Site icon Vistara News

Ramesh Jarkiholi : ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಚಿಕಿತ್ಸೆ ಕೊಡಿಸಲಿ: ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿ.ಕೆ. ಶಿವಕುಮಾರ್‌ ಮೊದಲ ಪ್ರತಿಕ್ರಿಯೆ

Ramesh Jarakiholi has lost his mental stability let his party give him proper treatment says dk shivakumar

#image_title

ಬೆಂಗಳೂರು: ‘ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಈಗ ಅದು ಮತ್ತೆ ಸಿಗುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಮಾತನಾಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರ ಪಕ್ಷದವರು ಅವರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ರಮೇಶ್‌ ಜಾರಕಿಹೊಳಿ ಆರೋಪ ಮಾಡಿದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಶಿವಕುಮಾರ್‌, ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ನಂತರ ವಿಮಾನ ನಿಲ್ದಾಣ ಹಾಗೂ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ರಮೇಶ್ ಜಾರಕಿಹೊಳಿ ಅವರ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಶಿವಕುಮಾರ್ ಅವರು, ‘ಅವರ ಮಾತು ಕತೆ ಕೇಳಿ ನನಗೆ ಅಯ್ಯೋ ಎನಿಸುತ್ತಿದೆ. ಅವರು ಯಾವ ತನಿಖೆಯಾದರೂ ಮಾಡಿಸಿಕೊಳ್ಳಲಿ. ನಾವು ಯಾರನ್ನೂ ತಡೆದಿಲ್ಲ. ನಾನು ಅವರ ಬಗ್ಗೆ ಹೇಳಿಕೆ ನೀಡುವುದಿಲ್ಲ’ ಎಂದು ತಿಳಿಸಿದರು.

ಶಿವಕುಮಾರ್ ಅವರ ರಾಜಕೀಯ ಜೀವನ ಮುಗಿಸುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಸವಾಲಿನ ಬಗ್ಗೆ ಕೇಳಿದಾಗ, ‘ನಾನು ಅವರಿಗೆ ಶುಭಕೋರುತ್ತೇನೆ. ಅವರಿಗೆ ದೇವರು ಒಳ್ಳೆಯದಾಗಲಿ’ ಎಂದು ತಿಳಿಸಿದರು.

ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಏನಾದರೂ ಮಾಡಿಕೊಳ್ಳಲಿ, ನಾನು ಅದರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ಅದರ ಅವಶ್ಯತಕತೆ ನನಗಿಲ್ಲ. ರಾಜಕಾರಣದ ರಣರಂಗದಲ್ಲಿ ನಾವು ಹೋರಾಟ ಮಾಡುತ್ತೇವೆ. ಚುನಾವಣೆಯಲ್ಲಿ ಬಂದು ನಿಲ್ಲುತ್ತೇವೆ ಎಂದವರು ಬಂದು ನಿಂತು ಶಕ್ತಿ ಪ್ರದರ್ಶನ ಮಾಡಲಿ. ತಮ್ಮ ಪಟ್ಟುಗಳನ್ನು ಹಾಕಲಿ’ ಎಂದು ತಿಳಿಸಿದರು.

ನಿಮ್ಮ ವಿದೇಶದ ಆಸ್ತಿ ಆಡಿಯೋ ವಿಚಾರ ಏನು ಎಂದು ಕೇಳಿದಾಗ, ‘ಅದರಲ್ಲಿ ಶೇ.10ರಷ್ಟಾದರೂ ನನಗೆ ಸಿಗಲಿ. ಎಲ್ಲೆಲ್ಲಿ ಆ ಮನೆಗಳಿವೆ ಎಂದು ವಿಳಾಸ ಕೊಟ್ಟರೆ ಹೋಗಿ ಒಂದೊಂದು ದಿನ ಇದ್ದು ಬರಬಹುದು. ಬೇಕಾದರೆ ಅವರಿಗೆ ಉಡುಗೊರೆಯಾಗಿ ನೀಡೋಣ’ ಎಂದು ಹೇಳಿದರು.

ಬಜೆಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಚುನಾವಣಾ ಬಜೆಟ್ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಈ ಬಜೆಟ್ ನಲ್ಲಿ ರೈತರಿಗೆ ಸಹಾಯವಾಗಿಲ್ಲ. ಬೆಂಬಲ ಬೆಲೆ ಪ್ರಸ್ತಾಪವಾಗಿಲ್ಲ. ಸಿರಿಧಾನ್ಯಗಳಲ್ಲಿ ರಾಗಿಯೂ ಒಂದು ಎಂದು ಹೇಳಿದ್ದಾರೆ. ಆದರೆ ನಮ್ಮಲ್ಲಿ ರಾಗಿ ಕೊಳ್ಳುವವರೆ ಇಲ್ಲ. ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ’ ಎಂದರು.

ಇದನ್ನೂ ಓದಿ : Ramesh Jarakiholi : ಸಿಡಿ ಷಡ್ಯಂತ್ರ ಕಥೆ ಸೇರಿಸಿ ರಕ್ತ ಕಣ್ಣೀರು ಪಾರ್ಟ್-3 ಮಾಡ್ತೇವೆ ಎಂದ ಲಖನ್ ಜಾರಕಿಹೊಳಿ

ಕಾಶ್ಮೀರ ಪ್ರವಾಸದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಭಾರತ ಜೋಡೋ ಯಾತ್ರೆ ದೇಶದಲ್ಲಿನ ಸೌಹಾರ್ದತೆ, ಯುವಕರು, ರೈತರ ಸಮಸ್ಯೆಗೆ ಧ್ವನಿಯಾಗಿದೆ. ಆಮೂಲಕ ದೇಶದ ಐಕ್ಯತೆಗಾಗಿ, ದೇಶ ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ. ಮಹಾತ್ಮಾ ಗಾಂಧಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಯಾವ ರೀತಿ ತ್ಯಾಗ, ಹೋರಾಟ ಮಾಡಿದರೋ ಅದೇ ರೀತಿ ರಾಹುಲ್ ಗಾಂಧಿ ಅವರು ಮಾಡಿದ್ದಾರೆ. ಪೂರ್ವದಿಂದ ಪಶ್ಚಿಮಕ್ಕೆ ಈ ಯಾತ್ರೆ ಮಾಡಬೇಕು ಎಂಬ ಒತ್ತಡ ಕೂಡ ಅವರ ಮೇಲಿದೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಲಿದ್ದು, ಅವರ ತೀರ್ಮಾನವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಸಮಾರೋಪ ಸಮಾರಂಭ ಬಹಳ ಅತ್ಯುತ್ತಮವಾಗಿ ನಡೆದಿದೆ. ನಾನು ಕನ್ಯಾಕುಮಾರಿ ಕಾರ್ಯಕ್ರಮ ಹಾಗೂ ಕಾಶ್ಮೀರದ ಕಾರ್ಯಕ್ರಮ ಎರಡಕ್ಕೂ ಹೋಗಿದ್ದೆ. ನಮ್ಮ ರಾಜ್ಯದಲ್ಲೂ ಬಹಳ ಚೆನ್ನಾಗಿ ಯಾತ್ರೆ ಸಾಗಿದೆ, ನಮ್ಮ ಆತಿಥ್ಯ, ಉಪಚಾರವನ್ನು ದೇಶದ ಎಲ್ಲ ನಾಯಕರು ಸ್ಮರಿಸಿದರು. ನಮ್ಮ ಪಕ್ಷದ ಕಾರ್ಯಕರ್ತರು ಈ ಯಾತ್ರೆಯಲ್ಲಿ ಸಾಗಿದ್ದರು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಯಾತ್ರೆ ಜೀವ ತುಂಬಿದೆ. ಜಮ್ಮು ಕಾಶ್ಮೀರದಲ್ಲೂ ಯಾತ್ರೆ ಸಮಯದಲ್ಲಿ ರೈತರು, ಯುವಕರು ರಾಹುಲ್ ಗಾಂಧಿ ಅವರಿಗೆ ಸ್ವಾಗತ ನೀಡಿದರು. ಕೊನೆ ದಿನ ವಿಪರೀತ ಹಿಮ, ಚಳಿ ಇತ್ತು. ಈ ರೀತಿಯ ಹಿಮಪಾತ ನೋಡಿದ್ದು ನನಗೆ ಹೊಸ ಅನುಭವ. ನಾವು ಇಂತಹ ಪ್ರಕೃತಿ ಸೌಂದರ್ಯ ಸವಿಯಲು ಯಾವುದೇ ವಿದೇಶಕ್ಕೆ ಹೋಗುವುದು ಬೇಡ. ಕಾಶ್ಮೀರಕ್ಕೆ ಪ್ರವಾಸ ಮಾಡಿದರೆ ಸಾಕು ಎಂದು ನಮ್ಮ ರಾಜ್ಯದವರಿಗೆ ಹೇಳುತ್ತೇನೆ’ ಎಂದು ಹೇಳಿದರು.

Exit mobile version