ಬೆಂಗಳೂರು: ಮೈಸೂರು ರಸ್ತೆ ನಿರ್ಮಾಣದ ವಿಚಾರದಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕಿಸಿದ ಬೆನ್ನಲ್ಲೇ, ರಾಮನಗರ-ಚನ್ನಪಟ್ಟಣ 23 ಕಿ.ಮೀ ಬೈಪಾಸ್‌ನ ಎರಡನೇ ಕ್ಯಾರೆಜ್ ವೇ ಗುರುವಾರ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಪ್ರತಾಪ್ ಸಿಂಹ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಕೆಲವೊಮ್ಮೆ ಟೀಕೆಗಳು ನಮ್ಮ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ನಾಳೆ ಗುರುವಾರ ರಾಮನಗರ-ಚನ್ನಪಟ್ಟಣ 23 ಕಿ.ಮೀ ಬೈಪಾಸ್ ನ ಎರಡನೇ ಕ್ಯಾರೆಜ್ ವೇಯನ್ನು ನಿಮ್ಮ ವಾಹನ ಸಂಚಾರಕ್ಕೆ ತೆರವು ಮಾಡುತ್ತಿದ್ದೇವೆ. ಸ್ವತಃ ನೀವು ಬಂದು ರಸ್ತೆಯನ್ನು ನೋಡಬಹುದು” ಎಂದು ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ, ಬೈಪಾಸ್‌ನ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಮೈಸೂರು ಹೆದ್ದಾರಿಯ ಹಲವು ಕಡೆಗಳಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿ ವ್ಯಾಪಕ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಹಾಗಾಗಿ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರು ತೀವ್ರ ಟೀಕೆ ಮಾಡಿದ್ದರು.
ಕೇಂದ್ರ ಸರ್ಕಾರ ನಿರ್ಮಿತ ಹೆದ್ದಾರಿಯ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಇದು ಅದ್ಭುತ ರಸ್ತೆ ಎಂದು ಈ ಹಿಂದೆ ಪ್ರತಾಪ್ ಸಿಂಹ ಅವರು ಬಣ್ಣಿಸಿದ್ದನ್ನು ಪ್ರಸ್ತಾಪಿಸಿ ಗೇಲಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಮನಗರ-ಚನ್ನಪಟ್ಟಣ 23 ಕಿ.ಮೀ ಬೈಪಾಸ್‌ನ ಎರಡನೇ ಕ್ಯಾರೆಜ್ ವೇ ಗುರುವಾರ ವಾಹನ ಸಂಚಾರಕ್ಕೆ ಮುಕ್ತವಾಗುತ್ತಿರುವುದು ಗಮನ ಸೆಳೆದಿದೆ.
ಇದನ್ನೂ ಓದಿ | ಪ್ರತಾಪ್ ಸಿಂಹ ಬಂದರೆ ಹೆದ್ದಾರಿಯಲ್ಲೇ ಸ್ವಿಮ್ಮಿಂಗ್ ಮಾಡಬಹುದು: ಎಚ್.ಡಿ. ಕುಮಾರಸ್ವಾಮಿ ಕಿಡಿ