Site icon Vistara News

Ramanagara Lawyers: ರಾಮನಗರ ವಕೀಲರ ಮೇಲೆ ಕೇಸ್; ಪಿಎಸ್‍ಐ ಅಮಾನತಿಗೆ ಬಿಜೆಪಿ ಆಗ್ರಹ

Case against Ramanagara lawyers BJP demands suspension of PSI

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವೈಯಕ್ತಿಕ ದ್ವೇಷ ಇಟ್ಟುಕೊಂಡು ಪೊಲೀಸರ ಮೂಲಕ ವಕೀಲರ (Ramanagara Lawyers) ಮೇಲೆ ಕೇಸನ್ನು ದಾಖಲು ಮಾಡುವ ಕೆಟ್ಟ ಸಂಪ್ರದಾಯದ ವಿರುದ್ಧ ರಾಮನಗರದಾದ್ಯಂತ ಇವತ್ತು ವಕೀಲರು ಸೇರಿ ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಮನಗರದ ಪಿಎಸ್‍ಐ ತನ್ವೀರ್ ಹುಸೇನ್ ಅವರು ವಿನಾಕಾರಣ ನಿರಪರಾಧಿ ವಕೀಲರ ಮೇಲೆ ಕೇಸು ಹಾಕಿದ್ದಾರೆ. ಇದು ಖಂಡನೀಯ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಆರೋಪಿಗಳನ್ನು ಕೈಬಿಟ್ಟು ನಿರಪರಾಧಿಗಳ ಮೇಲೆ ಕೇಸು ಹಾಕುವ ಈ ಕೆಟ್ಟ ಸಂಪ್ರದಾಯಕ್ಕೆ ಕಾರಣರಾದ ಅಲ್ಲಿನ ಪಿಎಸ್‍ಐಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ದೇವಸ್ಥಾನಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಟೀಕೆ ಬಗ್ಗೆ ದೂರು ನೀಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಆರೋಪಿಗಳಿಂದಲೇ ದೂರು ಸ್ವೀಕರಿಸಿ 40 ಜನ ವಕೀಲರ ಮೇಲೆ ಕೇಸು ದಾಖಲಿಸಲಾಗಿದೆ. ಅದರಲ್ಲೂ ಕೂಡ ವಿಪಕ್ಷದಲ್ಲಿ ಕೆಲಸ ಮಾಡುವ ವಕೀಲರನ್ನು ಹುಡುಕಿ ಅವರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ದ್ವೇಷ ಸಾಧನೆಗೆ ಪೊಲೀಸರ ಬಳಕೆ

ಪೊಲೀಸರ ಮೂಲಕ ವೈಯಕ್ತಿಕ ದ್ವೇಷ ಸಾಧನೆ, ವಿಪಕ್ಷಗಳ ಮೇಲೆ ದ್ವೇಷ ಸಾಧನೆಗೆ ಬಳಸಿಕೊಳ್ಳಲಾಗಿದೆ. ಅಂಥ ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಅವರು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಆಗ್ರಹಿಸಿದರು. ಈ ಕುರಿತು ಸದನದಲ್ಲೂ ಗಮನ ಸೆಳೆಯುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜಕೀಯ ಬಿಟ್ಟರೆ ವಕೀಲರ ಜತೆ ಚರ್ಚೆ: ಡಿಕೆಶಿ

“ರಾಮನಗರದಲ್ಲಿ ಬಿಜೆಪಿಯವರು (BJP Karnataka) ವಕೀಲರನ್ನು (Ramanagara Lawyers) ತಪ್ಪು ದಾರಿಗೆಳೆದು ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತ. ರಾಜಕಾರಣ ಬಿಟ್ಟು ವಕೀಲರು ಚರ್ಚೆಗೆ ಬಂದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ರಾಮನಗರದ ವಕೀಲರ ಮೇಲಿನ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ರಾಮನಗರದಲ್ಲಿ ರಾಜಕಾರಣ ನಡೆಯುತ್ತಿದೆ. ಬಿಜೆಪಿಯವರು ವಕೀಲರನ್ನು ದಾರಿ ತಪ್ಪಿಸಿದ್ದಾರೆ. ರಾಜಕಾರಣ ಮಾಡುವವರನ್ನು ನಾನು ಬೇಡ ಎನ್ನುವುದಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಲು ಎಚ್.ಡಿ. ಕುಮಾರಸ್ವಾಮಿ ಅವರು ಸದನದಲ್ಲಿ ಸಮಯ ಕೇಳಿದ್ದಾರಂತೆ. ಅದಕ್ಕೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಕಾನೂನು ಬದ್ಧವಾಗಿ ಅಧಿಕಾರಿಗಳು ಎಲ್ಲರಿಗೂ ರಕ್ಷಣೆ, ಗೌರವ ನೀಡಬೇಕು. ನಮ್ಮ ಬಳಿ ಬಂದು ಕುಳಿತು ಮಾತನಾಡಿದರೆ ಚರ್ಚೆಗೆ ಸಿದ್ಧ. ರಾಜಕಾರಣವನ್ನೇ ಮಾಡುತ್ತೀವಿ ಎಂದರೆ ರಾಜಕಾರಣ ಮಾಡಿಕೊಳ್ಳಲಿ, ನಮ್ಮ ಅಭ್ಯಂತರವೇನೂ ಇಲ್ಲ ಎಂದು ಹೇಳಿದರು.

ನನಗೆ ಮಧ್ಯಪ್ರವೇಶಿಸುವ ಇಚ್ಛೆಯೂ ಇಲ್ಲ

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿಂದಿಸಿದ್ದಾರೆ ಎಂಬ ಆರೋಪದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, “ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ನನಗೆ ಮಧ್ಯಪ್ರವೇಶಿಸುವ ಇಚ್ಛೆಯೂ ಇಲ್ಲ. ಅವರುಗಳು ಬಂದು ತಮ್ಮ ನೋವನ್ನು ಹೇಳಿಕೊಂಡರೆ, ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇನೆ. ನಮಗೆ ವಕೀಲರು, ಅಧಿಕಾರಿಗಳು, ಸಾರ್ವಜನಿಕರ ಬಗ್ಗೆ ಸಮಾನ ಗೌರವವಿದೆ” ಎಂದು ಹೇಳಿದರು.

ಮಾಹಿತಿ ಪಡೆದು ಮಾತನಾಡುವೆ

ಕೇರಳದಲ್ಲಿ ಆನೆ ತುಳಿತಕ್ಕೆ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ: Karnataka Budget Session 2024: ಸದನದಲ್ಲಿ ಬೊಮ್ಮಾಯಿ-ಸಿದ್ದರಾಮಯ್ಯ ಮಧ್ಯೆ ನಮ್ಮದು-ನಿಮ್ಮದು ವಾರ್!

ಏನಿದು ರಾಮನಗರ ವಕೀಲರ ಪ್ರತಿಭಟನೆ ಪ್ರಕರಣ?

ಕಾಶಿಯ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಎಸ್​ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಚಾಂದ್ ಪಾಷಾರ ಕಡೆಯೊಬ್ಬರು ವಕೀಲರ ಸಂಘದ ಮೇಲೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಎಫ್​​ಐಆರ್ ರದ್ದುಗೊಳಿಸಬೇಕು ಮತ್ತು ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.

Exit mobile version