ಮಂಗಳೂರು: ಈ ಬಾರಿ ನಡೆದ ವಿಧಾನಸಭಾ ಚುನಾವಣೆ (Karnataka Election 2023) ಪ್ರಚಾರದ ವೇಳೆ ಇದೇ ನನ್ನ ಕೊನೇ ಚುನಾವಣೆಯಾಗಿದ್ದು, ದಯಮಾಡಿ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದ ರಮಾನಾಥ್ ರೈ (Ramanath Rai) ಕೊನೆಗೂ ಸೋಲು ಕಂಡಿದ್ದರು. ಇದೀಗ ದಿಢೀರ್ ಸುದ್ದಿಗೋಷ್ಠಿ ನಡೆಸುವ ಮೂಲಕ ಅವರು, ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಸಕ್ರಿಯ ರಾಜಕಾರಣದಲ್ಲಿರುವ ಭರವಸೆಯನ್ನು ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಇದೇ ನನ್ನ ಕಡೆಯ ಚುನಾವಣಾ ಸ್ಪರ್ಧೆ ಎಂದು ಹೇಳಿಕೆ ನೀಡಿದ್ದೆ. ಈಗ ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ, ಚುನಾವಣಾ ರಾಜಕೀಯದಿಂದ ದೂರವಿದ್ದರೂ ಪಕ್ಷದ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: PM Narendra Modi: ರೋಜ್‌ಗಾರ್ ಮೇಳದಲ್ಲಿ ಮೋದಿ ಭಾಷಣ; ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ!
ಕಾರ್ಯಕರ್ತರು ಎದೆಗುಂದಬಾರದು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಗೆದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಜನ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಎದೆಗುಂದಬಾರದು ಎಂದು ಕರೆ ಕೊಟ್ಟರು.
ಇನ್ನು ಬಿಜೆಪಿ ಅಧಿಕಾರಕ್ಕೆ ಬರಲ್ಲ
ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತವನ್ನು ಯಾವತ್ತೂ ಪಡೆದಿಲ್ಲ. ಜನಸಂಘ ಇರುವಾಗಲೂ ಬಾಹ್ಯ ಬೆಂಬಲದಿಂದಲೇ ರಾಜಕೀಯ ಮಾಡಿದ್ದರು. ಜಿಲ್ಲೆಯಲ್ಲಿ ಸೋತರೂ, ಗೆದ್ದರೂ ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದೇವೆ. ರಾಜ್ಯದ ಜನ ಯಾವತ್ತೂ ಬಿಜೆಪಿಗೆ ಬೆಂಬಲ ನೀಡಿಲ್ಲ. ಇದು ಬಸವಣ್ಣ ಹುಟ್ಟಿದ ನಾಡು, ಇಲ್ಲಿ ಜಾತ್ಯತೀತ ನಿಲುವಿನ ಜನರಿಗೆ ನಾಗರಿಕರು ಮಣೆ ಹಾಕುತ್ತಾರೆ. ಭವಿಷ್ಯದಲ್ಲಿ ಬಿಜೆಪಿ ಖಂಡಿತಾ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: PM Rozgar Mela: ಗ್ರೂಪ್ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ
ಮುಂದಿನ ವರ್ಷ ನಡೆಯುಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅತ್ಯಧಿಕ ಸ್ಥಾನವನ್ನು ಗಳಿಸಲಿದೆ. ಇದರಲ್ಲಿ ಸಂಶಯ ಬೇಡ ಎಂದು ಹೇಳಿದ ಮಾಜಿ ಸಚಿವ ರಮಾನಾಥ ರೈ, ಮುಖ್ಯಮಂತ್ರಿಯಾದಿಯಾಗಿ ಸಚಿವ ಸಂಪುಟ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್‌ನ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದು ಅಭಿಪ್ರಾಯಪಟ್ಟರು.