ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಮಾತನ್ನು ದೆಹಲಿಯಲ್ಲೂ ಕಾಂಗ್ರೆಸ್ ಪ್ರತಿಧ್ವನಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಒಟ್ಟು 7 ಪ್ರಶ್ನೆಗಳನ್ನು ಕೇಂದ್ರದ ಮೋದಿ ಸರ್ಕಾರ ಹಾಗೂ ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಆರೋಪಿಸುವ ಜೆಡಿಎಸ್‌ಗೆ ಕೇಳಿದ್ದಾರೆ.
- ತಮ್ಮ ಸೋಲಿನಿಂದ ಪ್ರಧಾನಿ ಮತ್ತು ಬಿಜೆಪಿಯವರು ಬಡವರಿಗೆ ಆಹಾರ ಧಾನ್ಯವನ್ನು ನೀಡದಷ್ಟು ಕುರುಡರಾಗಬಹುದೇ?
- ಎಫ್‌ಸಿಐಗೆ ‘ಮುಕ್ತ ಮಾರುಕಟ್ಟೆಯಲ್ಲಿ’ ಅಕ್ಕಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುಮತಿ ಇದೆ. ಆದರೆ ಸರಿಯಾದ ಬೆಲೆ ಪಾವತಿ ಮಾಡಿದರು ಸಹ ನಿರ್ದಿಷ್ಟ ಬೆಲೆಗೆ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಏಕೆ ನಿಷೇಧಿಸಲಾಗಿದೆ? ಬಿಪಿಎಲ್ ಕುಟುಂಬಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಉಚಿತ ಅಕ್ಕಿ ನೀಡುವುದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಡೆಯಬೇಕು ಎಂಬ ಒಂದೇ ಕಾರಣಕ್ಕವಲ್ಲವೇ?
- ಇದೊಂದು ಕಾಕತಾಳೀಯವೇ?.. ಕಾಂಗ್ರೆಸ್ ಸರ್ಕಾರ ಬಡವರಿಗೆ ಅಕ್ಕಿಯನ್ನು ನೀಡಲು ಎಫ್‌ಸಿಐ ಬಳಿ ಕೇಳಿತ್ತು, ಇದಾದ ಬಳಿಕ ಮರುದಿನವೇ, ಮೋದಿ ಸರ್ಕಾರವು ಎಫ್‌ಸಿಐ ಅಕ್ಕಿಯನ್ನು ರಾಜ್ಯಗಳಿಗೆ ಮಾರಾಟ ಮಾಡಬಾರದು ಎಂದು ಹೇಳಿದೆ, ಆದ್ರೆ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು ಎಂದಿದೆ. ಇದು ‘ಮುಕ್ತ ಮಾರುಕಟ್ಟೆಯೇ’?
- ಬಡವರಿಗೆ ಅಕ್ಕಿಯನ್ನು ನೀಡುವುದನ್ನ ನಿರಾಕರಿಸುವ ಮೂಲಕ ಮೋದಿ ಸರ್ಕಾರ ಮತ್ತು ಬಿಜೆಪಿಯಿಂದ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ದೊಡ್ಡ ವ್ಯಾಪಾರಿಗಳ ಕಾರ್ಟೆಲ್ ಯಾವುದು?
- ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಈ ನಿರ್ಲಜ್ಜ ತಾರತಮ್ಯ ಮತ್ತು ಅಕ್ಕಿ ನಿರಾಕರಣೆಯ ಬಗ್ಗೆ ಕರ್ನಾಟಕದ ಕೇಂದ್ರ ಸಚಿವರು ಮತ್ತು ಎಂಪಿಗಳು ಏಕೆ ಮೌನ ಆಗಿದ್ದಾರೆ? ಮಂತ್ರಿಗಳು ಮತ್ತು ಸಂಸದರಾಗಿ ಕೆಲಸ ಮಾಡಲು ನೈತಿಕತೆ ಇದೆಯೇ? 6.5 ಕೋಟಿ ಕನ್ನಡಿಗರಿಗೆ ದ್ರೋಹ ಬಗೆದ ಅವರು ತಕ್ಷಣ ಏಕೆ ರಾಜೀನಾಮೆ ನೀಡಬಾರದು?
- ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಉಚಿತ ಅಕ್ಕಿ ನಿರಾಕರಣೆ ಕುರಿತು ರಾಜ್ಯ ಬಿಜೆಪಿ ಏಕೆ ಬಾಯಿಗೆ ಟೇಪ್ ಹಾಕಿ ಕುಳಿತಿದೆ? ಅವರ ಮೌನದ ಅರ್ಥವೇನು?
- ಮೋದಿ ಸರ್ಕಾರದ ಈ ಬಡವರ ವಿರೋಧಿ ಮತ್ತು ಕರ್ನಾಟಕ ವಿರೋಧಿ ನೀತಿ ನಿರ್ಧಾರದ ಬಗ್ಗೆ ಬಿಜೆಪಿಯ “ಬಿ ಟೀಮ್”, JD (S) ಏಕೆ ಮೌನವಾಗಿದೆ?