ರಾಮನಗರ: ರಾಮನಗರಕ್ಕೆ (Ramanagara News) ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು (Medical college) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಕನಕಪುರಕ್ಕೆ ಸ್ಥಳಾಂತರ ಮಾಡಿಸಿಕೊಂಡಿದ್ದರಿಂದ ರೊಚ್ಚಿಗೆದ್ದು ಬಿಜೆಪಿ, ಜೆಡಿಎಸ್ ಪಕ್ಷಗಳು ಇತರ ಸಂಘಟನೆಗಳ ಜತೆ ಸೇರಿ ಕರೆ (Protest against Shift of Medical college from Ramanagara to Kanakapura) ಕೊಟ್ಟಿರುವ ರಾಮನಗರ ಬಂದ್ (Ramanagara Bundh) ಬಹುತೇಕ ಯಶಸ್ವಿಯಾಗಿವೆ.
ಶುಕ್ರವಾರ ಮುಂಜಾನೆ ಐದು ಗಂಟೆಯಿಂದಲೇ ರಾಮನಗರದ ಪ್ರಮುಖ ವೃತ್ತವಾದ ಐಜೂರು ಸರ್ಕಲ್‌ನಲ್ಲಿ ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ತೆರೆದ ಅಂಗಡಿಗಳನ್ನೂ ಪ್ರತಿಭನಾಕಾರರು ಮುಚ್ಚಿಸುತ್ತಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವವರು ಸ್ವಲ್ಪ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ರಾಮನಗರಕ್ಕೆ ಅನ್ಯಾಯವಾಗಿದೆ ಎಂದು ಆಪಾದಿಸಿರುವ ಪಕ್ಷಗಳು ಮತ್ತು ಸಂಘಟನೆಗಳು ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್‌ಗೆ ಕರೆ ನೀಡಿವೆ. ಅಗತ್ಯ ಸೇವೆ ಹೊರತುಪಡಿಸಿ, ಇನ್ನುಳಿದ ಎಲ್ಲವು ಬಂದ್ ಎಂದು ಘೋಷಿಸಲಾಗಿದೆ. ಬಂದ್‌ಗೆ ಬೆಂಬಲ ನೀಡಿದ್ದು, ಮಾಗಡಿ ಹಾಗೂ ಚನ್ನಪಟ್ಟಣದ ಸಂಘಟನೆಗಳು ಸಹ ಬಂದ್‌ಗೆ ಕೈಜೋಡಿಸಿವೆ.
ಸ್ವಯಂಪ್ರೇರಿತ ಬಂದ್ ಆಚರಣೆ
ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಂಜಾನೆಯಿಂದಲೇ ಬಂದ್ ಆಗಿದ್ದು ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಬೆಂಬಲವನ್ನು ನೀಡಿದ್ದಾರೆ. ರಾಮನಗರ ಟೌನ್ ಭಾಗದಲ್ಲಿ ಎಲ್ಲಾ ಅಂಗಡಿಮುಗ್ಗಟ್ಟುಗಳು ಬಂದ್ ಆಗಿವೆ. ಸದಾ ಜನಜಂಗುಳಿಯಿಂದ ತುಂಬಿದ್ದ ಎಪಿಎಂಸಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ.
ಮೆಡಿಕಲ್ ಕಾಲೇಜು ಹೋರಾಟ ಸಮಿತಿ ನೀಡಿರುವ ಈ ಬಂದ್ ಕರೆಗೆ ಎಪಿಎಂಸಿ ವರ್ತಕರು, ವ್ಯಾಪಾರಿ, ರೈತರು ಸ್ಪಂದಿಸಿದ್ದಾರೆ. ಮಾರುಕಟ್ಟೆ ಗೇಟ್ ಬಳಿ ಪ್ಲೆಗ್ಸ್ ಹಾಕಿ ಬೆಂಬಲ ಸೂಚಿಸಲಾಗಿದೆ.
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಕಾರ್ಯಕರ್ತರು ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳನ್ನೂ ತಡೆಯುತ್ತಿದ್ದಾರೆ. ಬೆಂಗಳೂರು-ಹಳೇ ಮೈಸೂರು ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೂ ಪ್ರತಿಭಟನೆ ಬಿಸಿ ತಟ್ಟಿದಂತಾಗಿದೆ. ಈ ನಡುವೆ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಡಿ.ಕೆ. ಬ್ರದರ್ಸ್ ವಿರುದ್ಧ ಆಕ್ರೋಶ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಹಾಗೂ ರಾಮನಗರದ ಶಾಸಕ ಮಹಮ್ಮದ್ ಇಕ್ಬಾಲ್ ಅವರ ಕುಮ್ಮಕ್ಕಿನಿಂದ ಮೆಡಿಕಲ್ ಕಾಲೇಜು ಶಿಫ್ಟ್ ಆಗಿದೆ ಎಂದು ಆಪಾದಿಸಲಾಗುತ್ತಿದೆ. ಈ ವಿಚಾರವಾಗಿ ಗುರುವಾರ ರಾಮನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದರು. ಇದು ಕೆಲವರ ಕುಮ್ಮಕ್ಕಿನಿಂದ ನಡೆಯುತ್ತಿರುವ ಪ್ರತಿಭಟನೆ, ರಾಮನಗರದಲ್ಲೂ ಮೆಡಿಕಲ್ ಕಾಲೇಜು ಆರಂಭವಾಗಲಿದೆ ಎಂದು ಭರವಸೆ ನೀಡಲಾಗಿತ್ತು.
ಇದನ್ನೂ ಓದಿ : Bharat Jodo Anniversary: ರಾಮನಗರ ಜಿಲ್ಲೆಯಲ್ಲಿ ಇನ್ನು ಅಭಿವೃದ್ಧಿ ಪರ್ವ ಶುರು ಎಂದ ಸಿಎಂ ಸಿದ್ದರಾಮಯ್ಯ
ಬಂದ್‌ನಿಂದ ಯಾವುದಕ್ಕೆ ವಿನಾಯಿತಿ?
ಜಿಲ್ಲಾಸ್ಪತ್ರೆ, ಮೆಡಿಕಲ್‌ಗಳು, ಪರೀಕ್ಷೆ ನಡೆಯುತ್ತಿರುವ ಡಿಗ್ರಿ ಕಾಲೇಜು, ತುರ್ತು ಸೇವೆಗಳು, ಹಾಲು, ಪತ್ರಿಕೆ ಮಾರಾಟಕ್ಕೆ ಅವಕಾಶವಿದೆ.
ಯಾವುದೆಲ್ಲ ಬಂದ್: ರೇಷ್ಮೆ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ, ಅಂಗಡಿ, ಮಳಿಗೆಗಳು, ಖಾಸಗಿ ಶಾಲೆಗಳು, ಬಸ್ ಸಂಚಾರ, ವಾಹನ ಸಂಚಾರ ಇರುವುದಿಲ್ಲ.