ಬೆಂಗಳೂರು: ಮುಸ್ಲಿಂ ಮೀಸಲಾತಿ (Muslim Reservation) ರದ್ದುಪಡಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುರ್ಜೆವಾಲ, ಬಿಜೆಪಿ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕೇಳಿದ್ದಾರೆ.
ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹಾಗೂ ಎಸ್‌ಸಿಎಸ್‌ಟಿ ಸಮುದಾಯಕ್ಕೆ ಒಳ ಮೀಸಲಾತಿ ಹೆಚ್ಚಳ ಕುರಿತ ತನ್ನ ಆದೇಶ ಕುರಿತು ಬೊಮ್ಮಾಯಿ ಸರ್ಕಾರವು ಅಫಿಡವಿಟ್ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಾಲಯವು ಆ ಆದೇಶಕ್ಕೆ ತಡೆ ನೀಡಿದೆ ಎಂದು ಸುರ್ಜೆವಾಲ ಹೇಳಿದ್ದಾರೆ.
ಮಾನ್ಯ ಬೊಮ್ಮಾಯಿರವರೇ ನಿಮಗೆ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವ ಹಕ್ಕು ಇಲ್ಲ. ಕೂಡಲೇ ರಾಜೀನಾಮೆ ನೀಡಿ. ಪ್ರಧಾನ ಮಂತ್ರಿಗಳೇ ಹಾಗೂ ಗೃಹ ಸಚಿವರೇ ದಯವಿಟ್ಟು ಕೂಡಲೇ ಕರ್ನಾಟಕ ತೊರೆಯಿರಿ.
ಕನ್ನಡಿಗರನ್ನು ವಂಚಿಸಿರುವ ನೀವು ಇತ್ತ ತಿರುಗಿ ನೋಡಬೇಡಿ. ಬಿಜೆಪಿ ಮತ್ತು ಮೋದಿ-ಬೊಮ್ಮಾಯಿ ಡಬಲ್ ಎಂಜಿನ್ ಸರ್ಕಾರಗಳು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದಿದ್ದಾರೆ.
- ಲಿಂಗಾಯತರು, ಒಕ್ಕಲಿಗರು, ಎಸ್‌ಸಿ, ಎಸ್‌ಟಿ ಸಮುದಾಯಗಳ ಜತೆ “ಮೀಸಲಾತಿಯ ವಿಚಾರಗಳಲ್ಲಿ ಏಕೆ ಮೋಸದ ಆಟ ಆಡಿದ್ದೀರಿ?
- ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮದೇ ಮೀಸಲಾತಿ ಆದೇಶವನ್ನು ಏಕೆ ಸಮರ್ಥಿಸಲಿಲ್ಲ?
- ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ವಿಫಲವಾದದ್ದು ಏಕೆ?
- ಮಾರ್ಚ್ 14, 2023 ರಂದು ಸಂಸತ್ತಿನಲ್ಲಿ SC-ST ಮೀಸಲು ಹೆಚ್ಚಳ ಆದೇಶವನ್ನು ಮೋದಿ ಸರ್ಕಾರ ತಿರಸ್ಕರಿಸಿದ್ದು ಯಾಕೆ?
- SC-ST ಮೀಸಲಾತಿ ಹೆಚ್ಚಳ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಏಕೆ ಹಾಕಲಿಲ್ಲ?
- ಎಸ್‌ಸಿ, ಎಸ್‌ಟಿ, ಒಬಿಸಿ, ಲಿಂಗಾಯತರು, ಒಕ್ಕಲಿಗರು ಮತ್ತು ಇತರರ ನಿರೀಕ್ಷೆ ಪೂರೈಸಲು 50% ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ?
- ಧ್ರುವೀಕರಣದ ನೆಪದಲ್ಲಿ ನೀವು ಅಲ್ಪಸಂಖ್ಯಾತರ ಮೀಸಲಾತಿಯನ್ನು ಏಕೆ ಅಲ್ಲಾಡಿಸುತಿದ್ದೀರಿ?
- ಬೊಮ್ಮಾಯಿ ಸರ್ಕಾರವು ತನ್ನದೇ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲಿಲ್ಲ ಏಕೆ?
- ಮೀಸಲಾತಿ ಸಂಬಂಧ ಬಿಜೆಪಿ ಮಾಡಿದ ದ್ರೋಹಕ್ಕಾಗಿ ಪ್ರಧಾನಿ ಮೋದಿ ಅವರು ಎಸ್‌ಸಿ, ಎಸ್‌ಟಿ, ಲಿಂಗಾಯತರು, ಒಕ್ಕಲಿಗರು ಮತ್ತು ಇತರರ ಕ್ಷಮೆ ಯಾಚಿಸುತ್ತಾರೆಯೇ?
ಇದನ್ನೂ ಓದಿ: Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ