ರಾಮನಗರ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಯಾವುದೇ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಹೆದರಿ ಹೋಗಿದ್ದಾರೆ, ಭಯ ಕಾಡುತ್ತಿದೆ. ಹಿಂದೆ ರಾಮನಗರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಸ್ಪರ್ಧೆ ಇತ್ತು. ಆದರೆ ಈಗ ಬಿಜೆಪಿ ಅದನ್ನು ಆಕ್ರಮಿಸಿಕೊಂಡಿದೆ. ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಯಾವ ಸೀಟನ್ನೂ ಗೆಲ್ಲುವುದಿಲ್ಲ. ರಾಮನಗರದಲ್ಲೇ ಬಿಜೆಪಿ ಸದೃಢವಾಗುತ್ತಿದೆ.
ಕುಮಾರಸ್ವಾಮಿ 4 ವರ್ಷ ಕ್ಷೇತ್ರಕ್ಕೆ ಬರಲಿಲ್ಲ. ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ, ಅದಕ್ಕಾಗಿ ಅವರು ಹತಾಷರಾಗಿದ್ದಾರೆ. ಹಾಲಿಗಾದರೂ ಹಾಕಿ, ನೀರಿಗಾದರೂ ಹಾಕಿ ಅಂತಾರೆ. ಇದು ಹಳೇ ಡೈಲಾಗ್. ಒಂದು ಬಾರಿ ಹಾರ್ಟ್ ಪ್ರಾಬ್ಲಂ ಅಂತಾರೆ, ಕಣ್ಣೀರು ಸುರಿಸುತ್ತಾರೆ. ಭಾವನಾತ್ಮಕವಾಗಿ ಸೆಳೆಯುವ ಕಾಲ ಹೋಯಿತು ಎಂದರು.
ತಹಸೀಲ್ದಾರ್ ಕುರಿತು ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ನೀವೆ ಸರ್ವೆ ಮಾಡಿ ಸರಿಯಿಲ್ಲ ಅಂದರೆ ಸರ್ಕಾರ ಬದಲಿಸಲಿದೆ. ಕುಮಾರಸ್ವಾಮಿ ಒಬ್ಬ PDO ಪರವಾಗಿಯೂ ವಾದ ಮಾಡುವ ಹಂತಕ್ಕೆ ಹೋಗಿದ್ದಾರೆ. ಅವರಿಗೆ ಇಷ್ಟು ದಿನ ಬಿಜೆಪಿ ಸರ್ಕಾರದ ಸಹಕಾರ ಬೇಕಾಗಿತ್ತು. ದಿನ ಬೆಳಗ್ಗೆ ಸಿಎಂ, ಮಂತ್ರಿಗಳ ಬಳಿ ಹೋಗುತ್ತಿದ್ದರು, ಎಲ್ಲಾ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅವರು ಬೆಳಗ್ಗೆ ಮಾತನಾಡುತ್ತಾರೆ, ಸಂಜೆಗೆ ಬ್ರದರ್ ನನಗೆ ಈ ಕೆಲಸ ಮಾಡಿಕೊಡು ಎಂದು ಕೇಳಿಕೊಳ್ಳುತ್ತಾರೆ. ಮೂಡ್ ಸರಿಯಿದ್ದಾಗ ಮಾತನಾಡಿಬಿಡುತ್ತಾರೆ. ಹೇ ಬೇಜಾರ್‌ನಲ್ಲಿದೆ ಬಿಡು ಬ್ರದರ್ ಎನುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಮಾರಸ್ವಾಮಿ ಬಗ್ಗೆ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ.
ನಾವು ಅವರಿಗೆ ಸವಾಲು ಹಾಕಲು ರೆಡಿಯಿಲ್ಲ. ಅವರಿಗೆ ಹೆದರಿಸಿ, ಬೆದರಿಸಿ ರೂಡಿ ಇದೆ.ನಾವು ಇದಕ್ಕೆಲ್ಲ ಜಗ್ಗುವವರಲ್ಲ, ಅದು ಅವರಿಗೂ ಗೊತ್ತಿದೆ. ಸರ್ಕಾರ ಇದ್ದಾಗ ಸರಿಯಾಗಿ ಆಡಳಿತ ಮಾಡಲಿಲ್ಲ ಎಂದರು. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಹಾಡಿ ಹೊಗಳಿದ ಯೋಗೇಶ್ವರ್, ನೋಡಿ ನಮ್ಮ ಜಿಲ್ಲಾ ಮಂತ್ರಿ ಎಷ್ಟು ಸ್ಮೂತ್ ಅಗಿ ಮಾತನಾಡಿದರು. ಹೇಗೆ ಆಡಳಿತ ನಡೆಸಬೇಕೆಂದು ಅವರಿಗೆ ಗೊತ್ತಿದೆ. ನಾವು ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ. 2023ಕ್ಕೆ ನಮ್ಮದೇ ಸರ್ಕಾರ ಬರಲಿದೆ. ಅವರು ಎರಡು ಬಾರಿ ಸಿಎಂ ಆಗಿ ಸರಿಯಾದ ಆಡಳಿತ ಕೊಡಲಿಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಅಸ್ತಿತ್ವ ಇಲ್ಲ ಎಂದರು.
ಇದನ್ನೂ ಓದಿ | Election 2023 | ಮುಂದಿನ ಚುನಾವಣೆಯಲ್ಲಿ 40 ಸೀಟು ಬಂದರೆ ನಾನು ಸಿಎಂ ಆಗಲ್ಲ: ಎಚ್.ಡಿ. ಕುಮಾರಸ್ವಾಮಿ