ರಾಮನಗರ: ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವವನ್ನು (Independence day 2023) ಸಂಭ್ರಮದಿಂದ ಆಚರಿಸಲು ಅಣಿಯಾಗುತ್ತಿರುವಂತೆಯೇ ರಾಮನಗರದ ಕಾಂಗ್ರೆಸ್ ಶಾಸಕ (Ramanagara Congress MLA) ಇಕ್ಬಾಲ್ ಹುಸೇನ್ (MLA Iqbal Hussain) ಹೊಸ ದಾಖಲೆಯೊಂದನ್ನು ಬರೆಯಲು ರೆಡಿಯಾಗಿದ್ದಾರೆ. ಅವರು ಈ ಬಾರಿಯ ಸ್ವಾತಂತ್ರ್ಯ ಉತ್ಸವಕ್ಕೆ ಬರೋಬ್ಬರಿ 2.70 ಲಕ್ಷ ಲಡ್ಡು (2.7 Lakh Laddus) ಹಂಚಲು ಮುಂದಾಗಿದ್ದಾರೆ.
ಇಕ್ಬಾಲ್ ಹುಸೇನ್ ಅವರು ರಾಮನಗರ ಜಿಲ್ಲೆಯ ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಆದರೆ, ಅವರು ಇಡೀ ರಾಮನಗರ ಜಿಲ್ಲೆಗೆ ಲಡ್ಡು ಹಂಚಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಅವರು ಜಿಲ್ಲೆಯ ಎಲ್ಲ ಐದು ತಾಲೂಕುಗಳ ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಲಾಡು ಹಂಚಿ, ಸಿಹಿ ಉಣಿಸಲಿದ್ದಾರೆ. ಈ ಬಾರಿ ಅವರು ಇದಕ್ಕಾಗಿ ತಯಾರಿಸುತ್ತಿರುವ ಲಡ್ಡುಗಳ ಸಂಖ್ಯೆ 2.70 ಲಕ್ಷ.
ಇಷ್ಟೊಂದು ಲಡ್ಡು ತಯಾರಿಸಲು ಹೇಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಗಮನಿಸಿದರೆ ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಲಾಡು ತಯಾರಿ ಕಾರ್ಯ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದಾರೆ. ಸುಮಾರು 100 ಮಂದಿ ನುರಿತ ಬಾಣಸಿಗರಿಂದ ಲಡ್ಡು ತಯಾರಿ ನಡೆಯುತ್ತಿದೆ.
ಅಂದ ಹಾಗೆ, ಇಕ್ಬಾಲ್ ಹುಸೇನ್ ಅವರು ಈ ರೀತಿ ಲಡ್ಡು ತಯಾರಿಸಿ ಹಂಚುತ್ತಿರುವುದು ಇದೇ ಮೊದಲಲ್ಲ. ಕಳೆದ 20 ವರ್ಷಗಳಿಂದ ಪ್ರತಿ ವರ್ಷವೂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಲಾಡು ಹಂಚಿಕೆ ಮಾಡುತ್ತಿದ್ದಾರೆ ಅವರು. ಕಳೆದ ಹಲವು ವರ್ಷಗಳಿಂದ ಈ ರೀತಿ ಲಡ್ಡು ವಿತರಿಸುವ ಕಾರ್ಯ ಮಾಡುತ್ತಿದ್ದೇನೆ. ಕೋವಿಡ್ ಸಂದರ್ಭದ ಎರಡು ವರ್ಷ ಬಿಟ್ಟರೆ ಈ ಕೆಲಸ ನಿರಂತರವಾಗಿ ಸಾಗಿದೆ ಎಂದು ಅವರು ಇಕ್ಬಾಲ್ ಹುಸೇನ್ ತಿಳಿಸಿದರು.
ಸೋಮವಾರವೇ ಎಲ್ಲ ಕಡೆ ರವಾನೆ
ರಾಮನಗರ ಜಿಲ್ಲೆಯಲ್ಲಿ 1750 ಸರಕಾರಿ, ಖಾಸಗಿ, ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಿವೆ. ಇವುಗಳಲ್ಲಿ ಒಟ್ಟು 2,51,073 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲರಿಗೆ ಲಡ್ಡು ನೀಡಿ ಸಂಭ್ರಮ ಆಚರಣೆಗೆ ನೆರವಾಗುವುದು ತನ್ನ ಗುರಿ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ರಾಮನಗರದ ಕಲ್ಯಾಣ ಮಂಟಪದಲ್ಲಿ ತಯಾರಿಸಲಾದ ಈ ಲಡ್ಡುಗಳನ್ನು ಪ್ಯಾಕ್ ಮಾಡಿ ಆಯಾ ಶಾಲೆ, ಕಾಲೇಜು ಮತ್ತು ಕಚೇರಿಗಳಿಗೆ ರವಾನೆ ಮಾಡಲಾಗುತ್ತದೆ. ಸೋಮವಾರವೇ ಈ ಕಾರ್ಯ ನಡೆದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲ ಶಾಲೆಗಳಿಗೆ ಲಡ್ಡುಗಳನ್ನು ರವಾನಿಸಲಾಗಿದೆ. ಇದರ ಜತೆಗೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೂ ಅವರು ಲಡ್ಡು ತಲುಪಿಸಿದ್ದಾರೆ.
2.7 ಲಕ್ಷ ಲಡ್ಡು ವಿತರಣೆಗೆ ಖರ್ಚು ಎಷ್ಟು?
ರುಚಿಕರವಾದ ಲಡ್ಡುಗಳನ್ನು ಎಲ್ಲ ಮಕ್ಕಳಿಗೆ ಹಂಚಬೇಕು ಎನ್ನುವ ಆಸೆಯಿಂದ ಇಕ್ಬಾಲ್ ಹುಸೇನ್ ಅವರು ಹಂಚುತ್ತಿರುವ ಈ ಲಡ್ಡುಗಳಿಗೆ ಆಗಬಹುದಾದ ಖರ್ಚು ವೆಚ್ಚ ಎಷ್ಟು ಎಂಬ ಕುತೂಹಲವೂ ಎಲ್ಲೆಡೆ ಇದೆ. ಒಂದು ಲಡ್ಡಿಗೆ 10 ರೂ. ಖರ್ಚು ಬರುತ್ತದೆ ಎಂದು ಲೆಕ್ಕ ಹಾಕಿದರೂ ಒಟ್ಟಾರೆ ಖರ್ಚು 27 ಲಕ್ಷ ರೂ. ಬರುತ್ತದೆ.
ಇಕ್ಬಾಲ್ ಹುಸೇನ್ ಅವರು ಉದ್ಯಮಿ
ನಿಜವೆಂದರೆ ರಾಮನಗರ ಜೆಡಿಎಸ್‌ನ ಭದ್ರಕೋಟೆ. 2004ರಿಂದ ಸತತವಾಗಿ ಜೆಡಿಎಸ್ ಗೆಲುವು ಸಾಧಿಸುತ್ತಿದೆ. 2004 ಮತ್ತು 2008ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2013ರಲ್ಲಿ ಎಚ್ ರಾಜು, 2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಿದ್ದರು. 2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಾಗ ಗೆಲುವಿನ ಅಂತರ 23000 ಮತಗಳಿದ್ದವು. ಅನಿತಾ ಕುಮಾರಸ್ವಾಮಿ ಅವರು 92000 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಇಕ್ಬಾಲ್ ಅವರಿಗೆ 69 ಸಾವಿರ ಮತಗಳು ಬಂದಿದ್ದವು. ಆದರೆ, ಈ ಬಾರಿ ಇಕ್ಬಾಲ್ ಹುಸೇನ್ ಅವರು ಈ ಗೆಲುವನ್ನು ತಮ್ಮ ಕಡೆಗೆ ತಿರುಗಿಸಿಕೊಂಡರು. 2023ರ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ಅವರಿಗೆ 87 ಸಾವಿರ ಮತಗಳು ಬಂದಿದ್ದರೆ, ನಿಖಿಲ್ ಕುಮಾರಸ್ವಾಮಿ ಅವರಿಗೆ 76 ಸಾವಿರ ಮತಗಳು ಬಂದಿದ್ದವು.
ಇಕ್ಬಾಲ್ ಹುಸೇನ್ ಅವರು ಗ್ರಾನೈಟ್ ಉದ್ಯಮಿಯಾಗಿದ್ದು, ಜನಸೇವಕರಾಗಿ ಹೆಸರಾಗಿದ್ದಾರೆ. ನಾನೂ ರಾಮ ಭಕ್ತ, ಹೊಸ ರಾಮ ನಗರ ನಿರ್ಮಾಣವೇ ನನ್ನ ಗುರಿ ಎಂದು ಹೇಳುವ ಮೂಲಕ ಅವರು ಸುದ್ದಿಯಾಗಿದ್ದರು.
ಇದನ್ನೂ ಓದಿ: Independence Day 2023 : ಟೆಲಿಫೋನ್, ಮೊಬೈಲ್ ಇಲ್ಲದ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂವಹನ ಹೀಗಿತ್ತು!