Site icon Vistara News

Blast In Bengaluru: ರಾಮೇಶ್ವರಂ ಕೆಫೆ ಸ್ಫೋಟ; ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ!

Blast in Bengaluru

Rameshwaram Cafe Blast In Bengaluru: NIA Nabs 2 More Suspects

ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಲಾಗಿದ್ದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ವಶಪಡಿಸಿಕೊಂಡಿರುವ ಶಂಕಿತರ ಜತೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಹಾಗೂ ಹಳೆಯ ಪ್ರಕರಣಗಳ ನಡುವೆ ಸಾಮ್ಯತೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಹಳೆಯ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಎನ್‌ಐಎ ನಿಗಾ ಇರಿಸಿದೆ. ಈಗಾಗಲೇ ಜೈಲಿನಲ್ಲಿರುವ ಕೆಲ ಕೈದಿಗಳನ್ನು ಕೂಡ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ, ಮತ್ತಿಬ್ಬರು ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಶಂಕಿತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವು ನೀಡಿದವರ ಮೇಲೆ ಎನ್ಐಎ ಕಣ್ಣಿರಿಸಿದೆ. ಅನುಮಾನಾಸ್ಪದ ವ್ಯಕ್ತಿಗಳಿಂದ ಸ್ಫೋಟ ನಡೆಸಿದವರ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇರುವುದರಿಂದ ಶಂಕಿತರ ಬಂಧನಕ್ಕೆ ಎನ್‌ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ. ಮೊಬೈಲ್ ಕರೆಗಳು, ವಾಟ್ಸ್‌ಆ್ಯಪ್‌ ಚಾಟಿಂಗ್ ಸೇರಿ ಹಲವು ವಿಚಾರಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ನಿಷೇಧಿತ ಅಲ್ ಹಿಂದ್ ಟ್ರಸ್ಟ್‌ನಲ್ಲಿ ಈ ಹಿಂದೆ ಭಾಗಿಯಾಗಿದ್ದ ಇಬ್ಬರನ್ನು ಎನ್‌ಐಎ ವಶಪಡಿಸಿಕೊಂಡಿದೆ. ಈ ಮತ್ತಿಬ್ಬರನ್ನು ಬಲೆಗೆ ಕೆಡವಿದೆ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌; ಭಟ್ಕಳದ ಶಂಕಿತ ಉಗ್ರನ ಪುತ್ರನಿಗೆ ಎನ್‌ಐಎ ನೋಟಿಸ್‌

ಐದು ಕಡೆ ಎನ್‌ಐಎ ದಾಳಿ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತ ತೀರ್ಥಹಳ್ಳಿಯ 5ಕ್ಕೂ ಹೆಚ್ಚು ಕಡೆ ಎನ್‌ಐಎ ತಂಡ ದಾಳಿ ಮಾಡಿ ಪರಿಶೀಲಿಸಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳಾದ ಶಾರೀಕ್, ಮಾಜ್ ಮುನೀರ್ ಮನೆ ಮೇಲೆ ದಾಳಿ ನಡೆಸಿದ್ದು, ಜತೆಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಕಾರ್ಯಕರ್ತರ ಮನೆ ಮೇಲೂ ದಾಳಿ ನಡೆದಿದೆ. ಪಿಎಫ್‌ಐ ಸಂಘಟನೆಯಲ್ಲಿ ಭಾಗಿಯಾಗಿದ್ದ ಶಂಕೆ ಮೇರೆಗೆ ವ್ಯಕ್ತಿಯೊಬ್ಬರ ಶಾಪ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ.

ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ , ತೀರ್ಥಹಳ್ಳಿ, ತಮಿಳುನಾಡಿನ ಚೆನ್ನೈನಲ್ಲಿ ದಾಳಿ ನಡೆಸಲಾಗಿದೆ. ಚೆನ್ನೈಯ ಲಾಡ್ಜ್‌ನಲ್ಲಿ ಶಂಕಿತ ಬಾಂಬರ್ ಹಲವಾರು ದಿನಗಳ ಕಾಲ ಉಳಿದುಕೊಂಡಿದ್ದ. ಈ‌ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಮೂರು‌ ಕಡೆ ಎನ್ಐಎ ದಾಳಿ ನಡೆಸಿ ಪರಿಶೀಲಿಸಿದೆ. ಶಿವಮೊಗ್ಗದ ಸೊಪ್ಪುಗುಡ್ಡೆ, ತೀರ್ಥಹಳ್ಳಿ,ಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿರುವ ಎನ್ಐಎ ಅಧಕಾರಿಗಳು ಶಂಕಿತರ ಮನೆಗಳಲ್ಲಿ ಬೆಳ್ಳಂಬೆಳಗ್ಗೆ ಶೋಧಿಸಿದರು. ಶಂಕಿತರಾದ ಅಬ್ದುಲ್ ಮತಿನ್ ತಾಹ, ಮುಸಾವಿರ್ ಹುಸೇನ್ ಶಾಹೀಜ್ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version