ್ತಿಲ್ಲ. ಅವರು ಬಹಿಷ್ಕರಿಸಿದ ಉದ್ದೇಶವೇ‌ ಇಡಿಗಂಟು ಮುಸ್ಲಿಂ‌ ಮತಬ್ಯಾಂಕ್ ಉಳಿಸಿಕೊಳ್ಳುವ ಸಲುವಾಗಿ. ಹಿಂದೂಗಳನ್ನು ಜಾತಿವಾರುವ ಒಡೆಯುವ ನೀತಿ ಅವರದ್ದು. ಸಿದ್ದರಾಮಯ್ಯ ಜಾತಿವಾರು ಸಮಾಜ ಒಡೆಯಲು ಹೊರಟಿದ್ದಾರೆʼʼ ಎಂದು ಹೇಳಿದ್ದಾರೆ ಸಿ.ಟಿ. ರವಿ.

Exit mobile version