ಬೆಳಗಾವಿ: ಬೆಳಗಾವಿಯಲ್ಲಿ ಇಂದು ಬೆಳಗ್ಗೆ 10.30ಕ್ಕೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ಕರೆದಿದ್ದು, ಡಿಕೆ ಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ಸ್ಫೋಟಿಸಲಿದ್ದಾರೆ ಎಂಬ ಊಹೆಗಳು ಹರಿದಾಡುತ್ತಿವೆ.
ತಮ್ಮ ವಿರುದ್ಧದ ಸಿಡಿ ಷಡ್ಯಂತ್ರದಲ್ಲಿ ಡಿಕೆಶಿ ಕೈವಾಡದ ಬಗ್ಗೆ ಜಾರಕಿಹೊಳಿ ಆರೋಪ ಮಾಡಿದ್ದು, ಇದಕ್ಕೆ ಸಾಕ್ಷ್ಯ ಇದೆ ಎಂದಿದ್ದರು. ಷಡ್ಯಂತ್ರಕ್ಕಾಗಿ ಡಿಕೆಶಿ 40 ಕೋಟಿ ಖರ್ಚು ಮಾಡಿದ್ದರ ಬಗ್ಗೆ ಆಡಿಯೋ ಸಾಕ್ಷ್ಯ ಇದೆ ಎಂದಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿ ಆಡಿಯೋ ಬಿಡುಗಡೆ ಮಾಡಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಗುಡುಗಿದ್ದಾರೆ. ನಾನು ಈಗಾಗಲೇ ಆರು ಬಾರಿ ಶಾಸಕನಾಗಿದ್ದೇನೆ, ಇನ್ನೊಂದು ಅವಧಿಗೆ ಸ್ಪರ್ಧಿಸುತ್ತೇನೆ. ಎಂಟನೇ ಬಾರಿಗೆ ನಾನು ಶಾಸಕನಾಗಬೇಕೋ? ಬೇಡವೋ? ಎಂಬುದನ್ನು ನೀವೇ ನಿರ್ಧರಿಸಿ. ಮುಂದಿನ ಚುನಾವಣೆ ಬಳಿಕ ನಾನು ರಾಜಕೀಯ ನಿವೃತ್ತಿ ಆಗಬೇಕು ಎಂಬ ವಿಚಾರ ಇದೆ. ಬೇರೆಯವರಿಗೆ ಅವಕಾಶ ಕೊಡೋಣ, ಬರುವ ಚುನಾವಣೆ ನನ್ನ ಕೊನೆಯ ಚುನಾವಣೆ. ನಮ್ಮ ಕಾರ್ಯಕರ್ತರು, ನಾಯಕರು ಮುಂದಿನ ನಿರ್ಧಾರ ತೆಗೆದುಕೊಳ್ಳಲಿ ಎಂದಿದ್ದಾರೆ.
ಬರುವ ಚುನಾವಣೆಯಲ್ಲೇ ಸ್ಪರ್ಧಿಸುವುದು ಬೇಡ ಎಂದುಕೊಂಡಿದ್ದೆ. ಆದರೆ ಆ ಮಹಾನಾಯಕನಿಗೆ ಚಾಲೆಂಜ್ ಮಾಡಲು ನಾನು ಚುನಾವಣೆಗೆ ಸ್ಪರ್ಧಿಸುತ್ತಿರುವೆ. ಅವನನ್ನು ಮೂಲೆಗೆ ಹಚ್ಚಲೆಂದೇ ಕಣಕ್ಕಿಳಿಯುತ್ತಿರುವೆ, ಇಲ್ಲವಾಗಿದ್ರೆ ನಾನು ಸ್ಪರ್ಧಿಸುತ್ತಿರಲಿಲ್ಲ. ನನ್ನ ಮೇಲೆ ಷಡ್ಯಂತ್ರ ಮಾಡಿ, ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ. ಆತನನ್ನು ಪೂರ್ಣಪ್ರಮಾಣದಲ್ಲಿ ಮನೆಗೆ ಹಚ್ಚುವವರೆಗೂ ನಾನು ರಾಜಕೀಯ ನಿವೃತ್ತಿ ಆಗಲ್ಲ. ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೀವನವನ್ನೇ ಪಣವಾಗಿಡುತ್ತೇನೆ. ಅದಕ್ಕಾಗಿ ನಾನು ಏನೇ ತ್ಯಾಗ ಮಾಡಲು ಸಿದ್ಧನಿದ್ದೇನೆ. 2023ರಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Ramesh Jarakiholi: ಡಿಕೆಶಿ ಆಪ್ತನ ಬಳಿ 110 ಸಿಡಿ ಸಿಕ್ಕಿವೆ; ಸಿಬಿಐ ತನಿಖೆಯಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂದ ಜಾರಕಿಹೊಳಿ