ರಾಮನಗರ: ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಆಯೋಜನೆ ಮಾಡಲಾಗುತ್ತಿರುವ ಭಾರತ್ ಜೋಡೊ ಯಾತ್ರೆಯ ಕುರಿತು ವ್ಯಂಗ್ಯವಾಡಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ. ಎಂ. ಇಬ್ರಾಹಿಂ, ಮೊದಲು ಕಾಂಗ್ರೆಸ್ ಜೋಡೊ ಅಭಿಯಾನ ಆರಂಭಿಸಬೇಕು. ಅದನ್ನೇ ಮಾಡಲಾಗದವರು ಭಾರತವನ್ನು ಜೋಡಿಸುತ್ತಾರೆಯೇ? ಎಂದಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಭಾರತ್ ಜೋಡೋಕ್ಕಿಂತ ಕಾಂಗ್ರೆಸ್ ಜೋಡಿ ಮಾಡಬೇಕು. ಗುಲಾಂ ನಬಿ ಆಜಾದ್, ಮುದ್ದಹನುಮೇಗೌಡ, ಎಂ.ಡಿ. ಲಕ್ಷ್ಮೀನಾರಾಯಣ ಸೇರಿ ಒಬ್ಬೊಬ್ಬರೇ ಕಾಂಗ್ರೆಸ್‌ನಿಂದ ಕಿತ್ತುಕೊಂಡು ಹೋದರು. ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿದ್ದು ಇಲ್ಲಿನ ಯಲ್ಚಕ್ನಳ್ಳಿ ಕಲ್ಚಕ್ನಳ್ಳೀನೇ ಜೋಡಿಸೋಕೆ ಆಗಿಲ್ಲ ಅವರ ಕೈಯಲ್ಲಿ. ಇನ್ನು ಭಾರತ ಎಲ್ಲಿ ಜೋಡಿಸುತ್ತೀರ?
ನಾವು ಯಾರಿಗೂ ಜೋಡಿಸುವವರಲ್ಲ. ಪಂಚರತ್ನ ಕಾರ್ಯಕ್ರಮದಲ್ಲಿ ಮುಂದುವರಿಯುತ್ತೇವೆ. ಕುಮಾರಸ್ವಾಮಿಯವರನ್ನು ಸಿಎಂ ಮಾಡಿ, ಇದನ್ನು ನಾವು ಮಾಡದೇ ಇದ್ದರೆ ಮತ್ತೆ ಓಟು ಕೇಳಲು ಬರುವುದಿಲ್ಲ ಎಂದರು.
ಮಹಿಳೆಯೊಬ್ಬರ ಮೇಲೆ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಹಲ್ಲೆ ಹಾಗೂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ಕೇಶವಕೃಪಾದವರು ಉತ್ತರ ಕೊಡಬೇಕು. ಇಂತಹ ವಿಚಾರಗಳಲ್ಲಿ ನಾವು ಬಸವ ಕೃಪಾದವರ ಗಮನ ಹೋಗುವುದಿಲ್ಲ. ಅವರ ಸಂಸ್ಕೃತಿ ಏನು ಎನ್ನುವುದು ಅವರ ಮಾತಿನಿಂದಲೇ ಗೊತ್ತಾಗಿದೆ ಎಂದರು.
ಇದನ್ನೂ ಓದಿ | ಕರ್ನಾಟಕದಲ್ಲಿ ʼಭಾರತ್ ಜೋಡೊʼ ಹೆಸರು ಬದಲು: ಅಕ್ಟೋಬರ್ 3 ರಿಂದ 21 ದಿನ ಯಾತ್ರೆ