ರಾಮನಗರ: ಸರ್ಕಾರಿ ಶಾಲೆಯಲ್ಲಿ (Ramanagar News) ಎರಡು ಜಡೆ ಹಾಕಿಲ್ಲವೆಂದು ಶಿಕ್ಷಕರಿಬ್ಬರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದಾರೆ. ಶಿಕ್ಷಕರ ನಡೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.
ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು ಸಿಟ್ಟಾದ ಇಬ್ಬರು ಶಿಕ್ಷಕರು ಮೂವರು ವಿದ್ಯಾರ್ಥಿನಿಯರಿಗೆ ಕೂದಲು ಕತ್ತರಿಸಿದ್ದಾರೆ. ಹೆಣ್ಮಕ್ಕಳ ತಲೆಗೂದಲು ಕಟ್ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ ಎಂದು ಪೋಷಕರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಪವಿತ್ರ ಹಾಗೂ ಶಿವಕುಮಾರ್ ಎಂಬ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ದರ್ಪ ತೋರಿದ್ದಾರೆ. ವಿದ್ಯಾರ್ಥಿನಿಯರು ಪ್ರತಿನಿತ್ಯ ಒಂದು ಜಡೆ ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಕೂದಲು ಕಟ್ ಮಾಡಿದ್ದವಿ ಎಂದು ಸಮಜಾಯಿಷಿಯನ್ನು ನೀಡಿದ್ದಾರೆ. ಪೋಷಕರ ಎದುರು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Electric shock : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದವನಿಗೆ ಕರೆಂಟ್ ಶಾಕ್; ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ
ಅತಿಥಿ ಶಿಕ್ಷಕರ ತಲೆದಂಡ
ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದ ಅತಿಥಿ ಶಿಕ್ಷಕರಿಗೆ ತಲೆದಂಡವಾಗಿದೆ. ಇಬ್ಬರು ಶಿಕ್ಷಕರು ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಮರಿಗೌಡ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಘಟನೆ ಬಗ್ಗೆ ಮೇಲಾಧಿಕಾರಿಗೆ ಪತ್ರ ಬರೆದು, ಅತಿಥಿ ಶಿಕ್ಷಕರಾದ ಶಿವಕುಮಾರ್ ಹಾಗೂ ಪವಿತ್ರ ಅವರಿಗೆ ಅಮಾನತು ಆದೇಶಕ್ಕೆ ರಾಮನಗರ ಜಿಲ್ಲಾ ಡಿಡಿಪಿಐ ಬಸವರಾಜೇಗೌಡಗೆ ವರದಿ ಸಲ್ಲಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವಿವರಣೆ ಮೂಲಕ ವರದಿ ಸಲ್ಲಿಸಿದ್ದು, ಕೂಡಲೇ ಇಬ್ಬರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ