ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಭೀತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರದ ಗಡಿ ಗ್ರಾಮದಲ್ಲಿ ಭಾನುವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ (Karnataka Election 2023) ಬೆಂಬಲಿಗರ ಸಭೆ ಕರೆದಿದ್ದರು. ಈ ವೇಳೆ ಬೆಂಬಲಿಗರಿಗೆ ಭರ್ಜರಿ ಬಾಡೂಟ ಕೂಡ ಹಾಕಿಸಲಾಗಿದೆ.
ಬೆಳಗಾವಿ ಕೇಂದ್ರ ಸ್ಥಾನದಿಂದ 18 ಕಿ.ಮೀ. ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಘಡ ತಾಲೂಕಿನ ಶಿನೊಳ್ಳಿ ಗ್ರಾಮದ ಡಾಲ್ಫಿನ್ ಇಂಡಸ್ಟ್ರಿ ಆವರಣದಲ್ಲಿ ಬೆಂಬಲಿಗರ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್ ಅವರಿಂದ ಬೆಂಬಲಿಗರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಮಾಧ್ಯಮದವರನ್ನು ಹೊರಗಿಟ್ಟು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ಆಯೋಜನೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಜಾರಕಿಹೊಳಿ, ನಾಗೇಶ್ ಮನ್ನೋಳಕರ್ ಸಂಬಂಧಿ ಕಾರ್ಖಾನೆಯ ಪೂಜೆಗೆ ಆಗಮಿಸಿದ್ದಾಗಿ ಸಬೂಬು ಹೇಳಿದ್ದಾರೆ. ಇಲ್ಲಿ ನೀವು ಆಗಮಿಸಿರುವುದು ತಪ್ಪು, ಗ್ರಾಮೀಣ ಶಾಸಕರ ಬಳಿ ಹಣ ಪಡೆದು ಇಲ್ಲಿಗೆ ಬಂದಿದ್ದೀರಿ ಎಂದು ಮಾಧ್ಯಮದವರ ವಿರುದ್ಧ ಆರೋಪಿಸಿದರು. ಈ ವೇಳೆ ಕೆಲ ಯುವಕರು ಮಾಧ್ಯಮ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಕಂಡುಬಂದಿದೆ.
ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ ಎಂದು ಸಭೆ ಇಲ್ಲಿಗೆ ಶಿಫ್ಟ್ ಆಯ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಜಾರಕಿಹೊಳಿ, ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಈ ಜಾಗ ನಮ್ಮಪ್ಪಂದಲ್ಲ, ಇಲ್ಲಿಗೆ ನೀವು ಬಂದಿದ್ದೆ ತಪ್ಪು, ನೀವು ಇಲ್ಲಿಗೆ ಬಂದು ನಮಗೆ ಡಿಸ್ಟರ್ಬ್ ಮಾಡುತ್ತಿದ್ದೀರಿ. ನಾಗೇಶ್ ಮನ್ನೋಳಕರ್ ಅವರ ಸಂಬಂಧಿಕರ ಕಾರ್ಖಾನೆ ಪೂಜೆಗೆ ಬಂದಿದ್ದೇನೆ. ಇಲ್ಲಿ ನಾನು ಕೇವಲ ಗೆಸ್ಟ್ ಆಗಿ ಬಂದಿದ್ದೇನೆ. ಮಾಧ್ಯಮದವರಿಗೆ ಪ್ರಜಾಪ್ರಭುತ್ವದಲ್ಲಿ ಭಯಂಕರ ಕಿಮ್ಮತ್ತಿದೆ, ಅದನ್ನು ಕೆಡಿಸಬೇಡಿ ಎಂದು ಕಿಡಿಕಾರಿದರು.
ರಮೇಶ್ ಜಾರಕಿಹೊಳಿ ಆಪ್ತ ನಾಗೇಶ ಮನ್ನೋಳಕರ್ ಅವರಿಂದ ಆಯೋಜಿಸಿದ್ದ ಬಾಡೂಟದಲ್ಲಿ ಸಾಲು ಸಾಲಾಗಿ ಕುಳಿತು ಬೆಂಬಲಿಗರು ಮಾಂಸಾಹಾರ ಸೇವಿಸಿದರು. ಬಾಡೂಟದ ಜತೆಗೆ ಶಾಖಾಹಾರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬಾಡೂಟಕ್ಕೂ ಮುನ್ನ ಶಿನೋಳಿಯ ಕಾರ್ಖಾನೆಯ ಕಟ್ಟಡವೊಂದರಲ್ಲಿ ಸಭೆ ನಡೆಯಿತು. ಈ ವೇಳೆ ರಮೇಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪ್ತ ನಾಗೇಶ ಮನ್ನೋಳಕರ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲೇಬೆಕು ಎಂಬ ಜಿದ್ದಿನಿಂದ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕ್ಷೇತ್ರದಲ್ಲಿ ಬೆಂಬಲಿಗರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ನಾಗೇಶ್ ಮುನ್ನೋಳಕರ್‌ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬೆಂಬಲಿಗರ ಸಭೆ ನಡೆಸಿ ನಾಗೇಶ್ ಮುನ್ನೋಳಕರ್‌ಗೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.