ಬೆಳಗಾವಿ: ರಾಜ್ಯದ ಹಲವು ಭಾಗಗಳಲ್ಲಿ ಕಲುಷಿತ ನೀರು ಸೇವನೆ (Contaminated water) ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇನ್ನು ಸಾವಿನಿಂದ ಎಚ್ಚೆತ್ತ ತಾಲೂಕು ಆಡಳಿತವು, ಗ್ರಾಮದ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಕಲುಷಿತ ನೀರು ಸೇವನೆಗೆ ಸಂಬಂಧಪಟ್ಟಂತೆ ಮುದೇನೂರು ಗ್ರಾಮದ ಶಿವಪ್ಪ ಬೆಳ್ಳೆೇರಿ ಎಂಬುವವರು ಬುಧವಾರ ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಗಂಭೀರಗೊಂಡಿದ್ದ ನೀಲಪ್ಪ ಪೂಜಾರಿ (೪೮), ಸಿದ್ದಪ್ಪ ಕುರಿ (೪೨) ಎಂಬುವವರಿಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಬಾಗಲಕೋಟೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ್ ಬಿರಾದಾರ ಮಾಹಿತಿ ನೀಡಿದ್ದಾರೆ.
೧೦ ಲಕ್ಷ ರೂಪಾಯಿ ಪರಿಹಾರ
ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ೧೦ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಶಿವಪ್ಪ ಬೆಳ್ಳೆೇರಿ ಬುಧವಾರ (ಅ.೨೬) ಮೃತಪಟ್ಟಿದ್ದಾರೆ. ಅಕ್ಟೋಬರ್ 23ರಂದು ಸರಸ್ವತಿ ಹಾವಳ್ಳಿ (73) ಮೃತಪಟ್ಟಿದ್ದರು. ಆದರೆ, ಸರಸ್ವತಿ ಅವರು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿಲ್ಲ. ಈಗ ಸರ್ಕಾರ ಪರಿಹಾರ ಘೋಷಣೆ ಮಾಡಿರುವುದರಿಂದ ಈ ಸಾವನ್ನೂ ಇದೇ ಪ್ರಕರಣಕ್ಕೆ ಜೋಡಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ | Contaminated water | ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಪ್ರತಿ ಗ್ರಾಮಸ್ಥರ ಆರೋಗ್ಯ ತಪಾಸಣೆ
ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಪ್ರಕರಣವು ಗಂಭೀರ ಸ್ವರೂಪಕ್ಕೆ ತಿರುಗಿದ್ದಲ್ಲದೆ, ಈಗಾಗಲೇ ಗ್ರಾಮದ 195 ಜನರು ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಮದುರ್ಗ ತಾಲೂಕು ಆಡಳಿತ ಪ್ರತಿಯೊಬ್ಬ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುತ್ತಿದೆ. ಸ್ಥಳದಲ್ಲೇ ಡಿಎಚ್‌ಒ ಡಾ.ಮಹೇಶ್ ಕೋಣಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ್ ಮೊಕ್ಕಾಂ ಹೂಡಿದ್ದಾರೆ. ಅಲ್ಲದೆ, ಒಬ್ಬರು ಟಿಎಚ್‌ಒ, ಮೂವರು ಸಿಎಚ್‌ಒ, ನಾಲ್ವರು ವೈದ್ಯರು ಸೇರಿ 33 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಗುರುವಾರ ಬೆಳಗ್ಗೆಯಿಂದ ಮತ್ತೆ 45 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿ, ಭೇದಿ, ಸುಸ್ತು, ರಕ್ತದೊತ್ತಡ ಸಮಸ್ಯೆ ಕಂಡುಬಂದವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಅಕ್ಟೋಬರ್ 23ರಿಂದ ಈವರೆಗೆ ಒಟ್ಟು ಇಬ್ಬರು ಮೃತಪಟ್ಟಂತಾಗಿದೆ.
ಮುದೇನೂರು ಗ್ರಾಮದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿತ್ತು ಎನ್ನಲಾಗಿದ್ದು, ಈ ಪೈಪ್‌ಗೆ ಚರಂಡಿ ನೀರು ಸೇರ್ಪಡೆಯಾಗಿ ಅವಘಡ ಸಂಭವಿಸಿದೆ. ರಾಮದುರ್ಗ ತಾಲೂಕು ಆಸ್ಪತ್ರೆ, ಬಟಕುರ್ಕಿ ಆರೋಗ್ಯ ಕೇಂದ್ರ ಹಾಗೂ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಇಷ್ಟೆಲ್ಲ ಅನಾಹುತವಾದರೂ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ರಾಮದುರ್ಗ ತಹಸೀಲ್ದಾರ ವಿರುದ್ಧ ಮುದೇನೂರ ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ | Contaminated water | ಇಲಿ ಸತ್ತು ಬಿದ್ದ ನೀರನ್ನೇ ಪೂರೈಕೆ ಮಾಡಿದ ಅಧಿಕಾರಿಗಳು!