ರಾಮನಗರ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Toll collection) ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ತಲೆಯ ಮೇಲೆ ಹಾಲಿನ ಕ್ಯಾನ್ ಹಿಡಿದು ಸರ್ವೀಸ್ ರಸ್ತೆ ಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಡದಿಯಲ್ಲಿ ಶೇಷಗಿರಿಹಳ್ಳಿ ಟೋಲ್ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಬಿಡದಿ ಶೇಷಗಿರಿಹಳ್ಳಿಯಲ್ಲಿ ಟೋಲ್ ಸಂಗ್ರಹ ಶುರುವಾಗಿದ್ದು, ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಟೋಲ್ ಬಿಸಿ ತಟ್ಟಿದೆ. ಕಣಮಿಣಕಿ ಟೋಲ್ ನಲ್ಲಿ ಆರಂಭದಲ್ಲೆ ತಾಂತ್ರಿಕ ದೋಷ ಪತ್ತೆಯಾಗಿದೆ. ಕೆಲ ಬೂತ್ ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗದೇ ವಾಹನ ಸವಾರರು ಪರದಾಡಿದರು. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಡಬಲ್ ದರ ಕಟ್ಟಬೇಕಾಗುತ್ತದೆ.