ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರವೊಂದೇ ಕಾಣಿಸುತ್ತದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿಕೆ ಬಗ್ಗೆ ವ್ಯಗ್ರರಾದ ಡಿಕೆಶಿ, ಅವನ್ಯಾರು ಮೆಂಟಲ್ ಕೇಸ್? ಆತನ ಬಗ್ಗೆ ನನ್ನನ್ನು ಕೇಳಬೇಡಿ. ಯಾರು ಯಾರೋ ಹೇಳಿದರೆ? ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದ ಎಲ್ಲ ಕಡೆ ನಾನು ಭಾಗಿಯಾಗಿದ್ದೇನೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಬದಲಾವಣೆ ತರಬೇಕು. ಪರಿಶುದ್ಧವಾದ ರಾಜಕಾರಣವನ್ನು ನಾವು ಮಾಡಬೇಕು ಎಂಬ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ನಾವು ಯಾವುದೇ ಮೆಂಟಲ್ ಕೇಸ್‌ಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಫ್ರಸ್ಟ್ರೇಶನ್‌ನಲ್ಲಿ ಇರುವವರಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೋಕಾಕದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಯಾವುದೇ ಉತ್ತರವನ್ನು ನೀಡದೆ ತೆರಳಿದರು.
ಇದನ್ನೂ ಓದಿ: Vijay Sankalpa Yatre: ಸೋಮಣ್ಣ ಇಡೀ ಕರ್ನಾಟಕದ ಫಿಗರ್: ಎರಡು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ ಎಂದ ಆರ್. ಅಶೋಕ್
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಾವೆಲ್ಲ ಈಗಾಗಲೇ 150 ಸೀಟ್‌ಗಳ ಬಗ್ಗೆ ಕುಳಿತು ಚರ್ಚೆ ಮಾಡುತ್ತಿದ್ದೇವೆ. ಮಾರ್ಚ್ 7ರಂದು ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ. ಅದೆಲ್ಲ ಆದ ಮೇಲೆ ಯಾರು ಯಾರಿಗೆ ಕಿವಿಯಲ್ಲಿ ಏನೇನು ಹೇಳಬೇಕೋ ಅವರಿಗೆ ಹೇಳುತ್ತೇವೆ ಎಂದು ಹೇಳಿದರು.