– ಹರಿಪ್ರಕಾಶ್ ಕೋಣೆಮನೆ
ರಾಮಕೃಷ್ಣ ಹೆಗಡೆ ಎಂದರೆ ಸಾಕು, ಅವರ ವಿನೂತನ ಶೈಲಿಯ ಚುರುಕಿನ ಆಡಳಿತ, ಅವರ ವೈಚಾರಿಕ ನಿಲುವುಗಳು, ಅವರು ಸರಕಾರದ ಮುಖ್ಯಸ್ಥರಾಗಿ ಮತ್ತು ವೈಯಕ್ತಿಕವಾಗಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳ ಮೆರವಣಿಗೆಯೇ ಕಣ್ಣಮುಂದೆ ಹಾದುಹೋಗುತ್ತದೆ. ಮುಖ್ಯವಾಗಿ ಮಾದರಿ ಎನ್ನಬಹುದಾದ ನಡೆ-ನುಡಿ, ಮೌಲ್ಯಯುತ ವಿಚಾರ ಹಾಗೂ ಅರ್ಥಪೂರ್ಣ ಬದುಕಿನ ಮೂಲಕ ಹೆಗಡೆ ಅವರು ತಮ್ಮ ನಿಧನದ ನಂತರವೂ ನಮ್ಮ ನಡುವೆ ಜೀವಂತಿಕೆ ಉಳಿಸಿಕೊಂಡಿರುವ ಅಪರೂಪದ ರಾಜಕಾರಣಿ. ಇಂದು (ಆ.29) ರಾಮಕೃಷ್ಣ ಹೆಗಡೆ ಅವರ ಜನುಮ ದಿನ. ಈ ಸಂದರ್ಭದಲ್ಲಿ ನಾವು ಮೆಲುಕು ಹಾಕಬಹುದಾದ ಸಂಗತಿಗಳು ಯಾವವು? ಈ ಕುರಿತು ಒಂದು ಅವಲೋಕನ ಮಾಡೋಣ.
೧. ಕರ್ನಾಟಕ ಲೋಕಾಯುಕ್ತ
ರಾಮಕೃಷ್ಣ ಹೆಗಡೆ ಅವರ ಜನ್ಮದಿನಕ್ಕೆ ಸರಿಯಾಗಿ, ಅವರು ರೂಪಿಸಿದ್ದ ಕರ್ನಾಟಕ ಲೋಕಾಯುಕ್ತ ಕೂಡ ಮರುಹುಟ್ಟು ಪಡೆದುಕೊಂಡಿರುವುದು ವಿಶೇಷ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ದೇಶದಲ್ಲಿ ಭ್ರಷ್ಟಾಚಾರ ತಡೆಗೆ ಲೋಕಪಾಲ್ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆ ಕಾಲದಲ್ಲಿ ಜೋರಾದ ಚರ್ಚೆ ನಡೆಯುತ್ತಿರುವಾಗಲೇ, ಈ ಚರ್ಚೆಯ ಪರಿಧಿಯನ್ನು ದಾಟಿ ಅದಕ್ಕಿಂತ ಉತ್ತಮವಾದ ಲೋಕಾಯುಕ್ತ ವ್ಯವಸ್ಥೆಯನ್ನು ಹೆಗಡೆ ಅವರು ಬಹಳ ಮುತುವರ್ಜಿಯಿಂದ ಜಾರಿಗೆ ತಂದರು. ಕರ್ನಾಟಕ ಲೋಕಾಯುಕ್ತದಿಂದ ಪ್ರೇರೇಪಣೆ ಪಡೆದ ಆಂಧ್ರಪ್ರದೇಶ ಸರ್ಕಾರ ನಂತರ ಆಂಧ್ರದಲ್ಲೂ ಲೋಕಾಯುಕ್ತ ವ್ಯವಸ್ಥೆ ಜಾರಿಗೊಳಿಸಿತು. ಲೋಕಾಯುಕ್ತ ವ್ಯವಸ್ಥೆ ಜಾರಿಗೊಳಿಸಿದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹಲವು ದಶಕಗಳ ಬಳಿಕವೂ, ಹಲವಾರು ಹೋರಾಟಗಳ ನಂತರವೂ ದೇಶದಲ್ಲಿ ಇನ್ನೂ ಲೋಕಪಾಲ್ ಜಾರಿಗೆ ಬಂದಿಲ್ಲ! ಆದರೆ ದಶಕಗಳ ಹಿಂದೆಯೇ ಕರ್ನಾಟಕದಲ್ಲಿ ಇಂಥದೊಂದು ವ್ಯವಸ್ಥೆ ಜಾರಿಗೆ ತಂದ ಶ್ರೇಯಸ್ಸು ಹೆಗಡೆ ಅವರಿಗೆ ಸಲ್ಲುತ್ತದೆ. ಆದರೆ ಆ ಬಳಿಕ ಕರ್ನಾಟಕ ಲೋಕಾಯುಕ್ತವನ್ನೇ ದಿಂಬಿನಡಿ ಉಸಿರುಗಟ್ಟಿಸಿ ಸಾಯಿಸಲು ಕೆಲವರು ಮುಂದಾದರು. ಇಂಥ ಲಜ್ಜೆಗೇಡು ವ್ಯವಸ್ಥೆಯ ನಡುವೆ ನಾವಿಂದು ಇದ್ದೇವಲ್ಲ!
೨. ಪ್ರಜಾತಂತ್ರವಾದಿ
ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಭಾಷಣದಲ್ಲಿ ಮಾತ್ರ ಉಳಿದಿದೆಯೇ ಎಂಬ ಅನುಮಾನ ಕೆಲವೊಮ್ಮೆ ಮೂಡುವುದುಂಟು. ಅಂಥ ಸಂದರ್ಭದಲ್ಲೆಲ್ಲ ಮತ್ತೆ ನೆನಪಾಗುವುದು ದಿವಂಗತ ರಾಮಕೃಷ್ಣ ಹೆಗಡೆ. ಅಧಿಕಾರ ವಿಕೇಂದ್ರೀಕರಣದಿಂದ ಹಿಡಿದು ಸಚಿವರ ಕಾರ್ಯ ಸ್ವಾಯತ್ತತೆವರೆಗೆ ಪ್ರಜಾತಂತ್ರದ ಮೌಲ್ಯಗಳನ್ನು ಹೆಗಡೆಯವರು ಅಕ್ಷರಶಃ ಎತ್ತಿ ಹಿಡಿದಿದ್ದರು. ಮುಖ್ಯಮಂತ್ರಿಯಾಗಿ ತಮ್ಮ ಸಂಪುಟದ ಸಚಿವರ ಮೇಲೆ ಹೆಗಡೆಯವರು ಅಧಿಕಾರಯುತ ಹಿಡಿತ ಹೊಂದಿದ್ದರು. ಆದರೆ ಅವರ ಸಂಪುಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಚಿವರಿಗೆ ಮುಕ್ತ ಸ್ವಾತಂತ್ರ್ಯ ಇತ್ತು. ತಮ್ಮ ಕಲ್ಪನೆಯ ಯೋಜನೆಗಳನ್ನು ಸಾಕಾರಗೊಳಿಸಲು ಮುಕ್ತ ಅವಕಾಶ ಇತ್ತು. ಈ ಕಾರಣಕ್ಕಾಗಿಯೇ ಅಬ್ದುಲ್ ನಜೀರ್ ಸಾಬ್‌ರಂಥ ಹಲವರು ಸಚಿವ ಹುದ್ದೆಯಲ್ಲಿ ತಮ್ದೇ ಆದ ಛಾಪು ಮೂಡಿಸಲು ಸಾಧ್ಯವಾಯಿತು.
೩. ಪಂಚಾಯತ್ ರಾಜ್ ವ್ಯವಸ್ಥೆ
ಪಂಚಾಯತ್ ರಾಜ್ ಎನ್ನುವುದು ಒಂದು ಕ್ರಾಂತಿಕಾರಕ ಸ್ಥಳೀಯ ಆಡಳಿತ ವ್ಯವಸ್ಥೆ. ಈ ಬಗ್ಗೆ ಬೇಕಾದಷ್ಟು ಚರ್ಚೆ ಈಗಲೂ ನಡೆಯುತ್ತಿರುತ್ತದೆ. ಪಂಚಾಯತ್ ರಾಜ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಲೇ, ಆ ವ್ಯವಸ್ಥೆಯನ್ನು ಎಷ್ಟು ಹದಗೆಡಿಸಲು ಸಾಧ್ಯವೊ, ಎಷ್ಟು ಅಶಕ್ತ ವ್ಯವಸ್ಥೆಯನ್ನಾಗಿ ಮಾಡಲು ಸಾಧ್ಯವೋ ಅಷ್ಟನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ! ಸಶಕ್ತ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ. ಆ ಹಿರಿಮೆ ಕರ್ನಾಟಕದ ಹೆಸರಲ್ಲೇ ಎಂದೆಂದಿಗೂ ಇರಲಿದೆ. ಅದಕ್ಕೆ ಕಾರಣಕರ್ತರೂ ರಾಮಕೃಷ್ಣ ಹೆಗಡೆ. ಅವರು ಅಂದು ಪವರ್ ಫುಲ್ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಅವರ ಗ್ರಾಮದ “ಮುಖ್ಯಮಂತ್ರಿʼ ಎಂಬ ಅದ್ಭುತ ಪರಿಕಲ್ಪನೆ ಹೆಗಡೆ ಅವರದಾಗಿತ್ತು. ಆ ಜಾಗದಲ್ಲಿ ಇಂದಿನ ನಾಮಕಾವಾಸ್ತೆ ಪಂಚಾಯಿತಿ ರಾಜ್ ವ್ಯವಸ್ಥೆ ಕಂಡಾಗ ಮರುಕವಾಗುತ್ತದೆ.
೪. ಮೌಲ್ಯಾಧಾರಿತ ರಾಜಕಾರಣ
ಅಧಿಕಾರ ಹಿಡಿಯುವುದೇ ಎಲ್ಲದಕ್ಕಿಂತ ಮುಖ್ಯವಾದ ಇಂದಿನ ಕಾಲಘಟ್ಟದ ನಡುವೆ, ರಾಜಕಾರಣದಲ್ಲಿ ಮೌಲ್ಯಗಳ ಹುಡುಕಾಟವೇ ಅಪರಾಧ ಎಂಬಂತಾಗಿದೆ. ಈ ಸನ್ನಿವೇಶದಲ್ಲಿ ಮತ್ತೆ ನೆನಪಾಗುವುದು ಹೆಗಡೆ ಹೆಸರು. ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆಯ ಅರಿವನ್ನು ಹೊಂದಿರಬೇಕು. ರಾಜಕಾರಣಿಯ ನಡೆ ಇತರರಿಗೆ ಮಾದರಿ ಆಗಿರಬೇಕು ಎಂಬುದು ಹಗಡೆ ಅವರು ನಂಬಿ ಆಚರಿಸಿದ ವ್ರತವಾಗಿತ್ತು. ಹೀಗಾಗಿ ಅಧಿಕಾರ ಗಳಿಸುವುದು ಮಾತ್ರವಲ್ಲ, ತೊರೆಯುವುದರಲ್ಲೂ ಹೆಗಡೆ ಮೇಲ್ಪಂಕ್ತಿ ಆಗಿದ್ದರು. ಬಾಟ್ಲಿಂಗ್ ಹಗರಣ, ಅಕ್ಕಿ ಹಗರಣಗಳ ವಿಚಾರವಾಗಿ ಕೇವಲ ಆರೋಪ ಕೇಳಿ ಬಂದ ಮಾತ್ರಕ್ಕೆ ಮರುಮಾತಿಲ್ಲದೆ, ಒತ್ತಾಯ ಸತ್ತಾಯ ಏನೂ ಇಲ್ಲದೆ, ಕೋರ್ಟ್‌ಗಳ ಚಾಟಿಯೂ ಇಲ್ಲದೆ ಹೆಗಡೆ ಅಧಿಕಾರ ಸ್ಥಾನ ತೊರೆದಿದ್ದರು. ರಾಜೀನಾಮೆ ನೀಡದಿರಲು ಅವರು ಪಿಳ್ಳೆ ನೆಪ ಹುಡುಕಲಿಲ್ಲ. ಸಂಪುಟ ಸದಸ್ಯರು, ಅಭಿಮಾನಿಗಳು ರಾಜೀನಾಮೆ ನೀಡಬೇಡಿ ಎಂದು ಮೊರೆ ಇಟ್ಟರೂ ಅವರು ಕೇಳಲಿಲ್ಲ. ಅಧಿಕಾರದ ಮಮಕಾರಕ್ಕೆ ಸಿಲುಕಲಿಲ್ಲ. ಇದಲ್ಲವೇ ಮಾದರಿ?
ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್
೫. ಜನಾದೇಶ ಪಡೆಯುವ ನಿಲುವು
ಬಹುಮತ ಕಳೆದುಕೊಂಡಿರುವುದು ಮುಖಕ್ಕೆ ಹೊಡೆದಂತೆ ಇದ್ದರೂ ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ಹೊಂದಿರುವವರ ನಡುವೆ; ಹೇಗಾದರೂ ಮಾಡಿ, ಎಂತಾದರೂ ಮಾಡಿ ಅಧಿಕಾರ ಬಾಚಿಕೊಳ್ಳಬೇಕು ಎನ್ನುವವರ ನಡುವೆ ಅಧಿಕಾರ ರಾಜಕಾರಣ ಹೇಗಿರಬೇಕು ಎಂಬುದಕ್ಕೆ ಹೆಗಡೆ ಮಾದರಿ ಆಗುತ್ತಾರೆ.
1983ರಲ್ಲಿ ಹೆಗಡೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಆಗಿದ್ದರು. ಅದರ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಲೀನ್ ಸ್ವೀಪ್ ಮಾಡಿತ್ತು. ಹೆಗಡೆ ಸರಕಾರಕ್ಕೆ ಜನಾದೇಶ ಇಲ್ಲ ಎಂಬ ಸ್ವರ ಹುಟ್ಟಿಕೊಂಡಿತು. ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯೇ ಬೇರೆ ಎಂದು ಹೆಗಡೆ ಆಗ ವಾದಿಸಲಿಲ್ಲ. ಯಾವುದೇ ಗೊಂದಲ, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡದೆ ಹೆಗಡೆ ಅವರು ಆಗ ವಿಧಾನಸಭೆ ವಿಸರ್ಜನೆ ಮಾಡಿದರು! ಚುನಾವಣೆ ಮೂಲಕ ಹೊಸದಾಗಿ ಜನಾದೇಶ ಪಡೆಯುವೆ ಎಂದರು. ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟು ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿದರು. ಇದರಲ್ಲಿ ರಾಜಕೀಯ ಹೊಣೆಗಾರಿಕೆ, ನೈತಿಕತೆಯ ಪ್ರಶ್ನೆ ಒಂದೆಡೆಯಾದರೆ; ಅವರ ರಾಜಕೀಯ ದೂರದೃಷ್ಟಿ ಕೂಡ ಇಲ್ಲಿ ಎದ್ದು ಕಾಣುತ್ತದೆ.
೬. ಹೆಗಡೆ ಸೈದ್ಧಾಂತಿಕ ನಿಲುವು
ಹೆಗಡೆ ಯಾವತ್ತಿದ್ದರೂ ಕಾಂಗ್ರೆಸ್ ವಿರೋಧಿಯೇ ಆಗಿದ್ದರು. ಒಮ್ಮೆ ಆ ಪಕ್ಷದಿಂದ ಹೊರಬಂದ ಮೇಲೆ ಮತ್ತೆ ಎಂದೂ ಕಾಂಗ್ರೆಸ್ ಕದ ತಟ್ಟಲಿಲ್ಲ. ಹಾಗೆಯೆ ಹೆಗಡೆ ಅವರು ಆರ್‌ಎಸ್‌ಎಸ್ ವಿಷಯದಲ್ಲೂ ಅಷ್ಟೇ ಅಂತರ ಕಾಯ್ದುಕೊಂಡಿದ್ದರು. ಹಾಗೆಯೇ ದೇಶ/ಧರ್ಮ/ಸಂಸ್ಕೃತಿ/ರಾಷ್ಟ್ರೀಯತೆಗಳ ವಿಷಯದಲ್ಲಿ ಅವರಲ್ಲೊಂದು ಖಚಿತ ನಿಲುವಿತ್ತು. ಎಂಬತ್ತರ ದಶಕದಲ್ಲಿ ಯಾವುದೋ ಸಂದರ್ಭದಲ್ಲಿ ಸಹೋದ್ಯೋಗಿಗಳ ಜೊತೆ ಮಾತಿಗೆ ಕುಳಿತಾಗ ಆರ್‌ಎಸ್‌ಎಸ್ ನಿಷೇಧ ಮಾಡುವ ವಿಚಾರ ಚರ್ಚೆಗೆ ಬರುತ್ತದೆ. ಆಗ ಹೆಗಡೆ “ಅಂಥ ಹುಚ್ಚುತನದ, ಮೂರ್ಖತನದ ಕೆಲಸ ಮಾಡಬಾರದು. ದೇಶದಲ್ಲಿ ಆರ್‌ಎಸ್‌ಎಸ್‌ನಂತಹ ಸಂಘಟಟನೆಗಳು ಇರಬೇಕುʼʼ ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದರಂತೆ. ಇದು ಅವರ ವಿವೇಚನಾಶಕ್ತಿಗೆ ಒಂದು ನಿದರ್ಶನ.
೭. ನಿಜವಾದ ನಾಯಕ
ನಾಯಕ ಯಾರು ಎಂಬ ಪ್ರಶ್ನೆಗೆ ಕೆಲವು ಉತ್ತರಗಳಿವೆ. ನಾಯಕರ ಗುಚ್ಛವನ್ನು ಬೆಳೆಸುವವ ನಿಜವಾದ ನಾಯಕ ಎಂಬುದು ಒಂದು ಜನಪ್ರಿಯ ಹೇಳಿಕೆ. ಆದರೆ ತನ್ನ ಅನುಪಸ್ಥಿತಿಯಲ್ಲಿ ತಾನು ರೂಪಿಸಿದ ವ್ಯವಸ್ಥೆ ಅತ್ಯುತ್ತಮವಾಗಿ ನಡೆದುಕೊಂಡು ಹೋಗುವ ಹಾಗೆ ಮಾಡುವವ ಯಶಸ್ವೀ ನಾಯಕ ಎಂಬುದು ಮತ್ತೊಂದು. ಹೆಗಡೆ ಅವರಲ್ಲಿ ಈ ಎರಡೂ ಗುಣಗಳಿದ್ದವು. ರಾಜ್ಯ ಮಟ್ಟದಿಂದ ಹಿಡಿದು ಗ್ರಾಮಗಳವರೆಗೆ ಹೆಗಡೆ ನಾಯಕರ ಸರಣಿಯನ್ನೇ ಹುಟ್ಟುಹಾಕಿದರು. ಎಲ್ಲದಕ್ಕಿಂತ ಮುಖ್ಯವಾಗಿ ಕರ್ನಾಟಕದ ಎಲ್ಲ ಜನಜಾತಿ/ಪಂಗಡಗಳಿಗೆ ಸೇರಿದ ನೂರಾರು ನಾಯಕರನ್ನು ಹುಟ್ಟುಹಾಕಿ ಬೆಳೆಸಿದರು. ಹೆಗಡೆ ಕಾಲದಲ್ಲಿ ಅವರ ಪಕ್ಷದಲ್ಲಿ ನಾಯಕರ ದೊಡ್ಡ ಪಡೆಯೇ ಇತ್ತು. ಎರಡು ಮತ್ತು ಮೂರನೇ ಹಂತದಲ್ಲೂ ಅವರು ನಾಯಕರನ್ನು ಬೆನ್ನು ತಟ್ಟಿ ಬೆಳೆಸಿದ್ದರು. ಇಂದು ಪ್ರಮುಖ ಪಕ್ಷಗಳೆಲ್ಲ ನಾಯಕತ್ವದ ತೀವ್ರ ಕೊರತೆ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಹೆಗಡೆ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ.
೮. ವಂಶವಾದದ ವಿರೋಧಿ
ಹೆಗಡೆ ತಮ್ಮ ಉತ್ತರಾಧಿಕಾರಿಗಳನ್ನು ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಹುಟ್ಟುಹಾಕಿದರೇ ಹೊರತು ತಮ್ಮ ಮನೆಯಲ್ಲಲ್ಲ! ಮಕ್ಕಳ ವಿಚಾರದಲ್ಲಿ ಹೆಗಡೆ ಅವರಿಗೊಂದು ಖಚಿತ ನಿಲುವಿತ್ತು. ಅದು ವೃತ್ತಿಯೇ ಆಗಲಿ, ಪ್ರವೃತ್ತಿಯೇ ಆಗಲಿ ಮಕ್ಕಳು ತಮ್ಮ ಸ್ಥಾನವನ್ನು ಸ್ವ ಸಾಮರ್ಥ್ಯದಿಂದ ಗಳಿಸಬೇಕೆಂದು ಬಯಸಿದ್ದರು. ಹಾಗಾಗಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೆಗಡೆ ತಮ್ಮ ಜೀವನದ ಒಂದು ನಿಮಿಷವನ್ನೂ ವಿನಿಯೋಗಿಸುವ ಪ್ರಮೇಯವೇ ಬರಲಿಲ್ಲ.
ಇದನ್ನೂ ಓದಿ | ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?
೯. ಅಲ್ಪಸಂಖ್ಯಾತ/ಲಿಂಗಾಯತ ನಾಯಕ
ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅತ್ಯಂತ ಚಿಕ್ಕ ಹವ್ಯಕ ಬ್ರಾಹ್ಮಣ ಸಮುದಾಯದಲ್ಲಿ. ಆ ಜಿಲ್ಲೆಯಲ್ಲಿರುವ ಬಹುಸಂಖ್ಯಾತ ಸ್ವಜಾತಿ ಬಾಂಧವರೂ ಅವರನ್ನು ರಾಜಕೀಯವಾಗಿ ಬೆಳೆಸಲಿಲ್ಲ. ಅವರು ರಾಜಕೀಯ ಅಸ್ತಿತ್ವ ಕಂಡುಕೊಂಡದ್ದು ಜಿಲ್ಲೆಯ ಹೊರಗಡೆಗೆ. ಕನಕಪುರ, ಬೆಂಗಳೂರಿನ ಬಸವನಗುಡಿ ಇತ್ಯಾದಿ ಕಡೆಗಳಲ್ಲಿ. ಎಲ್ಲದಕ್ಕಿಂತ ಹೆಚ್ಚಾಗಿ ಹೆಗಡೆ ಲಿಂಗಾಯತ ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಇದು ಉಳಿದ ಜನಜಾತಿ ನಾಯಕರಿಗೆ ಮಾದರಿ ಅಲ್ಲವೇ?
೧೦. ಮಾಧ್ಯಮ ಸ್ನೇಹಿ
ಮಾಧ್ಯಮ ಸ್ನೇಹಿ ನಾಯಕ ಮಾತ್ರ ಪ್ರಜಾತಂತ್ರ ಪೋಷಿಸಬಲ್ಲ ಎಂಬ ಜನಪ್ರಿಯ ಹೇಳಿಕೆ ಇದೆ. ಹೆಗಡೆ ಅವರ ಜೀವನದ ನಡೆ ಈ ಮಾತಿಗೆ ಹೇಳಿ ಮಾಡಿಸಿದಂತಿತ್ತು. ಹೆಗಡೆ ಅವರಿಗೆ ಮಾಧ್ಯಮ ಎಂದರೆ ಬಲು ಪ್ರೀತಿ. ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳನ್ನು ಹೆಸರು ಹೇಳಿ ಮಾತನಾಡಿಸುತ್ತಿದ್ದರು. ಅದರಲ್ಲೂ ಕಿರಿಯ ವಯಸ್ಸಿನವರಿದ್ದರೆ ಅವರನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡು ಮಾತನಾಡಿಸುತ್ತಿದ್ದರು. ಅವರ ಮಾಧ್ಯಮ ಸಂವಹನವನ್ನು ಅವರೇ ಮಾಡಿಕೊಳ್ಳಬಲ್ಲವರಾಗಿದ್ದರು. ಹೀಗಾಗಿ ಅಧಿಕಾರದುದ್ದಕ್ಕೂ ಹೆಗಡೆ ಅವರು ಮಾಧ್ಯಮ ಸಲಹೆಗಾರರನ್ನು ಆಶ್ರಯಿಸುವ ಪ್ರಶ್ನೆಯೇ ಬರಲಿಲ್ಲ. ಅವರ ಆಡಳಿತಕ್ಕೆ ಅವರೇ ರಾಯಭಾರಿ ಆಗಿದ್ದರು.