ಬೆಂಗಳೂರು: ರಾಮ ನಗರದಲ್ಲಿ ರಾಮ ಮಂದಿರ (Rama Mandir) ಕಟ್ಟಲಾಗುವುದು ಎಂಬ ಬಜೆಟ್ ಘೋಷಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಫೈಟ್ ಆರಂಭಗೊಂಡಿದೆ. ೨೦೨೩ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಳೆ ಮೈಸಸೂರು ಭಾಗದಲ್ಲಿ ಹವಾ ಎಬ್ಬಿಸಲು ಹಿಂದುತ್ವದ ಅಜೆಂಡಾವನ್ನು ಹರಿಬಿಟ್ಟಿದೆ ಎಂಬ ವಾದವೂ ಇದೆ.
ರಾಮ ನಗರದಲ್ಲಿ ಪ್ರಸಕ್ತ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಹವಾವೇ ಜೋರಾಗಿದ್ದು, ಅದನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ರಾಮನಗರದಲ್ಲಿ ಹಿಂದು ಹವಾ ಸೃಷ್ಟಿಸಲು ಬಿಜೆಪಿ ರಾಮ ಮಂದಿರ ನಿರ್ಮಾಣ ಘೋಷಣೆ ಮಾಡಿದೆ ಎಂದು ವ್ಯಾಖ್ಯಾನಿಸಲಾಗಿದೆ. ಸರ್ಕಾರವೇ ಬಜೆಟ್‌ನಲ್ಲಿ ರಾಮ ಮಂದಿರ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿರುವುದು ಇದೇ ತಂತ್ರದ ಭಾಗವಾಗಿದೆ.
ಈ ನಡುವೆ ರಾಮ ನಗರದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಡಿಪಿಆರ್ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಅಶ್ವತ್ಥ ನಾರಾಯಣ್ ಕೂಡಾ ಘೋಷಿಸಿದರು. ರಾಮ ಮಂದಿರ ನಿರ್ಮಾಣ ರಾಮ ನಗರದ ಬಹುಕಾಲದ ಬೇಡಿಕೆಯಾಗಿದೆ ಅದನ್ನು ಸರ್ಕಾರ ಈಡೇರಿಸುತ್ತಿದೆ ಎಂದು ಹೇಳಿದರು.
ಯಾವ ಮಂದಿರ ಬೇಕಾದರೂ ಕಟ್ಟಿ ಎಂದ ಡಿಕೆಶಿ
ಈ ನಡುವೆ, ರಾಮ ಮಂದಿರ ವಿಚಾರದಲ್ಲಿ ಸಚಿವ ಅಶ್ವತ್ಥ ನಾರಾಯಣ ವಿರುದ್ದ ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ʻʻರಾಮ ಮಂದಿರವಾದರೂ ಕಟ್ಟು, ಸೀತಾ ಮಂದಿರವಾದರೂ ಕಟ್ಟು, ಅಶ್ವತ್ಥ ನಾರಾಯಣ ಮಂದಿರವಾದರೂ ಕಟ್ಟು, ಬಸವರಾಜ ಮಂದಿರವಾದರೂ ಕಟ್ಟು ಯಡಿಯೂರಪ್ಪ ಮಂದಿರವಾದರೂ ಕಟ್ಟು ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ಆದರೆ ಮೊದಲು ರಾಮ ನಗರದಲ್ಲಿ ಬಿಜೆಪಿ ಆಫೀಸ್ ಕಟ್ಟಲಿʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ʻʻನನಗೆ ನನ್ನ ಕಚೇರಿಯೇ ದೇವಸ್ಥಾನʼʼ ಎಂದು ಹೇಳಿದ ಡಿಕೆಶಿ, ರಾಮನಗರವನ್ನು ಕ್ಲೀನ್ ಮಾಡಿಸುತ್ತೇನೆ ಎಂಬರ್ಥದಲ್ಲಿ ಆಡಿದ ಅಶ್ವತ್ಥನಾರಾಯಣ ಹೇಳಿಕೆಯ ಬಗ್ಗೆಯೂ ಗೇಲಿ ಮಾಡಿದರು.
ʻʻಏನೋ ಕ್ಲೀನ್ ಮಾಡಿಸ್ತೀನಿ ಅಂದಿದ್ದ. ಏನಪ್ಪ ಮಾಡಿದ? ಅಲ್ಲಿಗೆ ಬಂದು ವೃಷಭಾವತಿ ನೀರು ಕುಡಿಲಿ ಮೊದಲು. ಕೊಚ್ಚೆ ನೀರನ್ನು ಕ್ಲೀನ್ ಮಾಡ್ಸಿದಾನಾ, ಕರಪ್ಶನ್ ನಿಲ್ಸಿದಾನಾʼʼ ಎಂದು ಕೇಳಿದ ಅವರು, ಸ್ಕಿಲ್ ಡೆವಲಪ್ಮೆಂಟ್ ಹಗರಣ ಬಿಚ್ಚಿಟ್ಟಿಲ್ಲ ಇನ್ನೂ ನಾನು. ಇನ್ನು ಕೆಲವೇ ದಿನಗಳಲ್ಲಿ ಅದನ್ನೂ ಬಿಚ್ಚಿಡ್ತೀನಿ ಎಂದರು.
ಡಿಕೆಶಿ ಹೇಳಿಕೆಗೆ ಕೌಂಟರ್ ನೀಡಿದ ಅಶ್ವತ್ಥನಾರಾಯಣ ಅವರು, ʻʻಇವತ್ತು ನಮಗೆ ಎಲ್ಲಾ ಕಡೆ ಕಚೇರಿ ಇದೆ. ಅವರಿಗೇ ಎಷ್ಟೋ ಜಿಲ್ಲೆಗಳಲ್ಲಿ ಕಚೇರಿಗಳೇ ಇಲ‌್ಲ. ಅವರ ಪಕ್ಷದ ಕಚೇರಿಗಳು ಯಾರ ಹೆಸರಲ್ಲಿವೆ?? ಎಲ್ಲಿ ಹೋಗಿವೆ ನೋಡ್ಕೊಳ್ಳಲಿʼʼ ಎಂದು ಸವಾಲು ಹಾಕಿದರು.
ಅವರು ಘೋಷಣೆ ಮಾಡಿದ್ದಾರೆ, ನಾನೇ ಕಟ್ಟಬೇಕು ಎಂದ ಎಚ್‌ಡಿಕೆ
ಇದೇ ವೇಳೆ ರಾಮ ಮಂದಿರ ನಿರ್ಮಾಣ ಘೋಷಣೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ʻʻಅವರು ರಾಮ ಮಂದಿರ ನಿರ್ಮಾಣ ಘೋಷಣೆ ಮಾಡಿದ್ರೂ ಅದನ್ನು ನಾನೇ ಕಟ್ಟಬೇಕುʼʼ ಎಂದು ಚನ್ನಪಟ್ಟಣದಲ್ಲಿ ಹೇಳಿದರು.
ʻʻಮೂರು ವರ್ಷದ ಹಿಂದೆಯೇ ಘೋಷಣೆ ಮಾಡಿ ಕಟ್ಟಿದ್ರೆ ಒಪ್ಪಿಕೊಳ್ತಿದ್ದೆ. ಇನ್ನೊಂದು ತಿಂಗಳಲ್ಲಿ ಚುನಾವಣೆ ಘೋಷಣೆ ಆಗುತ್ತಿದೆ. ಚುನಾವಣೆ ಬಂದ್ರೆ ಈ ಬಜೆಟ್ ಬುಕ್ ಒಳಗೆ ಇರುತ್ತೆ. ರಾಮ ಮಂದಿರ ಕಟ್ಟಬೇಕು ಅಂದ್ರೆ ಅದು ಇವರ ಕೈಯಲ್ಲಿ ಆಗಲ್ಲ. ನನಗೆ ಗೊತ್ತಿದೆ ಮುಂದಿನ ಸರ್ಕಾರ ಯಾರು ರಚನೆ ಮಾಡೋದು ಅಂತ. ಮುಂದೆ ರಾಮ ನಗರದಲ್ಲಿ ನಾನೇ ರಾಮ ಮಂದಿರ ಮಾಡಬೇಕು, ಇವರ ಕೈಯಲ್ಲಿ ಆಗಲ್ಲʼʼ ಎಂದು ಹೇಳಿದರು.
ಸಿ.ಟಿ. ರವಿ ಹೇಳಿದ್ದೇನು?
ʻʻರಾಮನ ಹೆಸರು ಇಟ್ಟುಕೊಂಡು ಇರುವ ನಗರವೇ ರಾಮನಗರ. ಇಲ್ಲಿ ರಾಮ ಮಂದಿರ ಕಟ್ಟುವ ನಿರ್ಧಾರವನ್ನು ಪಕ್ಷಾತೀತವಾಗಿ ಸ್ವಾಗತಿಸಬೇಕು. ಅದನ್ನು ಯಾರೂ ವಿವಾದ ಮಾಡಬಾರದುʼʼ ಎಂದು ಹೇಳಿದ ಅವರು, ರಾಮನಗರದಲ್ಲಿ ರಾಮಮಂದಿರ ನಾವೇ ಕಟ್ಟುತ್ತೇವೆ ಎಂಬ ಕುಮಾರಸ್ವಾಮಿ ನಿಲುವನ್ನು ಸ್ವಾಗತಿಸುತ್ತೇನೆ ಎಂದರು.