Site icon Vistara News

Congress Politics : 3 ಡಿಸಿಎಂ ಹುದ್ದೆ ಬೇಕಾದವರು 2 ಎಂಪಿ ಸೀಟ್‌ ಗೆಲ್ಲಿಸಿಕೊಂಡು ಬರ್ಲಿ ; ಬಾಲಕೃಷ್ಣ ಸಲಹೆ

Magadi MLA HC Balakrishna DCM Post

ರಾಮನಗರ: ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ (Three DCM post) ಸೃಷ್ಟಿಸಬೇಕೆಂದು ಬೇಡಿಕೆ ಮಂಡಿಸುತ್ತಿರುವವರಿಗೆ ಲೋಕಸಭಾ ಚುನಾವಣೆಯ (Parliament Elections 2024) ಟಾಸ್ಕ್ ನೀಡಬೇಕು. ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟವರು ಪ್ರತಿಯೊಬ್ಬರು ಎರಡೆರಡು ಕ್ಷೇತ್ರ ಗೆಲ್ಲಿಸಿಕೊಡಲಿ : ಹೀಗೊಂದು ಸಲಹೆಯನ್ನು ಕೊಟ್ಟಿದ್ದಾರೆ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ (Magadi MLA HC Balakrishna) ಅವರು. ಉಪಮಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಆಪ್ತರೆಂದು ಗುರುತಿಸಲ್ಪಟ್ಟಿರುವ ಅವರು ಎರಡೆರಡು ಕ್ಷೇತ್ರ ಗೆಲ್ಲಿಸಿ ಕೊಡುವವರನ್ನು ಡಿಸಿಎಂ ಮಾಡೋಣ (Congress Politics) ಎಂದರು.

ಜಾತಿ ಹೆಸರಿನಲ್ಲಿ ಉಪ ಮುಖ್ಯಮಂತ್ರಿ ಮಾಡಿ ಎಂದು ಹೇಳುವುದು ಸರಿಯಲ್ಲ. ಕೆಲವು ಸಚಿವರು ಅನವಶ್ಯಕವಾಗಿ ಹೇಳಿಕೆ ನೀಡುತ್ತಿದ್ದಾರೆ. ನಿಜಕ್ಕೂ ಅವರಿಗೆ ಕಾಳಜಿ ಇದ್ದರೆ ಹೈಕಮಾಂಡ್​ ಭೇಟಿಯಾಗಿ ಮನವಿ ಮಾಡಲಿ. ಇಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿ ಗೊಂದಲ ಮಾಡಬಾರದು ಎಂದು ತಮ್ಮದೇ ಪಕ್ಷದ ಸಚಿವರ ನಡೆ ಬಗ್ಗೆ ಬಾಲಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು.

ಮೂವರು ಉಪಮುಖ್ಯಮಂತ್ರಿ ಹುದ್ದೆಯ ಬೇಡಿಕೆಯ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಶಕ್ತಿ ಕುಗ್ಗಿಸುವ ಪ್ರಯತ್ನವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಈ ರೀತಿ ಟಾರ್ಗೆಟ್ ಮಾಡುತ್ತಿದೆ ಎಂಬ ಸುದ್ದಿಗಳ ಬಗ್ಗೆ ಮಾತನಾಡಿದ ಬಾಲಕೃಷ್ಣ ಟವರು, ಯಾರೂ ಯಾರನ್ನೂ ಟಾರ್ಗೆಟ್ ಮಾಡಲು ಆಗಲ್ಲ. ಯಾರ ಶಕ್ತಿ ಏನು ಎಂದು ನಮ್ಮ ಹೈಕಮಾಂಡ್​ಗೆ ಗೊತ್ತು. ಎಲ್ಲಾ ಪಕ್ಷದಲ್ಲೂ ಟಾರ್ಗೆಟ್ ಮಾಡುವವರು ಇದ್ದೇ ಇರುತ್ತಾರೆ. ಆದರೆ ಇದನ್ನು ಟಾರ್ಗೆಟ್ ಅಂತ ಅಂದುಕೊಳ್ಳೊದಿಲ್ಲ. ಕೆಲವರು ಅವರ ಅಭಿಪ್ರಾಯ ತಿಳಿಸಿದ್ದಾರೆ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸದ್ಯಕ್ಕೆ ಈ ವಿಚಾರ ಅಪ್ರಸ್ತುತ ಅಂತ ಮಲ್ಲಿಕಾರ್ಜುನ್​ ಖರ್ಗೆ ಅವರೇ ಹೇಳಿದ್ದಾರೆ. ಸಿಎಂ ಹಾಗೂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಧ್ಯೆ ಕೆಲವರು ಅವರ ಬೇಳೆ ಬೇಯಿಸಿಕೊಳ್ಳಲು ಏನೇನೂ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಮತ ಯಾರಿಗೆ ಮಂತ್ರಾಕ್ಷತೆಗಾ? 2 ಸಾವಿರ ರೂ ಸಹಾಯ ಮಾಡಿದವರಿಗಾ?

ಇನ್ನೂ ಪೂರ್ಣಗೊಳ್ಳದ ರಾಮ ಮಂದಿರವನ್ನು ರಾಜಕೀಯ ಉದ್ದೇಶದಿಂದ ಉದ್ಘಾಟನೆ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ ಎಂದು ಪ್ರಶ್ನಿಸಿದ ಎಚ್.ಸಿ. ಬಾಲಕೃಷ್ಣ ಅವರು, ಬಿಜೆಪಿಯವರು ಮನೆಮನೆಗೆ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ಕೊಡುತ್ತಿದ್ದೇವೆ. ಯಾರಿಗೆ ಮತ ಹಾಕಬೇಕು? ಮಂತ್ರಾಕ್ಷತೆ ಕೊಟ್ಟವರಿಗಾ ಅಥವಾ ಎರಡು ಸಾವಿರ ರೂ. ಕೊಟ್ಟವರಿಗಾ ಎಂದು ಜನ ನಿರ್ಧರಿಸುತ್ತಾರೆ ಎಂದು ಹೇಳಿದರು.

ರಾಮನಗರದಲ್ಲೇ ರಾಮ ಮಂದಿರ ಕಟ್ಟುತ್ತೇವೆ ಎಂದ ಮಾಗಡಿ ಬಾಲಕೃಷ್ಣ

ರಾಮನಗರದಲ್ಲಿ ರಾಮಮಂದಿರ‌ ಕಟ್ಟಲು ನಾವೂ ಜಾಗ ಹುಡುಕುತ್ತಿದ್ದೇವೆ. 20 ಎಕರೆ ಜಾಗದಲ್ಲಿ ಮಂದಿರ ಕಟ್ಟುತ್ತೇವೆ. ರಾಮಮಂದಿರ‌ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ ಅವರು, ರಾಮಮಂದಿರ ಬಿಜೆಪಿ, ಕಾಂಗ್ರೆಸ್​ ಸ್ವತ್ತಲ್ಲ. ರಾಮಮಂದಿರ ಈ ಸಮಾಜದ ಸ್ವತ್ತು. ನಾವು ರಾಮಮಂದಿರ ಬಗ್ಗೆ ನಾವು ಚರ್ಚೆ ಮಾಡಲ್ಲ. ಮಂದಿರ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.

Exit mobile version