Site icon Vistara News

ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಹಣ, ಸ್ಫೋಟಕ ಮಾಹಿತಿ ಬಯಲು!

Rameshwaram Cafe Blast

Rameshwaram Cafe Blast: Accused Possibly Getting Foreign Funding Through Crypto

ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮುಸಾವೀರ್‌ ಹುಸೇನ್‌ ಶಾಜಿಬ್‌ನೇ (Mussavir Hussain Shazib) ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಇಟ್ಟಿದ್ದು ಎಂದು ಎನ್‌ಐಎ ತಿಳಿಸಿದ ಬೆನ್ನಲ್ಲೇ, ಸ್ಫೋಟದ ಆರೋಪಿಗೆ ವಿದೇಶದಿಂದ ಹಣ (Foreign Funds) ಹರಿದುಬಂದಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಇದು ಈಗ ಭಾರಿ ಸಂಚಲನ ಮೂಡಿಸಿದೆ.

“ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಲು ಆರೋಪಿಗಳಿಗೆ ವಿದೇಶದಿಂದ ಹಣ ಸಂದಾಯವಾಗಿದೆ. ಕ್ರಿಪ್ರೋಕರೆನ್ಸಿ ಮೂಲಕ ಇವರಿಗೆ ಹಣ ಸಂದಾಯವಾಗಿದೆ. ದೇವಾಲಯಗಳನ್ನು ಗುರಿಯಾಗಿಸದೆ, ಹೋಟೆಲ್‌ಗಳಲ್ಲಿ ಬಾಂಬ್‌ ಸ್ಫೋಟಿಸಿ, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಬೇಕು ಎಂಬುದು ಇವರ ಉದ್ದೇಶವಾಗಿತ್ತು. ಹಾಗಾಗಿ, ಇವರಿಗೆ ವಿದೇಶಿ ಹ್ಯಾಂಡ್ಲರ್‌ಗಳು ಕ್ರಿಪ್ಟೋ ಮೂಲಕ ಹಣ ಸಂದಾಯ ಮಾಡಿದ್ದಾರೆ. ಈಗಲೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದರೆ, ಅದಕ್ಕೆ ವಿದೇಶಿ ಹಣ ರವಾನೆಯಾಗಿರುವುದೇ ಕಾರಣ” ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಮುಸಾವೀರ್‌ ಹುಸೇನ್‌ ಶಾಜಿಬ್‌ ಬಾಂಬಿಟ್ಟವನು ಎಂಬುದಾಗಿ ತನಿಖೆಯಿಂದ ಗೊತ್ತಾಗಿದೆ. ಅಬ್ದುಲ್‌ ಮಥೀನ್‌ ತಾಹಾ ಎಂಬುವನು ಕೂಡ ಪ್ರಕರಣದಲ್ಲಿ ಪ್ರಮುಖ ಪಿತೂರಿದಾರನಾಗಿದ್ದಾನೆ. ಮುಜಾಮಿಲ್‌ ಷರೀಫ್‌ನು ಬಾಂಬ್‌ ತಯಾರಿಸಲು ಇವರಿಗೆ ಹಲವು ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮುಜಾಮಿಲ್‌ ಷರೀಫ್‌ನನ್ನು ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಮುಸಾವೀರ್‌ ಹುಸೇನ್‌ ಶಾಜಿಬ್‌ ಹಾಗೂ ಈತನಿಗೆ ನೆರವು ನೀಡಿದ ಅಬ್ದುಲ್‌ ಮಥೀನ್‌ ತಾಹಾ ತಲೆಮರೆಸಿಕೊಂಡಿದ್ದು, ಇವರಿಗಾಗಿ ಬಲೆ ಬೀಸಲಾಗಿದೆ.

ಮಾರ್ಚ್‌ 1 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಮತ್ತೊಂದೆಡೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಿಂದು ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ಎನ್‌ಐಎ ವಶಕ್ಕೆ ಪಡೆದು, ಇಬ್ಬರನ್ನೂ ಪ್ರಕರಣದ ಸಾಕ್ಷಿಗಳನ್ನಾಗಿ ಮಾಡಲು ವಿಚಾರಣೆ ನಡೆಸಲಾಗಿದೆ. ಕಳೆದ 10 ದಿನಗಳ ಹಿಂದೆ ಮೊಬೈಲ್‌ ಅಂಗಡಿಯ ಇಬ್ಬರು ಯುವಕರನ್ನು ಎನ್‌ಐಎ ವಿಚಾರಣೆ ನಡೆಸಿತ್ತು. ಇದೀಗ ಅವರ ಜತೆ ಸಂಪರ್ಕ ಇದ್ದ ಕಾರಣಕ್ಕೆ ಹಿಂದು ಕಾರ್ಯಕರ್ತನನ್ನೂ ವಿಚಾರಣೆಗೆ ಒಳಪಡಿಸಿರಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ; 6 ಸಾವಿರ ರೂ. ವ್ಯಯಿಸಿ ಬಾಂಬ್‌ ತಯಾರಿ, ಆನ್‌ಲೈನ್‌ನಲ್ಲೇ ಖರೀದಿ!

Exit mobile version