ಬೆಳಗಾವಿ: ಜಿಲ್ಲೆಯಲ್ಲಿ ಮರಾಠ ಮತಗಳ ಓಲೈಕೆಗಾಗಿ ರಾಜಕಾರಣಿಗಳು ಮುಂದಾಗಿದ್ದು, ಇದರ ಜತೆಗೆ ಪ್ರತಿಮೆ ಪಾಲಿಟಿಕ್ಸ್ ಕೂಡ ತಾರಕಕ್ಕೇರಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸ ಗಡ ಕೋಟೆಯಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ (Shivaji Statue) ಲೋಕಾರ್ಪಣೆ ವಿಷಯದಲ್ಲಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಒಂದೆಡೆ ಮಾರ್ಚ್ 5ರಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರೆ, ಮತ್ತೊಂದೆಡೆ ಮಾರ್ಚ್ 2ರಂದೇ ನಾವು ಸರ್ಕಾರದ ಕಡೆಯಿಂದ ಪ್ರತಿಮೆ ಉದ್ಘಾಟಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಘೋಷಿಸಿದ್ದಾರೆ.
ಮಾರ್ಚ್ 5ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಪ್ರತಿಮೆ ಲೋಕಾರ್ಪಣೆ ವಿಚಾರಕ್ಕೆ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಮಾರ್ಚ್ ೨ರಂದು ಸರ್ಕಾರದ ವತಿಯಿಂದ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರೂ ನಾನು ಪ್ರತ್ಯೇಕ ಉದ್ಘಾಟನೆ ಮಾಡುತ್ತೇನೆ ಎಂದು ಹೇಳುವುದು ಒಳ್ಳೆಯದಲ್ಲ. ನಾನು ಮಾರನೇ ದಿನ 10 ಸಾವಿರ ಜನರ ಕರೆದೊಯ್ಯುತ್ತೇನೆ ಎಂದು ಅವರು ಹೇಳಿದರೆ ಅದು ನಡೆಯಲ್ಲ. ಅದು ಅವರ ಶಾಸಕ ಸ್ಥಾನಕ್ಕೂ ಗೌರವ ತರಲ್ಲ. ಅವರ ಪಕ್ಷಕ್ಕೂ ಒಳ್ಳೆಯದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಹಾನುಭಾವನ ವಿಚಾರದಲ್ಲಿ ಕೆಳಮಟ್ಟಕ್ಕೆ ಇಳಿಯಲ್ಲ
ಸಿಎಂ ಹಾಗೂ ಸರ್ಕಾರ ಉದ್ಘಾಟನೆ ಮಾಡಿದ ಮೇಲೆ ಮತ್ತೊಮ್ಮೆ ಉದ್ಘಾಟನೆ ಮಾಡುವುದರಲ್ಲಿ ಏನು ಅರ್ಥವಿದೆ? ಶಿವಾಜಿಯಂಥ ಮಹಾನುಭಾವನ ವಿಚಾರದಲ್ಲಿ ರಾಜಕೀಯವಾಗಿ ಕೆಳಮಟ್ಟಕ್ಕೆ ಇಳಿಯಲ್ಲ, ಅವರು ಇಳಿಯಲಿ. ಸಿಎಂ ಲೋಕಾರ್ಪಣೆ ಮಾಡಿದ ಬಳಿಕ ಆ ಅಧ್ಯಾಯ ಮುಗಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ | Hasana JDS politics : ಹಾಸನದ ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋರ‍್ಯಾರು? ನಾಳೆ ಎಚ್‌ಡಿಕೆ ಸಮ್ಮುಖದಲ್ಲಿ ಜೆಡಿಎಸ್ ಟಿಕೆಟ್ ಫೈನಲ್
ನಾವು ಛತ್ರಪತಿ ಶಿವಾಜಿ ಪ್ರತಿಮೆ ವಿಚಾರವಾಗಿ ವಿವಾದ ಮಾಡಲು ಹೋಗಲಿಲ್ಲ. ಯಾವಾಗ ಅವರು ಕಾರ್ಯಕ್ರಮವನ್ನು ಕಾಂಗ್ರೆಸ್‌ಮಯ ಮಾಡಲು ಹೋದರಲ್ಲ ಆಗ ಬಾಯಿ ಬಿಟ್ಟಿದ್ದೇವೆ. ಅವರು ಖರ್ಗೆ, ಸಿದ್ದರಾಮಯ್ಯರನ್ನು ಕರೆ ತರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕರೆ ತರಲಿ ಆದರೆ ಅದರಲ್ಲಿ ಒಬ್ಬನೇ ಒಬ್ಬ ಸರ್ಕಾರದ ಪ್ರತಿನಿಧಿ ಹೆಸರಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮಾತನಾಡಿದ್ದೇನೆ. ಅಲ್ಲಿಯವರೆಗೆ ನಾನು ಮಾತನಾಡಿದ್ದರೆ ತೋರಿಸಿ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಸಚಿವರಿದ್ದಾಗ ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಅನುದಾನ ತರಲು ರಮೇಶ್ ಜಾರಕಿಹೊಳಿ ಅಡ್ಡಿ ಎಂಬ ಚನ್ನರಾಜ ಹಟ್ಟಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅಷ್ಟು ಕೀಳುಮಟ್ಟದ ರಾಜಕಾರಣವನ್ನು ಜೀವನದಲ್ಲಿ ನಾನು ಮಾಡಿಲ್ಲ, ಮಾಡುವುದೂ ಇಲ್ಲ. ಆ ರೀತಿ ಮಾಡುವುದು ಅವರಿಗೆ ಶೋಭೆ ತರುತ್ತದೆ, ಆ ಮಟ್ಟಕ್ಕೆ ಇಳಿಯುವುದಕ್ಕೆ ಅವರೇ ಕಾರಣ. ಹಾಗೆ ನಾನೇನಾದಾರೂ ಮಾಡಿದರೆ ಕೊಲ್ಲಾಪುರ ಲಕ್ಷ್ಮಿ ತಾಯಿ ನೋಡಿಕೊಳ್ಳಲಿ ಎಂದು ಹೇಳಿದರು.
ಮಾರ್ಚ್ 2ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರ ಪ್ರತಿಕ್ರಿಯಿಸಿ, ಆ ದಿನ ಅರ್ಧ ಗಂಟೆಯ ಕಾರ್ಯಕ್ರಮ ನಡೆಯುತ್ತದೆ, ಆ ಕಾರ್ಯಕ್ರಮ ಮುಗಿಸಿ ನಂದಗಡಕ್ಕೆ ಹೋಗಬೇಕು. ಕಾರ್ಯಕ್ರಮಕ್ಕೆ ಜನ ಸೇರಿಸುವ ಬಗ್ಗೆ ಸಂಜಯ್ ಪಾಟೀಲ್, ಧನಂಜಯ ಜಾಧವ್ ಕೇಳಿ ನಿರ್ಧಾರ ಮಾಡಲಾಗುವುದು. ನಾನು ಗೋಕಾಕ್ ಶಾಸಕ, ಬಿಜೆಪಿ ಪ್ರಮುಖ ನಾಯಕನಾಗಿದ್ದೇನೆ. ಪಕ್ಷ ಹೇಳಿದ ಹಾಗೇ ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ನಮ್ಮ ಸ್ವಂತ ನಿರ್ಣಯ ಇರಲ್ಲ. ನಾನೇ ಸ್ವಂತ ದುಡ್ಡು ಹಾಕಿದ್ದೇನೆ ಎಂದಾಗ ಸರ್ಕಾರಿ ದುಡ್ಡು ಎಂದು ತೋರಿಸಲು ನಾನು ಎಂಟ್ರಿ ಆಗಬೇಕಾಯಿತು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಚಿವರಾಗಿದ್ದಾಗ 50 ಲಕ್ಷ ರೂ. ಅನುದಾನ ನೀಡಿದ್ದರು ಎಂಬ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಮಾಹಿತಿ ಇಲ್ಲ, ನೀಡಿದ್ದರೆ ಸ್ವಾಗತ. ಶಾಸಕರ ಲೆಟರ್ ನೋಡಿ ಮಾತನಾಡಬೇಡಿ, ಸರ್ಕಾರದ ಆದೇಶ ತೋರಿಸಿದರೆ ಅದಕ್ಕೆ ಮಾನ್ಯತೆ ಇದೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದಿನ ರಾಜಕೀಯ ಹೋರಾಟ ಹೇಗಿರುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನಮ್ಮ ನಾಯಕರು ನಿರ್ಣಯ ಮಾಡುತ್ತಾರೆ, ನಾವು ಸ್ಟಾರ್ಟ್ ಮಾಡಿದ್ದೇವೆ ಅಷ್ಟೇ. ಬೇಕಾದವರೂ ಅಭ್ಯರ್ಥಿ ಆಗಲಿ, ಇವರೇ ಇಬ್ಬರು ಸೋಲಿಸುತ್ತಾರೆ ಎಂದು ಸಂಜಯ್ ಪಾಟೀಲ್, ಧನಂಜಯ ಜಾಧವ್‌ರನ್ನು ತೋರಿಸಿದರು.
ಮಾರ್ಚ್ 2ರ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಕಿ ಹೇಗೆ ಕೆಲಸ ಮಾಡಬೇಕೆಂದು ಪ್ಲಾನ್ ಮಾಡಿದ್ದೇವೆ, ಅದರಂತೆ ಕೆಲಸ ಮಾಡುತ್ತೇವೆ. ಯಾವ ಗ್ರಾಮದಲ್ಲಿ ಯಾರು ಇರಬೇಕು ಯಾರು ಉಸ್ತುವಾರಿ ತಗೆದುಕೊಳ್ಳಬೇಕು ಎಂಬ ನಿರ್ಣಯ ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದರು.
ಹಿರೇಬಾಗೇವಾಡಿಯಲ್ಲಿ 15 ವರ್ಷಗಳಿಂದ ಬಸವಣ್ಣ ಮೂರ್ತಿ ಅಧಿಕೃತ ಲೋಕಾರ್ಪಣೆ ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಶಾಸಕಿಗೆ ಕೇಳಬೇಕು. ನಮಗೆ ಶಿವಾಜಿ, ಬಸವಣ್ಣ, ಅಂಬೇಡ್ಕರ್ ಬಗ್ಗೆ ಅಷ್ಟೇ ಗೌರವ ಇದೆ ಎಂದ ಅವರು, ಶಿವಾಜಿ ಮೇಲಿನ ಕಾಳಜಿ ಬಸವಣ್ಣ ಮೇಲೆ ಶಾಸಕಿಗೆ ಇಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಸವಣ್ಣವರ ಸಮುದಾಯದ ಮತ ಕಡಿಮೆ ಇದೆ, ಅದಕ್ಕಾಗಿ ಲೋಕಾರ್ಪಣೆಗೆ ಮುಂದಾಗಿಲ್ಲ ಎಂದು ಟೀಕಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಗೋಕಾಕ್ ಬಿಟ್ಟು ಬರಲ್ಲ. ಅವರೇನೂ ನಮ್ಮಂತವರು ಎದುರಿಸುವ ವ್ಯಕ್ತಿ ಅಲ್ಲ ಎಂದರು. ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಿದ್ದರಾಮಯ್ಯ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪಕ್ಷದ ಪ್ರಚಾರ ಅವರು ಮಾಡಲಿ, ಮಾರ್ಚ್ 2ರ ಬಳಿಕ ನಾವು ಪ್ರಚಾರ ಮಾಡುತ್ತೇವೆ. ಅದಕ್ಕಾಗಿ ಒಂದು ಕಮಿಟಿ ಮಾಡಿದ್ದು, ಅದರಲ್ಲಿ ನಾನು ಇದ್ದೇನೆ ಎಂದರು.
ಇದನ್ನೂ ಓದಿ | BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ
ಕನಕಪುರ ಜವಾಬ್ದಾರಿ ಕೊಟ್ಟರೆ ಹೋಗುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಜವಾಬ್ದಾರಿ ಕೊಟ್ಟರೆ ಕನಕಪುರಕ್ಕೆ ಹೋಗುತ್ತೇನೆ. ಕನಕಪುರದಲ್ಲಿ ಅಷ್ಟು ದೊಡ್ಡ ಲೀಡರ್ ಅಲ್ಲ ಅವನು, ಅಡ್ಜಸ್ಟ್‌ಮೆಂಟ್ ರಾಜಕಾರಣದ ಲೀಡರ್ ಅವನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅಮಿತ್ ಶಾ ಅವರನ್ನು ಭೇಟಿಯಾಗಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಶುಕ್ರವಾರ ಭೇಟಿಯಾಗಿದ್ದೇನೆ, ಮೊನ್ನೆ ಕೊಲ್ಲಾಪುರದಲ್ಲೂ ಭೇಟಿಯಾಗಿದ್ದೆ ಎಂದ ಅವರು, ಸಿಡಿ ಷಡ್ಯಂತ್ರ ಪ್ರಕರಣ ಸಿಬಿಐ ತನಿಖೆ ವಹಿಸುವ ವಿಚಾರಕ್ಕೆ ಪ್ರತಿಕ್ರಯಿಸಿ, ಅದರ ಬಗ್ಗೆ ಚರ್ಚೆ ನಡೆದಿದೆ. ಅವೆಲ್ಲಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.