ರಾಮನಗರ: ಕಾಡಾನೆ ದಾಳಿಗೆ ವ್ಯಕ್ತಿ (Elephant Attack) ಬಲಿಯಾಗಿದ್ದಾರೆ. ಕನಕಪುರ ತಾಲೂಕಿನ ಬನ್ನಮುಕ್ಕೋಳ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಕೃಷ್ಣ (52) ಕಾಡಾನೆ ದಾಳಿಗೆ ಬಲಿಯಾದವರು.
ರಾಮಕೃಷ್ಣ ಗ್ರಾಮದ ಸಮೀಪವೇ ಇರುವ ಕಾಡಿಗೆ ಕಟ್ಟಿಗೆ ತರಲು ತೆರಳಿದ್ದರು. ರಾಮಕೃಷ್ಣರ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಆದರೆ ತಪ್ಪಿಸಿಕೊಳ್ಳಲು ಆಗದೇ ಕಾಡಾನೆ ತುಳಿತಕ್ಕೆ ಮೃತಪಟ್ಟಿದ್ದಾರೆ.
ತಿಂಗಳ ಅಂತರದಲ್ಲೇ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕನಕಪುರ ತಾಲೂಕಿನಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕೋಡಿಹಳ್ಳಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣವು ದಾಖಲಾಗಿದೆ.
ಇದನ್ನೂ ಓದಿ: Road Accident : 3 ವರ್ಷದ ಬಾಲಕಿ ತಲೆ ಮೇಲೆ ಹರಿದ ಕಾರು; ಪೋಷಕರ ಎದುರೇ ಮೃತ್ಯು
ಆನೆ, ಚಿರತೆ, ಹುಲಿ ಆಯ್ತು ಮೈಸೂರಲ್ಲಿ ಕರಡಿಗಳ ಹಾವಳಿ
ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮುಂದುವರಿದಿದೆ. ಕಾಡಾನೆ, ಚಿರತೆ, ಹುಲಿ ಬಳಿಕ ಇದೀಗ ಕರಡಿಗಳು ಪ್ರತ್ಯಕ್ಷಗೊಳ್ಳುತ್ತಿದೆ. ತಿ.ನರಸೀಪುರ ಪಟ್ಟಣದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದೆ. ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ಕಡ್ಲೆ ರಂಗಮ್ಮ ಬೀದಿ, ಶ್ರೀರಾಂಪುರ ಬಡಾವಣೆ, ವಾಲ್ಮೀಕಿ ಶಾಲೆ ಸುತ್ತಮುತ್ತ ಕರಡಿಗಳು ಓಡಾಟ ನಡೆಸಿವೆ.
ಕರಡಿಗಳ ಓಡಾಟವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸಮಯ ಓಡಾಡಲು ಬಡಾವಣೆ ನಿವಾಸಿಗಳು ಭಯಭೀತಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿಗಳ ಸೆರೆಗೆ ಮುಂದಾಗಿದ್ದಾರೆ.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ
ಚಿರತೆ ದಾಳಿಗೆ ಹಸು ಬಲಿಯಾಗಿದೆ. ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ ಮಲ್ಲಶೆಟ್ಟಿ ಎಂಬುವರಿಗೆ ಸೇರಿದ ಹಸುವಿನ ಮೇಲೆ ದಾಳಿ ಮಾಡಿದೆ. ತಡ ರಾತ್ರಿ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಚಿರತೆ ಸೆರೆಗೆ ರೈತರು ಆಗ್ರಹಿಸಿದ್ದಾರೆ. ಅನೇಕ ದಿನಗಳಿಂದ ಕುಮಚಹಳ್ಳಿ, ತಮ್ಮಡಹಳ್ಳಿ , ಲಕ್ಕೂರು ಗ್ರಾಮಗಳ ಸುತ್ತ ಮುತ್ತ ಚಿರತೆ ಪ್ರತ್ಯಕ್ಷಗೊಂಡಿದೆ.
ಕೃಷ್ಣಮೃಗ ಬೇಟೆಯಾಡುತ್ತಿದ್ದ ಇಬ್ಬರ ಬಂಧನ
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬಡವನಹಳ್ಳಿ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಆರ್.ಎಫ್.ಓ ಡಿ. ಬಹುಗುಣ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಚಳ್ಳಕೆರೆ ತಾಲೂಕಿನ ಕಾಟಪ್ಪನಹಟ್ಟಿಯ ರಾಮಮೂರ್ತಿ, ಪಾಪಣ್ಣ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬೇಟೆಯಾಡಿದ್ದ ಕೃಷ್ಣಮೃಗ, ಮಾರಕಾಸ್ತ್ರ, ಹಾಗೂ ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಆನೇಕಲ್‌ನಲ್ಲಿ ಚಿರತೆ ಪ್ರತ್ಯಕ್ಷ
ಆನೇಕಲ್‌ನ ಗಟ್ಟಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಚಿರತೆ ಓಡಾಟದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಟ್ಟಹಳ್ಳಿ ಗ್ರಾಮದ ಮನೆಯೊಂದರ ಬಳಿ ಚಿರತೆ ಓಡಾಡಿದೆ. ಚಿರತೆ ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿದ್ದು, ಜನರು ಆತಂಕದಲ್ಲೇ ಓಡಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.