Site icon Vistara News

Road Accident : ಬೆಂಗಳೂರು-ಮೈಸೂರು ಫ್ಲೈಓವರ್‌ನಿಂದ ಕೆಳಗೆ ಬಿದ್ದ ಕಾರು; ರಕ್ತಕಾರಿ ಮೃತಪಟ್ಟ ಚಾಲಕ

Car crashes on Bengaluru Mysuru flyover Drivers death

ರಾಮನಗರ: ವಾಹನ ಚಲಾಯಿಸುವಾಗ ಸ್ವಲ್ಪ ಮೈಮರೆತರೂ ಸಾವಿನ ದಾರಿ ತೆರೆದುಕೊಳ್ಳುತ್ತದೆ. ಅತಿವೇಗ ಚಾಲನೆಯು ತಂದ ಆಪತ್ತು ಕಾರು ಚಾಲಕನ ಪ್ರಾಣವನ್ನೇ ಕಸಿದಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಕಾರಿನಿಂದ ಬೇರ್ಪಟ್ಟು ಮೇಲಿಂದ ಬಿದ್ದ ಚಾಲಕ ರಕ್ತಕಾರಿ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ನೇಟಸ್ ಶಾಲೆ ಸಮೀಪ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕಸ್ತೂರು ಗ್ರಾಮದ ಅಭಿಷೇಕ್ ಮೃತ ದುರ್ದೈವಿ.

ಫ್ಲೈಓವರ್‌ ಮೇಲೆ ಅತೀವೇಗವಾಗಿ ಬಂದಾಗ ನಿಯಂತ್ರಣ ತಪ್ಪಿದ್ದು, ಈ ವೇಳೆ ಹೆದ್ದಾರಿಯಿಂದ ಅಂಡರ್ ಪಾಸ್‌ಗೆ ಕಾರು ಉರುಳಿದೆ. ಕಾರು ಬಿದ್ದಿರುವ ರಭಸಕ್ಕೆ ಸಂಪೂರ್ಣ ಛಿದ್ರಗೊಂಡಿದೆ. ಇತ್ತ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಓಪನ್‌ ಆಗಿದ್ದು, ಸ್ಟೇರಿಂಗ್‌ ಹೊರಗೆ ಬಂದಿದೆ. ಅಂಡರ್‌ ಪಾಸ್‌ಗೆ ಕಾರು ಬಿದ್ದಾಗ ಅಲ್ಲಿ ಇತರೆ ವಾಹನ ಸವಾರರು ಇರಲಿಲ್ಲ. ಹೀಗಾಗಿ ಸಂಭವಿಸಬಹುದಾದ ಮತ್ತೊಂದು ಅವಘಡ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಅಪಘಾತದಿಂದಾಗಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:Namma Metro: ಮೆಟ್ರೋ ಮಹಿಳಾ ಸಿಬ್ಬಂದಿಗೆ ಮೈ-ಕೈ ಮುಟ್ಟಿ ಕಿರಿಕಿರಿ; ಸಹಕರಿಸದೇ ಹೋದ್ರೆ ವರ್ಗಾವಣೆ ಬೆದರಿಕೆ

ಜೀವನದಲ್ಲಿ ಜಿಗುಪ್ಸೆ; ಕಟ್ಟಡ ಏರಿ ವ್ಯಕ್ತಿ ಆತ್ಮಹತ್ಯೆ

ಕೌಟುಂಬಿಕ ಜೀವನಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡದ ಕಕ್ಕಯ್ಯ ನಗರದ ಎಸ್ ಡಿ ಎಂ ಕಾಲೇಜು ಬಳಿ ನೇಣಿಗೆ ಶರಣಾಗಿದ್ದಾರೆ. ಗಣೇಶ್ ಹುತಗಿ (40) ಆತ್ಮಹತ್ಯೆಗೆ ಶರಣಾದವರು.

ನಗರದ ಕಕ್ಕಯ್ಯ ನಗರ ನಿವಾಸಿಯಾಗಿರುವ ಗಣೇಶ್, ಬಿಲ್ಡಿಂಗ್ ಮೇಲೆ ಏರಿ ಅಲ್ಲಿಂದಲೇ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಸ್ಥಳೀಯರು ಇದನ್ನೂ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸಿಲಿಂಡರ್‌ ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ; ಸಪ್ಲೈಯರ್‌ ಸ್ಥಳದಲ್ಲೇ ಸಾವು

ವಿಜಯನಗರ: ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿಯಾಗಿದೆ. ಪರಿಣಾಮ ಸಿಲಿಂಡರ್ ಸಪ್ಲೈಯರ್ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹಿರೇಹಡಗಲಿ ಗ್ರಾಮದ ಬೀರಬ್ಬಿ ಕಾಶಿಂ ಸಾಬ್ (40) ಮೃತ ದುರ್ದೈವಿ.

ಹಿರೇಹಡಗಲಿ ಹಾಗೂ ಹಗರನೂರು ದಾರಿ ಮಧ್ಯೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ವಾಹನ ಪಲ್ಟಿಯಾಗಿದೆ. ಹಿರೆಹಡಗಲಿ ಮೂಲಕ ವಿವಿಧ ಗ್ರಾಮಗಳಿಗೆ ಕಾಶಿಂಸಾಬ್ ಸಿಲಿಂಡರ್ ಸರಬರಾಜು ಮಾಡುತ್ತಿದ್ದರು. ಪಲ್ಟಿಯಾದ ವಾಹನ ಹಿರೇಹಡಗಲಿ ಗ್ರಾಮ ಭಾರತ್ ಗ್ಯಾಸ್ ಏಜೆನ್ಸಿಗೆ ಸೇರಿದ್ದು ಎನ್ನಲಾಗಿದೆ.

ಅದೃಷ್ಟವಶಾತ್‌ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಸ್ಫೋಟಗೊಂಡಿಲ್ಲ. ಸಿಲಿಂಡರ್‌ ವಾಹನ ಪಲ್ಟಿಯಾದ ವೇಳೆ ಅಕ್ಕ-ಪಕ್ಕ ಯಾರು ಇರಲಿಲ್ಲ. ಇಲ್ಲದಿದ್ದರೆ ಇನ್ನಷ್ಟು ಸಾವು-ನೋವಿಗೆ ಕಾರಣವಾಗುತ್ತಿತ್ತು. ಸ್ಥಳಕ್ಕೆ ಹಿರೇಹಡಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version